ಜನತಾ ನ್ಯಾಯಾಲಯದಲ್ಲಿ ಜಂಗಿಕುಸ್ತಿ: ಅರಮನೆ ನಗರಿಯಲ್ಲಿ ಕೈ ಜನಾಂದೋಲನ, ಇಂದು ದೋಸ್ತಿ ಪಾದಯಾತ್ರೆ ಸಮಾರೋಪ

ವಿಜಯವಾಣಿ ಸುದ್ದಿಜಾಲ ಬೆಂಗಳೂರು

ಆಡಳಿತಾರೂಢ ಕಾಂಗ್ರೆಸ್ ಪಕ್ಷ ಶುಕ್ರವಾರ ಒಂದು ಲಕ್ಷಕ್ಕೂ ಹೆಚ್ಚು ಜನರನ್ನು ಸೇರಿಸಿ ಪ್ರತಿಪಕ್ಷಗಳ ಅಬ್ಬರಿಸಿದ ಬೆನ್ನಲ್ಲೇ ಬಿಜೆಪಿ-ಜೆಡಿಎಸ್ ಮೈತ್ರಿ ಪಕ್ಷಗಳು ಶನಿವಾರ ಕಾಂಗ್ರೆಸ್ ಪಕ್ಷದ ಸರ್ಕಾರ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಮುಗಿಬೀಳಲು ಸಜ್ಜಾಗಿವೆ. ಮೂರೂ ರಾಜಕೀಯ ಪಕ್ಷಗಳ ಕಾದಾಟ, ಮೇಲಾಟಕ್ಕೆ ಮೈಸೂರಿನ ಮಹಾರಾಜ ಕಾಲೇಜು ಮೈದಾನ ಸಾಕ್ಷಿಯಾಗುತ್ತಿರುವುದು ವಿಶೇಷ.

ದೋಸ್ತಿ ಪಾದಯಾತ್ರೆಗೆ ಪ್ರತಿಯಾಗಿ ಕಾಂಗ್ರೆಸ್ ರೂಪಿಸಿದ ಜನಾಂದೋಲನವು ಆಡಳಿತ-ಪ್ರತಿಪಕ್ಷಗಳ ‘ಜನಬಲ ಪ್ರದರ್ಶನ’ದ ಅಖಾಡವಾಗಿ ಮಾರ್ಪಟ್ಟು, ಚುನಾವಣಾ ಸಮರಪೂರ್ವ ವಾತಾವರಣವನ್ನೂ ಮರುಸೃಷ್ಟಿಸಿದೆ. ದೋಸ್ತಿಗಳ ಪಾದಯಾತ್ರೆ, ಬಹಿರಂಗ ಸಭೆಗಳಿಗೆ ಒಂದು ದಿನ ಮುಂಚಿತವಾಗಿ ಆಡಳಿತ ಕಾಂಗ್ರೆಸ್ ಪಕ್ಷ ಜನಾಂದೋಲನ ಸಭೆಗಳನ್ನು ಬೆಂಗಳೂರು-ಮೈಸೂರು ಮಾರ್ಗದಲ್ಲಿ ಹಮ್ಮಿಕೊಂಡಿತ್ತು. ಜನಾಂದೋಲನ ಸಮಾವೇಶ ಶುಕ್ರವಾರ ಮುಕ್ತಾಯವಾಗಿದೆ. ಬಿಜೆಪಿ-ಜೆಡಿಎಸ್​ನ ಒಂದು ವಾರದ ಪಾದಯಾತ್ರೆಗೆ ಶನಿವಾರ ತೆರೆ ಬೀಳಲಿದೆ.

