ಮೆಕ್ಸಿಕೋ ಮ್ಯಾಚ್‌ಗೂ ಮುನ್ನ ಇಂಗ್ಲೆಂಡ್ ಆಟಗಾರರಿಗೆ ವಯಾಗ್ರ! ಅಸಲಿ ಕಥೆ ಬಿಚ್ಚಿಟ್ಟ ನಾಕೌಟ್ ಪಂದ್ಯ | FIFA WC

ಫಿಫಾ ವಿಶ್ವಕಪ್​ 2026
ಫಿಫಾ ವಿಶ್ವಕಪ್​ 2026
Published on

ಪ್ರಮುಖ ಮುಖ್ಯಾಂಶಗಳು

  • ಫಿಫಾ ವಿಶ್ವಕಪ್ ಟೂರ್ನಿಯ​ ನಾಕೌಟ್​ ಪಂದ್ಯ
  • ಮೆಕ್ಸಿಕೋ ವಿರುದ್ಧದ ಪಂದ್ಯಕ್ಕೂ ಮೊದಲು ಇಂಗ್ಲೆಂಡ್​ ತಂಡಕ್ಕೆ ವಯಾಗ್ರ
FIFA WC: ಪ್ರಸಕ್ತ ಫಿಫಾ ಫುಟ್ಬಾಲ್ ವಿಶ್ವಕಪ್​ ಟೂರ್ನಿಯಲ್ಲಿ ನಾಕೌಟ್​ ಪಂದ್ಯಗಳು ನಡೆಯುತ್ತಿದ್ದು, ಇಂಗ್ಲೆಂಡ್​ ಮತ್ತು ಮೆಕ್ಸಿಕೋ ಪಂದ್ಯ ಆರಂಭಕ್ಕೂ ಮುನ್ನ ನಡೆದ ಒಂದು ಘಟನೆ ಸದ್ಯ ಭಾರಿ ಚರ್ಚೆಗೆ ಗ್ರಾಸವಾಗಿದೆ.
ಸಾಮಾನ್ಯವಾಗಿ, ಆಟಗಾರರು ಎನರ್ಜಿ ಡ್ರಿಂಕ್​, ಜ್ಯೂಸ್​ ಸೇರಿದಂತೆ ಎನರ್ಜಿ ಬಾರ್‌ಗಳನ್ನು ಸೇವಿಸುವುದು ಗೊತ್ತಿರುವ ಸಂಗತಿಯೇ. ಆದರೆ, ಹ್ಯಾರಿ ಕೇನ್ ನಾಯಕತ್ವದ ಇಂಗ್ಲೆಂಡ್ ತಂಡವು ನಾಕೌಟ್ ಹಂತದಲ್ಲಿ ಮೆಕ್ಸಿಕೋ ಎದುರು 16ರ ಸುತ್ತಿನ ಪಂದ್ಯಕ್ಕೂ ಮೊದಲು ವಯಾಗ್ರ (ಸಿಲ್ಡೆನಾಫಿಲ್) ಸೇವನೆಗೆ ಅನುಮತಿ ಪಡೆದಿರುವುದು ಈಗ ಬೆಳಕಿಗೆ ಬಂದಿದೆ.
ಜೂ.04ರಂದು ಮೆಕ್ಸಿಕೋ ನಗರದ ಐತಿಹಾಸಿಕ ಎಸ್ಟಾಡಿಯೋ ಅಜ್ಟೆಕಾದಲ್ಲಿ ನಡೆಯಲಿರುವ ಈ ಪಂದ್ಯದ ಕ್ರೀಡಾಂಗಣವು ಸಮುದ್ರ ಮಟ್ಟದಿಂದ ಸುಮಾರು 7,350 ಅಡಿ ಎತ್ತರದಲ್ಲಿದೆ. ಹೀಗಾಗಿ, ಅಂತಹ ಎತ್ತರದ ಕ್ರೀಡಾಂಗಣದಲ್ಲಿ ಆಡುವಾಗ ಆಟಗಾರರು ಬೇಗನೆ ಸುಸ್ತಾಗಬಹುದು. ಈ ನಿಟ್ಟಿನಲ್ಲಿ, ಇಂಗ್ಲೆಂಡ್ ಮ್ಯಾನೇಜರ್ ಥಾಮಸ್ ಟುಚೆಲ್ ತಮ್ಮ ತಂಡದ ಆಟಗಾರರಿಗೆ ಅಗತ್ಯವಿದ್ದರೆ ವಯಾಗ್ರವನ್ನು ಬಳಸಲು ಅವಕಾಶ ನೀಡಿದ್ದಾರೆ ಎಂದು ಅಂತಾರಾಷ್ಟ್ರೀಯ ಸುದ್ದಿ ಸಂಸ್ಥೆಗಳು ವರದಿ ಮಾಡಿವೆ.
ವಯಾಗ್ರ ರಕ್ತನಾಳಗಳನ್ನು ಹಿಗ್ಗಿಸುತ್ತದೆ ಮತ್ತು ರಕ್ತದ ಹರಿವನ್ನು ಸುಧಾರಣೆ ತರುತ್ತದೆ. ಹೆಚ್ಚಿನ ಎತ್ತರದಲ್ಲಿ ಆಮ್ಲಜನಕದ ಕೊರತೆಯಿಂದ ಉಂಟಾಗುವ ಅಸ್ವಸ್ಥತೆಯನ್ನು ನಿಯಂತ್ರಿಸಲು ಇದು ಸ್ವಲ್ಪ ಮಟ್ಟಿಗೆ ಸಹಾಯ ಮಾಡುತ್ತದೆ ಎಂದು ನಂಬಲಾಗಿದೆ. ಹಾಗಂತ ಇದು ಎಲ್ಲಾ ಆಟಗಾರರಿಗೂ ಕಡ್ಡಾಯವಲ್ಲ. ಅದರ ಅಗತ್ಯ ಹೆಚ್ಚಾಗಿದೆ ಎಂದು ಯಾರಿಗೆ ಅನಿಸುತ್ತದೆಯೇ ಅವರಿಗೆ ಮಾತ್ರ ಲಭ್ಯವಿದೆ. ಈ ಮೈದಾನದಲ್ಲಿ ಮೆಕ್ಸಿಕೋ ದಾಖಲೆ ಹೊಂದಿರುವುದರಿಂದ ಇಂಗ್ಲೆಂಡ್ ಎಲ್ಲ ಆಯಾಮಗಳಲ್ಲಿಯೂ ಗಮನಿಸಿ, ಇಂಥ ನಿರ್ಧಾರಕ್ಕೆ ಮುಂದಾಗಿರುವುದು ಇಲ್ಲಿ ಸ್ಪಷ್ಟ.

