

ಚೆನ್ನೈ: ಬಂಗಾಳ ಕೊಲ್ಲಿಯಲ್ಲಿ ಹುಟ್ಟಿಕೊಂಡು ಹಲವು ದಿನಗಳಿಂದ ಕಣ್ಣುಮುಚ್ಚಾಲೆ ಆಡುತ್ತಿದ್ದ ಫೀಂಜಲ್ (ಫೆಂಗಲ್) ಚಂಡಮಾರುತ ಪುದುಚೇರಿ ಕರಾವಳಿಯತ್ತ ಸಾಗುತ್ತಿದ್ದು ಪುದುಚೇರಿಯ ಕಾರೈಕಲ್ ಮತ್ತು ಮಹಾಬಲಿಪುರಂ ನಡುವೆ ಶನಿವಾರ ರಾತ್ರಿ ಅಪ್ಪಳಿಸುವ ಸಾಧ್ಯತೆ ಇದೆ. ಸುಂಟರಗಾಳಿಯ ಪರಿಣಾಮವಾಗಿ ಉಂಟಾದ ವಾತಾವರಣ ರಾತ್ರಿ 11.30 ರವರೆಗೂ ಮುಂದುವರಿಯುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಅಧಿಕಾರಿಗಳು ಅಂದಾಜು ಮಾಡಿದ್ದಾರೆ.
ಚಂಡಮಾರುತ ಪ್ರತಿ ಗಂಟೆಗೆ 80 ಕಿ.ಮೀ.ನಷ್ಟು ವೇಗವಾಗಿ ಸಾಗುತ್ತಿರುವ ಪರಿಣಾಮ ಭಾರಿ ವಿನಾಶ ಸಂಭವಿಸುವ ಅಪಾಯ ಎದುರಾಗಿದೆ. ಮಾರುತದ ವೇಗ ಗರಿಷ್ಠ 90 ಕಿ.ಮೀ. ತಲುಪುವ ಸಂಭವವಿದ್ದು, ತಮಿಳುನಾಡು ಮತ್ತು ಆಂಧ್ರಪ್ರದೇಶದ ಕರಾವಳಿಯ ಹಲವು ಭಾಗಗಳಲ್ಲಿ ಭಾರಿ ವರ್ಷಧಾರೆ ಆಗಿದೆ. ಮಳೆ ಅಬ್ಬರದಿಂದ ಸಾಮಾನ್ಯ ಜನಜೀವನ ಅಸ್ತವ್ಯಸ್ತಗೊಂಡಿದ್ದು ಪ್ರವಾಹದಿಂದ ಪರಿಸ್ಥಿತಿ ಇನ್ನಷ್ಟು ಹದಗೆಡುವ ಸಂಭವವಿದೆ. ಚೆನ್ನೈ ವಿಮಾನ ನಿಲ್ದಾಣದ ಕಾರ್ಯಾಚರಣೆ ತಾತ್ಕಾಲಿಕವಾಗಿ ಮುಚ್ಚಲಾಗಿದೆ. ಚೆನ್ನೈಗೆ ಬರುವ ಹಾಗೂ ಹೊರಡುವ ವಿಮಾನಗಳ ಸಂಚಾರ ವ್ಯತ್ಯಯಗೊಂಡಿದೆ. ರೈಲುಗಳ ಸಂಚಾರ ಕೂಡ ಅಸ್ತವ್ಯಸ್ತಗೊಂಡಿದೆ. ಈ ವಾರದ ಆರಂಭದಲ್ಲಿ ಶ್ರೀಲಂಕಾ ಕರಾವಳಿಯನ್ನು ಅಪ್ಪಳಿಸಿದ್ದ ಚಂಡಮಾರುತಕ್ಕೆ ಆರು ಮಕ್ಕಳ ಸಹಿತ ಕನಿಷ್ಠ 12 ಜನರು ಬಲಿಯಾಗಿದ್ದರು.
ಸಿಎಂ ಸ್ಟಾಲಿನ್ ಚರ್ಚೆ: ಸಿಎಂ ಎಂ.ಕೆ. ಸ್ಟಾಲಿನ್, ರಾಜ್ಯ ತುರ್ತು ಕಾರ್ಯಾಚರಣೆಗಳ ಕೇಂದ್ರದಲ್ಲಿ ಉನ್ನತ ಅಧಿಕಾರಿ ಗಳ ಸಭೆ ನಡೆಸಿ ಪರಿಸ್ಥಿತಿಯ ಪರಾಮರ್ಶೆ ನಡೆಸಿದರು.