ಅನಾವರಣ, ವಾಕ್ಸಮರ: ಮೂರು ಪಕ್ಷಗಳ ಪರಸ್ಪರ ದೋಷಾರೋಪ, ನಾಯಕರ ವಾಕ್ಸಮರವು ಜನರ ಗಮನಸೆಳೆದಿವೆ. ಎಚ್.ಡಿ.ಕುಮಾರಸ್ವಾಮಿ- ಡಿ.ಕೆ.ಶಿವಕುಮಾರ್ ನಡುವಿನ ಏಕವಚನದ ಬೈಗುಳವು ರಾಜಕೀಯ ನಾಯಕರಿಗೆ ಕಸಿವಿಸಿ, ವಿಷಯ ಹಳಿ ತಪ್ಪಲಿದೆ ಎಂಬ ಆತಂಕವನ್ನೂ ಹುಟ್ಟಿಹಾಕಿತು. ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ‘ಶಕ್ತ್ಯಾನುಸಾರ’ ತಮ್ಮ ಹುಳುಕುಗಳನ್ನು ತೆರೆದಿಟ್ಟಿದ್ದಾರೆ. ಪರಸ್ಪರ ಆರೋಪಗಳಲ್ಲಿ ಸತ್ಯ-ಮಿಥ್ಯ ಎಷ್ಟೆಂಬುದು ವಿವಿಧ ಸಂಸ್ಥೆಗಳ ಕೈಗೆತ್ತಿಕೊಂಡಿರುವ ತನಿಖಾ ವರದಿ ಬಯಲಾದ ನಂತರವೇ ಗೊತ್ತಾಗಲಿದೆ. ಆದರೆ ವಿಧಾನಮಂಡಲದಲ್ಲಿ ದಾಖಲೆಗಳ ಸಹಿತ ಉತ್ತರಿಸಲು, ತಿರುಗೇಟು ನೀಡಲು ಆಡಳಿತ ಪಕ್ಷಕ್ಕೆ ಅವಕಾಶವಿದ್ದರೂ ‘ಜನತಾ ನ್ಯಾಯಾಲಯ’ ಆಯ್ಕೆ ಮಾಡಿಕೊಂಡಿತು. ಹೊಂದಾಣಿಕೆ ರಾಜಕೀಯ ನಿರಾಕರಿಸಲು ಪ್ರತಿಪಕ್ಷಗಳು ಚಳವಳಿ ಹಮ್ಮಿಕೊಂಡಿವೆ ಎಂದು ಜನರು ಅರ್ಥೈಸಿಕೊಂಡಿದ್ದಾರೆ.

ಜನತಾ ನ್ಯಾಯಾಲಯದಲ್ಲಿ ಜಂಗಿಕುಸ್ತಿ: ಅರಮನೆ ನಗರಿಯಲ್ಲಿ ಕೈ ಜನಾಂದೋಲನ, ಇಂದು ದೋಸ್ತಿ ಪಾದಯಾತ್ರೆ ಸಮಾರೋಪ

ಜನರಿಗೇನು ಸಂದೇಶ?: ಕೇಂದ್ರ ಸರ್ಕಾರದಿಂದ ಕರ್ನಾಟಕಕ್ಕೆ ಆಗಿರುವ ಅನ್ಯಾಯ, ಕೇಂದ್ರದ ಮಲತಾಯಿ ಧೋರಣೆ ವಿರುದ್ಧ ಮೈಸೂರಿನಲ್ಲಿ ಜನಾಂದೋಲನ ಸಮಾವೇಶ ಹಮ್ಮಿಕೊಂಡಿದ್ದೇವೆ ಎಂದು ಕಾಂಗ್ರೆಸ್ ಪಕ್ಷ ಹೇಳಿತ್ತು. ಆದರೆ ಸಮಾವೇಶದಲ್ಲಿ ಮಾತನಾಡಿದ ಸಿಎಂ, ಡಿಸಿಎಂ ಆದಿಯಾಗಿ ಎಲ್ಲರೂ ಬಿಜೆಪಿ, ಜೆಡಿಎಸ್ ವಿರುದ್ಧವೇ ಹರಿಹಾಯ್ದು, ಮುಡಾ, ವಾಲ್ಮೀಕಿ ನಿಗಮದ ಹಗರಣದ ಆರೋಪಗಳಲ್ಲಿ ಹುರುಳಿಲ್ಲವೆಂದು ತಳ್ಳಿಹಾಕಿದರು. ಲೋಪದೋಷಗಳಿದ್ದರೆ ಸರಿಪಡಿಸಿಕೊಳ್ಳಲು ಆಡಳಿತ ಪಕ್ಷಕ್ಕೆ ಮೂರುವರೆ ವರ್ಷಗಳ ಕಾಲಾವಕಾಶವಿದೆ. ಆದರೆ ಕ್ರಿಯೆಗೆ ಪ್ರತಿಕ್ರಿಯೆ ರೂಪದಲ್ಲಿ ಆತುರಾತುರವಾಗಿ ಜನಾಂದೋಲನ ಸಭೆಗಳನ್ನು ಹಮ್ಮಿಕೊಂಡದ್ದು ದೋಸ್ತಿ ಯಾತ್ರೆಗೆ ಕಂಪಿಸಿದೆ ಎಂಬ ಸಂದೇಶ ರವಾನಿಸಿದೆ. ಜನಾಂದೋಲನ ಸಮಾವೇಶದಲ್ಲಿ ವಿವಿಧ ತನಿಖಾ ಹಂತದ ಬಿಜೆಪಿ-ಜೆಡಿಎಸ್ ಹಗರಣಗಳನ್ನು ಮರು ಕಾಂಗ್ರೆಸ್ ಮರು ಪ್ರಸ್ತಾಪಿಸಿತು. ಇದು, ಪ್ರತಿಪಕ್ಷಗಳತ್ತಲೂ ಸಂಶಯಾತ್ಮಕ ಸಂದೇಶವನ್ನು ಜನರಿಗೆ ರವಾನಿಸಿದೆ.

