ಟೆಂಪೋದಲ್ಲಿ ಮುಂದಿನ ಸೀಟಿಗಾಗಿ ನಡೆದ ಜಗಳ; ತಂದೆಯನ್ನೇ ಗುಂಡಿಕ್ಕಿ ಕೊಂದ ಮಗ! Tempo

Tempo
Published on

Tempo: ಟೆಂಪೋದಲ್ಲಿ ಮುಂದಿನ ಸೀಟಿಗಾಗಿ ನಡೆದ ಜಗಳದಲ್ಲಿ ವ್ಯಕ್ತಿಯೊಬ್ಬ ತನ್ನ ತಂದೆಯನ್ನೇ ಗುಂಡಿಕ್ಕಿ ಕೊಂದ ಘಟನೆ ಉತ್ತರ ದೆಹಲಿಯ ತಿಮಾರ್ಪುರ ಪ್ರದೇಶದಲ್ಲಿ ಶುಕ್ರವಾರ (ಜೂ.27) ನಡೆದಿದೆ.

ಆರೋಪಿಯನ್ನು ದೀಪಕ್ (26) ಎಂದು ಗುರುತಿಸಲಾಗಿದ್ದು, ಆತನನ್ನು ಸ್ಥಳದಿಂದಲೇ ಬಂಧಿಸಲಾಗಿದ್ದು, ಅಪರಾಧಕ್ಕೆ ಬಳಸಲಾದ ಬಂದೂಕು ಮತ್ತು ಗುಂಡುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

ಗುರುವಾರ ಸಂಜೆ 7.30 ರ ಸುಮಾರಿಗೆ ತಿಮಾರ್ಪುರದ ಎಂಎಸ್ ಬ್ಲಾಕ್ ಬಳಿ ಈ ಘಟನೆ ನಡೆದಿದ್ದು, ಗಸ್ತು ತಿರುಗುತ್ತಿದ್ದ ಸಿಬ್ಬಂದಿ ಗುಂಡೇಟಿನ ಶಬ್ದ ಕೇಳಿ ಸ್ಥಳಕ್ಕೆ ಧಾವಿಸಿದ್ದಾರೆ.

ಮೃತರನ್ನು ನಿವೃತ್ತ ಸಬ್-ಇನ್‌ಸ್ಪೆಕ್ಟರ್ 60 ವರ್ಷದ ಸುರೇಂದ್ರ ಸಿಂಗ್ ಎಂದು ಗುರುತಿಸಲಾಗಿದ್ದು, ಅವರನ್ನು ಆಸ್ಪತ್ರೆಗೆ ಸಾಗಿಸಲಾಯಿತು, ಆದರೆ ಅಲ್ಲಿ ಅವರು ಮೃತಪಟ್ಟಿದ್ದಾರೆಂದು ವೈದ್ಯರು ತಿಳಿಸಿದ್ದಾರೆ.

ಆರು ತಿಂಗಳ ಹಿಂದೆ ಸಿಐಎಸ್‌ಎಫ್‌ನಿಂದ ಸುರೇಂದ್ರ ಸಿಂಗ್ ನಿವೃತ್ತರಾದ ನಂತರ ಕುಟುಂಬವು ಉತ್ತರಾಖಂಡದಲ್ಲಿರುವ ತಮ್ಮ ಸ್ಥಳೀಯ ಹಳ್ಳಿಗೆ ಸ್ಥಳಾಂತರಗೊಳ್ಳಲು ತಯಾರಿ ನಡೆಸುತ್ತಿತ್ತು ಎಂದು ಪೊಲೀಸ್​​ ವಿಚಾರಣೆಯಲ್ಲಿ ತಿಳಿದುಬಂದಿದೆ.

ಅವರು ಟೆಂಪೋ ಬಾಡಿಗೆಗೆ ಪಡೆದು ತಮ್ಮ ಸಾಮಾನುಗಳನ್ನು ಲೋಡ್ ಮಾಡುತ್ತಿದ್ದಾಗ, ಮುಂದಿನ ಸೀಟಿನಲ್ಲಿ ಯಾರು ಕುಳಿತುಕೊಳ್ಳಬೇಕು ಎಂಬ ಬಗ್ಗೆ ಸುರೇಂದ್ರ ಮತ್ತು ದೀಪಕ್ ನಡುವೆ ವಾಗ್ವಾದ ನಡೆಯಿತು ಎಂದು ವರದಿ ತಿಳಿಸಿವೆ.

ಲೋಡ್ ಮಾಡಲಾದ ವಸ್ತುಗಳ ಕಾರಣದಿಂದಾಗಿ ಸುರೇಂದ್ರ ಮುಂದಿನ ಸೀಟಿನಲ್ಲಿ ಕುಳಿತುಕೊಳ್ಳಲು ಒತ್ತಾಯಿಸಿದಾಗ, ದೀಪಕ್ ಕೋಪಗೊಂಡು ತನ್ನ ತಂದೆಯ ಲೈಸೆನ್ಸ್​​ ಪಡೆದ ಬಂದೂಕನ್ನು ತೆಗೆದುಕೊಂಡು, ಅವರ ಮೇಲೆ ಗುಂಡು ಹಾರಿಸಿದನೆಂದು ಪೊಲೀಸರು ಹೇಳಿದ್ದಾರೆ.

ಪ್ರಕರಣ ದಾಖಲಿಸಲಾಗಿದ್ದು, ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net