ಎಳನೀರು ಕುಡಿಯಬೇಡ ಎಂದಿದ್ದಕ್ಕೆ ಮುನಿಸು; ನೇಣು ಬಿಗಿದುಕೊಂಡು ಪ್ರಾಣ ಕಳೆದುಕೊಂಡ ಕಾನ್ಸ್​​ಟೇಬಲ್​ ಪುತ್ರ

Tender coconut
Published on

ಡೆಹ್ರಾಡೂನ್​: ಎಳನೀರು ಕೊಡಲಿಲ್ಲ ಎಂಬ ಕಾರಣಕ್ಕೆ ಪೊಲೀಸ್​ ಪೇದೆಯೊಬ್ಬರ ಮಗನೊಬ್ಬನು ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಉತ್ತರಾಖಂಡದ ಕೋಟ್​ದ್ವಾರದಲ್ಲಿ ನಡೆದಿದೆ. ಮೃತ ಬಾಲಕನು 10ನೇ ತರಗತಿ ವ್ಯಾಸಂಗ ಮಾಡುತ್ತಿದ್ದ ಎಂದು ವರದಿಯಾಗಿದ್ದು, ಮನೆಯಲ್ಲಿ ಯಾರು ಇಲ್ಲದ ವೇಳೆ ನೇಣು ಬಿಗಿದುಕೊಂಡು ಪ್ರಾಣ ಬಿಟ್ಟಿರುವುದಾಗಿ ವರದಿಯಾಗಿದೆ.

ಈ ಕುರಿತು ಮಾತನಾಡಿರುವ ಹಿರಿಯ ಪೊಲೀಸ್​ ಅಧಿಕಾರಿಯೊಬ್ಬರು, ಆಗಸ್ಟ್​ 31ರ ಶನಿವಾರ ಬಾಲಕ ಎಂದಿನಂತೆ ಶಾಲೆ ಮುಗಿಸಿಕೊಂಡು ಮನೆಗೆ ವಾಪಸ್​ ಆದ ಬಳಿಕ ಎಳನೀರು ಕೊಡುವಂತೆ ಕೇಳಿದ್ದಾನೆ. ಸಂಜೆಯಾಗಿದ್ದರಿಂದ ಆರೋಗ್ಯ ಸಮಸ್ಯೆ ಬರಬಹುದು ಎಂದು ಹೇಳಿ ಕುಟುಂಬಸ್ಥರು ಕೊಡುವುದಿಲ್ಲ ಎಂದು ಹೇಳಿದ್ದಾರೆ.

suicide

ಇದರಿಂದ ಬೇಸರಗೊಂಡ ಬಾಲಕ ತನ್ನ ಕೋಣೆಗೆ ಹೋಗಿ ನೇಣು ಬಿಗಿದುಕೊಂಡು ಪ್ರಾಣ ಕಳೆದುಕೊಂಡಿದ್ದಾನೆ. ರೂಮಿಗೆ ಹೋಗಿ ಎಷ್ಟೊತ್ತಾದರೂ ಬಾಲಕ ಬಾರದೆ ಇರುವುದನ್ನು ಗಮನಿಸಿದ ಕುಟುಂಬಸ್ಥರು ಬಾಗಿಲು ತೆರೆದು ನೋಡಿದಾಗ ಆತ ನೇಣು ಬಿಗಿದುಕೊಂಡು ಪ್ರಾಣ ಕಳೆದುಕೊಂಡಿರುವುದು ಬೆಳಕಿಗೆ ಬಂದಿದೆ. ಕೂಡಲೇ ಆತನನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ಆತ ಮೃತಪಟ್ಟಿರುವುದಾಗಿ ವೈದ್ಯರು ಘೋಷಿಸಿದ್ದಾರೆ.

ಬಾಲಕನ ತಂದೆಯೂ ಚಮೋಲಿಯಲ್ಲಿ ಪೊಲೀಸ್​ ಪೇದೆಯಾಗಿ ಕಾರ್ಯನಿರ್ವಹಿಸುತ್ತಿದ್ದು, ಘಟನೆ ನಡೆದಾಗ ಅವರು ಮನೆಯಲ್ಲಿ ಇರಲಿಲ್ಲ ಎಂದು ವರದಿಯಾಗಿದೆ. ಘಟನೆ ಸಂಬಂಧ ಪ್ರಕರಣ ದಾಖಲಿಸಿಕೊಳ್ಳಲಾಗಿದ್ದು, ಮೃತದೇಹವನ್ನು ಕುಟುಂಬಸ್ಥರಿಗೆ ಹಸ್ತಾಂತರಿಸಲಾಗಿದೆ ಎಂದು ಹಿರಿಯ ಪೊಲೀಸ್​ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net