ತಾಳಮೇಳ

  • ಮುಡಾ ಅಕ್ರಮದ ದಾಖಲೆಗಳನ್ನು ಕೊಟ್ಟಿದ್ದೇ ತಾವು ಎಂಬ ದಳಪತಿ ಆರೋಪ, ಅಪನಂಬಿಕೆ ನಿವಾರಣೆಗೆ ಡಿಸಿಎಂ ಡಿ.ಕೆ.ಶಿವಕುಮಾರ್ ತರಾತುರಿಯಲ್ಲಿ ಜನಾಂದೋಲನ ಆಯೋಜನೆ. ಸಿಎಂ ಮತ್ತವರ ಪತ್ನಿ ಬಗ್ಗೆ ಭಾವೋದ್ವೇಗದ ಭಾಷಣ, ಸಿದ್ದರಾಮಯ್ಯ ಮತ್ತು ತಮ್ಮ ನಡುವೆ ಸಂಬಂಧ ಗಟ್ಟಿ, ಪರಸ್ಪರ ವಿಶ್ವಾಸಭರಿತವೆಂದು ಸಾರಲು ಸಮಾರೋಪದ ವೇದಿಕೆ ಬಳಕೆ.
  • ಬಿಜೆಪಿ-ಜೆಡಿಎಸ್ ಸಮನ್ವಯ ಸಭೆಯಲ್ಲಿ ‘ಮೈಸೂರು ಚಲೋ’ ಜಂಟಿ ಪಾದಯಾತ್ರೆಗೆ ಒಪ್ಪಿ, ನಂತರ ಸಿಡಿದೆದ್ದ ಎಚ್.ಡಿ.ಕುಮಾರಸ್ವಾಮಿ ಮನವೊಲಿಕೆ. ಸಮ್ಮತಿಸದಿದ್ದರೂ ಬಿಜೆಪಿ ಹಿಂದೆ ಸರಿಯದು ಎಂದು ಅರಿತು ಸಕ್ರಿಯವಾಗಿ ಭಾಗಿ. ಕೇಸರಿ ಮತ್ತು ಹಸಿರು ಪಡೆಗಳ ಅತ್ಯುತ್ಸಾಹ, ತಮ್ಮ ತಮ್ಮ ನಾಯಕರನ್ನು ಮೆರೆಸಲು ಪೈಪೋಟಿಯಿಂದ ಜನಸಾಗರವನ್ನು ಕಾಲ್ನಡಿಗೆ ಸೆಳೆಯಿತು.