ವಯಾಗ್ರ ಸೇವನೆಗೆ ನಿಯಮಗಳು ಹೇಳುವುದೇನು?

ಈ ವಿಷಯದ ಬಗ್ಗೆ ವಿಶ್ವ ಡೋಪಿಂಗ್ ವಿರೋಧಿ ಸಂಸ್ಥೆ (WADA) ನಿಯಮಗಳು ಸಹ ಸ್ಪಷ್ಟವಾಗಿವೆ. ವಯಾಗ್ರ (ಸಿಲ್ಡೆನಾಫಿಲ್) ನಿಷೇಧಿತ ಔಷಧಿಗಳ ಪಟ್ಟಿಯಲ್ಲಿ ಸೇರಿಸಲಾಗಿಲ್ಲ. ಇದನ್ನು ಸ್ಪರ್ಧೆಯ ಒಳಗೆ ಮತ್ತು ಹೊರಗೆ ಬಳಸಲು ಅನುಮತಿಯಿದೆ. ಈ ಹಿಂದೆ ಹಲವಾರು ಅಧ್ಯಯನಗಳ ಹೊರತಾಗಿಯೂ, ಇದು ಸಾಮಾನ್ಯ ಪರಿಸ್ಥಿತಿಗಳಲ್ಲಿ ಅಥವಾ ಸಮುದ್ರ ಮಟ್ಟಕ್ಕೆ ಸಮೀಪವಿರುವ ಪ್ರದೇಶಗಳಲ್ಲಿ ಆಟಗಾರರ ಕ್ರೀಡಾ ಪ್ರದರ್ಶನವನ್ನು ಗಮನಾರ್ಹವಾಗಿ ಸುಧಾರಿಸುತ್ತದೆ ಎಂಬುದಕ್ಕೆ ಯಾವುದೇ ಸಾಕ್ಷಿಗಳು ನಮ್ಮ ಮುಂದಿಲ್ಲ ಎಂದು ಒತ್ತಿ ಹೇಳಿದೆ.
ಈ ಮಧ್ಯೆ, 2026ರ ಆವೃತ್ತಿಯಲ್ಲಿ ಮೆಕ್ಸಿಕೋ ಅತ್ಯುತ್ತಮ ಫಾರ್ಮ್‌ನಲ್ಲಿದೆ. ಇಲ್ಲಿಯವರೆಗೆ ಆಡಿರುವ ನಾಲ್ಕು ಪಂದ್ಯಗಳನ್ನು ಗೆದ್ದಿದೆ. ಇದಲ್ಲದೆ, ಅಜ್ಟೆಕಾ ಕ್ರೀಡಾಂಗಣದಲ್ಲಿ ಮೆಕ್ಸಿಕೋ ಅತ್ಯುತ್ತಮ ದಾಖಲೆಯನ್ನು ಹೊಂದಿದೆ. ಇಲ್ಲಿಯವರೆಗೆ ಈ ಕ್ರೀಡಾಂಗಣದಲ್ಲಿ 89 ಪಂದ್ಯಗಳನ್ನು ಆಡಿದ್ದು, ಕೇವಲ ಎರಡು ಪಂದ್ಯಗಳಲ್ಲಿ ಮಾತ್ರ ಸೋಲುಂಡಿದೆ. ಮೆಕ್ಸಿಕೋ ಕೊನೆಯದಾಗಿ ಸೋತಿದ್ದು 2013ರಲ್ಲಿ. ಈ ಸಂದರ್ಭದಲ್ಲಿ, ಇಂಗ್ಲೆಂಡ್‌ಗೆ ನಾಕೌಟ್​ ಪಂದ್ಯದಲ್ಲಿ ಮೆಕ್ಸಿಕೋ ಸೋಲಿಸಲು ವಯಾಗ್ರದ ಅವಶ್ಯಕತೆ ನಿಜಕ್ಕೂ ಬೇಕಿದೆ ಅನಿಸುತ್ತೆ,(ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net