ಎಸ್ಎಂಎಸ್ ಮೂಲಕ ಎಚ್ಚರಿಕೆ: ಸೈಕ್ಲೋನ್ ಅಪ್ಪಳಿ ಸಲಿರುವ ಪುದುಚೇರಿ ಯಲ್ಲಿಯೂ ಭಾರಿ ಮಳೆಯಾಗಿದ್ದು ಜಿಲ್ಲಾಡಳಿತ ಸುಮಾರು 12 ಲಕ್ಷ ನಿವಾಸಿಗಳಿಗೆ ಎಸ್ಎಂಎಸ್ ಮೂಲಕ ಎಚ್ಚರಿಕೆ ಸಂದೇಶ ರವಾನಿಸಿದೆ. ಜನರ ಸುರಕ್ಷತೆ ಖಾತರಿಪಡಿಸಲು ಅಗತ್ಯ ಕ್ರಮಗಳನ್ನು ಕೈಗೊಂಡಿರುವುದಾಗಿ ಜಿಲ್ಲಾಧಿಕಾರಿ ಎ. ಕುಲೋತುಂಗನ್ ತಿಳಿಸಿದ್ದಾರೆ. ಆಹಾರದ ಪೊಟ್ಟಣಗಳ ಪೂರೈಕೆಗೂ ವ್ಯವಸ್ಥೆ ಮಾಡಲಾಗಿದೆ ಎಂದಿದ್ದಾರೆ. ಆರಕೋಣಂನಿಂದ ರಾಷ್ಟ್ರೀಯ ವಿಪತ್ತು ಸ್ಪಂದನಾ ಪಡೆ (ಎನ್ಡಿಆರ್ಎಫ್) ಸಿಬ್ಬಂದಿ ಆಗಮಿಸಿದ್ದಾರೆ.
ಕುಂಭದ್ರೋಣ ಮಳೆ: ತಮಿಳುನಾಡಿನ ಚೆನ್ನೈ, ತಿರುವಲ್ಲೂರು, ಕಾಂಚಿಪುರಂ, ಕಲ್ಲಕುರಿಚ್ಚಿ ಮತ್ತು ಕಡಲೂರು ಜಿಲ್ಲೆಗಳು ಹಾಗೂ ಪುದುಚೇರಿಗಳಲ್ಲಿ ಕುಂಭದ್ರೋಣ ಮಳೆ ಆಗಲಿದ್ದು ರೆಡ್ ಅಲರ್ಟ್ ಘೋಷಿಸಲಾಗಿದೆ. ಶುಕ್ರವಾರ ರಾತ್ರಿ ಕರಾವಳಿ ಪ್ರದೇಶಗಳಲ್ಲಿ ತಡೆದು ತಡೆದು ಬೀಳಲು ಆರಂಭವಾದ ಮಳೆ ಶನಿವಾರ ಒಂದೇ ಸಮನೆ ಸುರಿಯತೊಡಗಿತು. ಕ್ರೋಮ್ೇಟ್ ಉಪನಗರದ ಸರ್ಕಾರಿ ಆಸ್ಪತ್ರೆಗಳ ಆವರಣಗಳು ಭಾಗಶಃ ನೀರಿನಿಂದ ಆವೃತವಾಗಿವೆ.
ಎಟಿಎಂನಲ್ಲಿ ಸಾವು: ಚೆನ್ನೈನ ಎಟಿಎಂ ಒಂದರಲ್ಲಿ ಶಂಕಿತ ವಿದ್ಯುತ್ ಶಾರ್ಟ್ ಸರ್ಕ್ಯೂಟ್ನಿಂದ ವರ್ವ ಎಂಬ ವ್ಯಕ್ತಿ ಮೃತಪಟ್ಟಿದ್ದಾನೆ. ನೀರಿನಲ್ಲಿ ತೇಲುತ್ತಿದ್ದ ದೇಹವನ್ನು ನಂತರ ಮರದ ಬೊಡ್ಡೆ ಬಳಸಿ ಎತ್ತಲಾಯಿತು.