ಜನಾಂದೋಲನ ಝುಲಕ್

  • ಪಾದಯಾತ್ರೆಗಳ ಪ್ರಭಾವ, ಫಲ ಕಂಡ ಕಾಂಗ್ರೆಸ್​ನಿಂದ ಹಠಾತ್ ಜನಾಂದೋಲನ ಸಮಾವೇಶ. ಪ್ರತಿಪಕ್ಷಗಳತ್ತಲೇ ಆರೋಪಗಳನ್ನು ತಿರುಗಿಸಿ, ಜನರ ಗಮನಸೆಳೆಯಲು ಯತ್ನ
  • ಬಿಜೆಪಿ ವಿರುದ್ಧ ದೇವೇಗೌಡ, ಕುಮಾರಸ್ವಾಮಿ, ಜೆಡಿಎಸ್ ವಿರುದ್ಧ ಬಿಎಸ್​ವೈ ಭಾಷಣದ ವಿಡಿಯೋ ಪ್ರದರ್ಶನ, ‘ಸಂಚು’ ಪುಸ್ತಕ ಬಿಡುಗಡೆ. ಸಿದ್ದರಾಮಯ್ಯ ನಿಷ್ಕಳಂಕರೆಂದು ಸಾರುವುದಕ್ಕೆ ಒತ್ತು.

ಪಾದಯಾತ್ರೆ ಪಂಚ್

  • ಸಿದ್ದರಾಮಯ್ಯ ಪ್ರಶ್ನಾತೀತ ನಾಯಕ ಎಂಬುದನ್ನು ಭಗ್ನಗೊಳಿಸುವ ಪ್ರಯತ್ನ, ಕಾಲ್ನಡಿಗೆಯುದ್ದಕ್ಕೂ ಎರಡು ಹಗರಣಗಳದ್ದೇ ಮಾತು, ಸಿಎಂ ‘ಕ್ಲೀನ್ ಇಮೇಜ್’ಗೆ ಮುಡಾ ನಿವೇಶನಗಳ ಅಕ್ರಮದ ಕಳಂಕ ಅಂಟಿಸುವ ಕಸರತ್ತು.
  • ಸೇರಿಗೆ ಸವ್ವಾ ಸೇರು ರೀತಿಯಲ್ಲಿ ‘ಕಾಂಗ್ರೆಸ್ ಕಾಲದ ಹಗರಣಗಳು’ ಪುಸ್ತಕ ಬಿಡುಗಡೆ, ಇಂಚಿಂಚು ಮಾಹಿತಿ, ಸಾಲು ಸಾಲು ಪ್ರಶ್ನೆ ಎತ್ತಿ ಭ್ರಷ್ಟಾಚಾರ ಮುಕ್ತ ಆಡಳಿತ ಕೊಡುತ್ತೇವೆಂದವರ ಅಸಲಿ ಮುಖ ಬಯಲು.

ಮೈತ್ರಿ ವಿರುದ್ಧ ಕೈ ರಣಕೇಕೆ: ಅಕ್ರಮವೇ ಆಗಿಲ್ಲವೆಂದ ಸಿಎಂ ಸಿದ್ದರಾಮಯ್ಯ

ಮೈಸೂರು: ಮುಡಾ ಹಗರಣ ಹಾಗೂ ವಾಲ್ಮೀಕಿ ನಿಗಮದ ಅಕ್ರಮದಲ್ಲಿ ಸಿದ್ದರಾಮಯ್ಯ ಪಾತ್ರವಿದೆ, ಅವರು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಕೊಡಬೇಕೆಂದು ಬಿಜೆಪಿ- ಜೆಡಿಎಸ್ ಹಮ್ಮಿಕೊಂಡ ಪಾದಯಾತ್ರೆ ವಿರುದ್ಧ ಕಾಂಗ್ರೆಸ್ ನಡೆಸಿದ ‘ಜನಾಂದೋಲನ’ ಶುಕ್ರವಾರ ಮೈಸೂರಿನಲ್ಲಿ ಅಬ್ಬರಿಸಿ ಸಂಪನ್ನಗೊಂಡಿತು.

ಜನತಾ ನ್ಯಾಯಾಲಯದಲ್ಲಿ ಜಂಗಿಕುಸ್ತಿ: ಅರಮನೆ ನಗರಿಯಲ್ಲಿ ಕೈ ಜನಾಂದೋಲನ, ಇಂದು ದೋಸ್ತಿ ಪಾದಯಾತ್ರೆ ಸಮಾರೋಪ

ಇಡೀ ಮಂತ್ರಿ ಮಂಡಲ ಹಾಗೂ ಆಡಳಿತ ಪಕ್ಷ ಸಿದ್ದರಾಮಯ್ಯ ಬೆನ್ನಿಗೆ ನಿಂತಿರುವ ಸಂದೇಶ ಈ ವೇದಿಕೆ ಮೂಲಕ ಕಳಿಸಿದ್ದಲ್ಲದೇ, ಪ್ರತಿಪಕ್ಷಗಳ ವಿರುದ್ಧ ಶಕ್ತಿಪ್ರದರ್ಶನವಾಗಿಯೂಕಾಣಿಸಿತು. ಒಟ್ಟಾಗಿ ಗಮನಿಸಿದರೆ ಐದಂಶಗಳು ಎದ್ದು ಕಾಣಿಸಿತು. ‘ಮುಡಾ ಹಗರಣವೇ ಅಲ್ಲ, ವಾಲ್ಮೀಕಿ ನಿಗಮದಲ್ಲಿ ನಡೆದದ್ದಕ್ಕೂ ಸರ್ಕಾರಕ್ಕೂ ಸಂಬಂಧವೇ ಇಲ್ಲ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸಮಜಾಯಿಷಿನೀಡಲು ಪ್ರಯತ್ನಿಸಿದರೆ, ‘ಈ ಬಂಡೆ ಸಿದ್ದರಾಮಯ್ಯನ ಜತೆ ಇದೆ. ಈ ಬಂಡೆ ಜತೆ 135 ಶಾಸಕರೂ ಇದ್ದಾರೆ. ಕೋಟ್ಯಂತರ ಜನ ಸಿದ್ದರಾಮಯ್ಯನವರಜತೆಗಿದ್ದಾರೆ. ನಿಮ್ಮಿಂದ ಏನೂ ಮಾಡಲು ಸಾಧ್ಯವಿಲ್ಲ’ ಎಂದು ಡಿ.ಕೆ.ಶಿವಕುಮಾರ್ ಗುಡುಗಿದರು. ಇದಿಷ್ಟೇ ಅಲ್ಲದೇ ಸಂಪುಟ ಸದಸ್ಯರೆಲ್ಲರೂ ವೇದಿಕೆಯಿಂದ ಸಿದ್ದರಾಮಯ್ಯಗೆ ಬೆಂಬಲ ವ್ಯಕ್ತಪಡಿಸಿದರು ಮತ್ತು ಬಿಜೆಪಿ- ಜೆಡಿಎಸ್​ನದ್ದು ರಾಜಕೀಯ ಆರೋಪ, ಸರ್ಕಾರ ಅಸ್ಥಿರಗೊಳಿಸುವ ಪ್ರಯತ್ನ ಎಂದು ಮುಗಿಬಿದ್ದರು.

ಜತೆಗೆ, ಕುಮಾರಸ್ವಾಮಿ ಹಾಗೂ ಬಿಜೆಪಿ ನಾಯಕರು ಈ ಹಿಂದಿನ ರಾಜಕೀಯ ಬೆಳವಣಿಗೆಯಲ್ಲಿ ಪರಸ್ಪರ ಆರೋಪ ಪ್ರತ್ಯಾರೋಪ ಮಾಡಿದ ವಿಡಿಯೋವನ್ನು ವೇದಿಕೆಯಲ್ಲಿ ಪ್ರದರ್ಶಿಸಲಾಯಿತು. ಮುಡಾ ಹಾಗೂ ವಾಲ್ಮೀಕಿ ನಿಗಮದಲ್ಲಿ ಹಗರಣ ನಡೆದಿಲ್ಲ ಎಂದು ಹೊತ್ತಿಗೆಯನ್ನು ಹೊರತರಲಾಯಿತು.