ಶಾಲೆ- ಕಾಲೇಜ್ ಬಂದ್: ಚಂಡಮಾರುತದ ನಿರೀಕ್ಷೆಯಿಂದ ಮುನ್ನೆಚ್ಚರಿಕೆ ಕ್ರಮವಾಗಿ ಚೆನ್ನೈ, ಕಾಂಚಿಪುರಂ, ಚೆಂಗಲ್ಪಟ್ಟು, ತಿರುವಲ್ಲೂರು, ಕಡಲೂರು, ವಿಲ್ಲುಪುರಂ, ಕಲ್ಲಕುರಿಚಿ ಮತ್ತು ಮಯಿಲದುತುರೈ ಜಿಲ್ಲೆಗಳು ಮತ್ತು ಪುದುಚೇರಿಯಲ್ಲಿ ಶನಿವಾರ ಶಾಲೆ-ಕಾಲೇಜ್ಗಳಿಗೆ ರಜೆ ಘೋಷಿಸಲಾಗಿತ್ತು. ಅನೇಕ ಕಡೆ ಗಾಳಿಯ ರಭಸಕ್ಕೆ ಕೊಡೆಗಳು ಮತ್ತು ಬ್ಯಾರಿಕೇಡ್ಗಳು ಹಾರಿ ಹೋದವು. ಸವಾರರು ಮುಂದೆ ಸಾಗಲಾಗದೆ ತಮ್ಮ ವಾಹನಗಳನ್ನು ಫ್ಲೈಓವರ್ಗಳ ಮೇಲೆ ನಿಲ್ಲಿಸಿದ್ದು ಹಲವೆಡೆ ಕಂಡು ಬಂತು. ಚಂಡಮಾರುತದಿಂದ ಅಧಿಕ ಹಾನಿ ಆಗುವ ಅಪಾಯವಿರುವ ಸ್ಥಳಗಳಲ್ಲಿ ತುರ್ತು ಕಾರ್ಯಾಚರಣೆಗಳಿಗೆಂದು ದೋಣಿಗಳು, ಜನರೇಟರ್ಗಳು, ಮೋಟರ್ ಪಂಪ್ಗಳು, ಮರ ಕಡಿಯುವ ಯಂತ್ರಗಳು (ಟ್ರೀ-ಕಟ್ಟರ್ಸ್) ಮತ್ತಿತರ ಅಗತ್ಯ ಸಾಮಗ್ರಿಗಳನ್ನು ಸಿದ್ಧವಿರಿಸಲಾಗಿದೆ. ಸುಳಿಗಾಳಿಯಿಂದಾಗಿ ದೂರಸಂಪರ್ಕ ವ್ಯವಸ್ಥೆಗೆ ಹಾನಿ ಆಗಬಹುದು ಹಾಗೂ ತಗ್ಗು ಪ್ರದೇಶಗಳಲ್ಲಿ ಪ್ರವಾಹ ಉಂಟಾಗಬಹುದು ಎಂದು ಪ್ರಾದೇಶಿಕ ಹವಾಮಾನ ಕೇಂದ್ರದ ನಿರ್ದೇಶಕ ಎಸ್. ಬಾಲಚಂದ್ರನ್ ಹೇಳಿದ್ದಾರೆ.
ಆಂಧ್ರದಲ್ಲೂ ಮಳೆ ಸಾಧ್ಯತೆ: ಆಂಧ್ರಪ್ರದೇಶದ ದಕ್ಷಿಣ ಕರಾವಳಿಯಲ್ಲಿ ಹಗುರದಿಂದ ಸಾಧಾರಣ ಮಳೆಯಾಗುವ ನಿರೀಕ್ಷೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ತಿಳಿಸಿದೆ. ರಾಯಲಸೀಮೆ ಪ್ರದೇಶದಲ್ಲಿ ಗುಡುಗು ಸಹಿತ ಮಳೆ; ಪ್ರಕಾಶಂ, ನೆಲ್ಲೂರು, ತಿರುಪತಿ ಮತ್ತು ಚಿತ್ತೂರು ಜಿಲ್ಲೆಗಳ ಸಹಿತ ಹಲವೆಡೆ ಭಾನುವಾರ ಮುಸಲ ಧಾರೆಯೂ ಆಗಬಹುದು ಎಂದಿದೆ.
ವಿಜ್ಞಾನಿಗಳ ಎಚ್ಚರಿಕೆ: ಪಳೆಯುಳಿಕೆ ಇಂಧನ ದಹನ ದಿಂದಾಗಿ ಉಂಟಾದ ವಾತಾವರಣ ಬದಲಾವಣೆ ಯಿಂದ ಜಗತ್ತು ಬಿಸಿ ಆಗುತ್ತಿರುವುದರಿಂದ ಚಂಡಮಾರುತಗಳು ತುಂಬಾ ಪ್ರಬಲವಾಗಿರುತ್ತವೆ ಎಂದು ವಿಜ್ಞಾನಿಗಳು ಎಚ್ಚರಿಸಿದ್ದಾರೆ.