ಸಿದ್ದು-ಗುದ್ದು

* ಮನುವಾದಿಗಳು, ಜಾತಿವಾದಿಗಳು ಯಾವತ್ತೂ ಕೂಡ ಶೋಷಿತರು ಅಧಿಕಾರ ನಡೆಸುವುದನ್ನು ಸಹಿಸುವುದಿಲ್ಲ ದೇವರಾಜ ಅರಸು, ಬಂಗಾರಪ್ಪ ಅವರನ್ನೂ ಇವರು ಸಹಿಸಲಿಲ್ಲ. ಈಗ ನನ್ನನ್ನೂ ಸಹಿಸುತ್ತಿಲ್ಲ.

* ಬಿಜೆಪಿ, ಜೆಡಿಎಸ್ ಒಟ್ಟಾಗಿ ಎಷ್ಟೇ ಪಾದಯಾತ್ರೆ ನಡೆಸಿದರೂ ನಾನು ಜಗ್ಗಲ್ಲ, ಬಗ್ಗಲ್ಲ. ಜನರ ಆಶೀರ್ವಾದ ನನ್ನ ಮೇಲೆ ಇರುತ್ತದೋ ಅಲ್ಲಿಯವರೆಗೂ ನನ್ನನ್ನು ಯಾವ ಪಾದಯಾತ್ರೆಗಳೂ ಅಲುಗಾಡಿಸಲು ಸಾಧ್ಯವಿಲ್ಲ.

* ವಾಲ್ಮೀಕಿ ನಿಗಮದ ಪ್ರಕರಣದಲ್ಲೂ ಸರ್ಕಾರದ ಮೇಲೆ ಸುಳ್ಳು ಆರೋಪ ಹೊರಿಸಲು ಯತ್ನಿಸಿ ಸೋತರು. ಹಗರಣವೇ ಅಲ್ಲದ ಮೂಡಾ ಪ್ರಕರಣಕ್ಕೆ ಹಗರಣದ ಬಣ್ಣ ಕೊಟ್ಟರು. ನನ್ನದೊಂದು ಪತ್ರ ಇಲ್ಲ, ನನ್ನದೊಂದು ಸಹಿ ಇಲ್ಲ.

* ಕುಮಾರಸ್ವಾಮಿ, ನಿರಾಣಿ, ಶಶಿಕಲಾ ಜೊಲ್ಲೆ ವಿರುದ್ಧ ಪ್ರಾಸಿಕ್ಯೂಷನ್ ಗೆ ಅನುಮತಿ ಕೇಳಿದರೂ ರಾಜಭವನದಿಂದ ಇದುವರೆಗೂ ನೋಟಿಸ್ ಹೋಗಿಲ್ಲ. ಆದರೆ ನನಗೆ ಮಾತ್ರ ನೋಟಿಸ್ ಬಂದಿದೆ. ಇದು ಪರಮ ದ್ರೋಹ ಅಲ್ಲವೇ?

* ನಾನು ಈ ನೆಲದ ಶೋಷಿತರು, ಶ್ರಮಿಕರು, ಬಡವರು, ದಲಿತರು, ಹಿಂದುಳಿದವರು, ಅಲ್ಪಸಂಖ್ಯಾತರ ಪರವಾಗಿ ಇದ್ದೀನಿ ಎನ್ನುವ ಕಾರಣಕ್ಕೆ ನನ್ನನ್ನು ಕೆಳಗಿಳಿಸುವ ಹುನ್ನಾರ ನಡೆಸುತ್ತಿದ್ದಾರೆ.

ಡಿ.ಕೆ.ಶಿವಕುಮಾರ್ ಅಧ್ಯಕ್ಷತೆಯಲ್ಲಿ ಕಾಂಗ್ರೆಸ್ 136 ಸೀಟು ಗೆದ್ದಿದೆ. ಬ್ರಿಟಿಷರು 200 ವರ್ಷ ಆಳಿದರೂ ಈ ಕಾಂಗ್ರೆಸ್ ಅಳಿಸಲು ಆಗಲಿಲ್ಲ. ನೀನು ಎರಡು ಜನ್ಮ ಎತ್ತಿ ಬಂದರೂ ಅಳಿಸಲು ಸಾಧ್ಯವಿಲ್ಲ.

| ಡಿ.ಕೆ.ಶಿವಕುಮಾರ್

ಕೆಪಿಸಿಸಿ ಅಧ್ಯಕ್ಷ, ಡಿಸಿಎಂ (ಬಿಜೆಪಿ ಅಧ್ಯಕ್ಷ ವಿಜಯೇಂದ್ರ ಉದ್ದೇಶಿಸಿ)

ಬಿಜೆಪಿ-ಜೆಡಿಎಸ್ ಎಷ್ಟೇ ಕಪಟ ಉದ್ದೇಶದ ಪಾದಯಾತ್ರೆ ನಡೆಸಿದರೂ ಹೆದರುವುದಿಲ್ಲ. ಇವರ ಷಡ್ಯಂತ್ರಕ್ಕೆ ಬಲಿಯಾಗಿ ಮನೆಯಲ್ಲಿ ಕೂರುವವನಲ್ಲ.

| ಸಿದ್ದರಾಮಯ್ಯ ಮುಖ್ಯಮಂತ್ರಿ

ಅಹಿಂದ ಹೆಸರು ಹೇಳಿಕೊಂಡು ಅಧಿಕಾರಕ್ಕೆ ಬಂದ ಸಿದ್ದರಾಮಯ್ಯನವರು ಅವರಿಗೇ ಮೋಸ ಮಾಡಿ, ಭ್ರಷ್ಟಾಚಾರದ ಹಣೆಪಟ್ಟಿ ಹೊತ್ತುಕೊಂಡಿದ್ದಾರೆ. ನಮ್ಮ ಪಾದಯಾತ್ರೆ ಸ್ವಾರ್ಥಕ್ಕಲ್ಲ.

| ಬಿ.ವೈ.ವಿಜಯೇಂದ್ರ ಬಿಜೆಪಿ ರಾಜ್ಯಾಧ್ಯಕ್ಷ

ಬಿಜೆಪಿ-ಜೆಡಿಎಸ್ ಪಾದಯಾತ್ರೆ: ನಾಳೆ ಒಂದು ಲಕ್ಷ ಕಾರ್ಯಕರ್ತರಿಂದ ಬೃಹತ್ ಸಮಾವೇಶ ಆಯೋಜನೆ

Share This Article

ಬಿಕ್ಕಳಿಕೆ ಏಕೆ ಬರುತ್ತದೆ? ಕಿರಿಕಿರಿ ಉಂಟುಮಾಡುವ ಅದನ್ನು ನಿಯಂತ್ರಿಸುವುದು ಹೇಗೆ?

 ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…

ಈ ದಿನಾಂಕದಂದು ಜನಿಸಿದವರು ದಾನದಲ್ಲಿ ಕರ್ಣನನ್ನು ಮೀರಿಸುತ್ತಾರೆ! ನೀವೂ ಹುಟ್ಟಿದ್ದು ಇದೇ ದಿನಾನಾ?

ಜ್ಯೋತಿಷ್ಯಶಾಸ್ತ್ರದಲ್ಲಿ ಸಂಖ್ಯಾಶಾಸ್ತ್ರವೂ ಒಂದು. ಇದರ ಪ್ರಕಾರ ವ್ಯಕ್ತಿಯ ಜನ್ಮ ದಿನಾಂಕವು ಅವನ ವ್ಯಕ್ತಿತ್ವದ ಬಗ್ಗೆ ಮತ್ತು…

ಗೋಲ್ಡನ್ ಅವರ್ ರಹಸ್ಯ: ಮುಂಜಾನೆ ಬೇಗ ಏಳುವುದರಿಂದ ಇದೆ 6 ಪ್ರಯೋಜನಗಳು

 ಬೆಂಗಳೂರು: ಮನೆಯಲ್ಲಿ ಕೆಲವರು ಸೂರ್ಯೋದಯಕ್ಕೂ ಮೊದಲೇ ಏಳುವ ಅಭ್ಯಾಸ ಇಟ್ಟುಕೊಂಡಿರುತ್ತಾರೆ. ಮುಂಜಾನೆ ಬೇಗ ಏಳುವುದನ್ನು ರೂಢಿ…