

ಚೆನ್ನೈ: ಅಕ್ರಮ ಸಂಬಂಧ ಕಾರಣದಿಂದಾಗಿ ಮಹಿಳಾ ಪೊಲೀಸ್ ಸಿಬ್ಬಂದಿ ಒಬ್ಬರು ತನ್ನಿಬ್ಬರು ಮಕ್ಕಳೊಂದಿಗೆ ರೈಲಿಗೆ ಸಿಲುಕಿ ಆತ್ಮಹತ್ಯೆ ಮಾಡಿಕೊಂಡಿರುವ ಆಘಾತಕಾರಿ ಘಟನೆ ತಮಿಳುನಾಡಿನ ಸಮಯನಲ್ಲೂರಿನಲ್ಲಿ ನಡೆದಿದೆ.
ಜಯಲಕ್ಷ್ಮೀ (30) ಮೃತ ಮಹಿಳಾ ಪೊಲೀಸ್. ಮದುರೈನಲ್ಲಿ ಕಳೆದ ಆರು ವರ್ಷಗಳಿಂದ ರೈಲ್ವೆ ಪೊಲೀಸ್ ಅಧಿಕಾರಿ ಸೇವೆ ಸಲ್ಲಿಸುತ್ತಿದ್ದರು. ಮದುರೈನ ತಿರುಪಲೈ ಏರಿಯಾದಲ್ಲಿ ವಾಸವಿದ್ದರು. ಮದುವೆಯಾಗಿ, ಇಬ್ಬರು ಮಕ್ಕಳಿದ್ದರು. ನಿನ್ನೆ ಸಂಜೆ 6 ಗಂಟೆ ಸುಮಾರಿಗೆ ಮಧುರೈ ಜಿಲ್ಲೆಯ ಸಮಯನಲ್ಲೂರು ಬಳಿಯ ಮಧುರೈ-ದಿಂಡಿಗಲ್ ರೈಲ್ವೆ ಹಳಿಯಲ್ಲಿ ಪೊಲೀಸ್ ಸಮವಸ್ತ್ರದಲ್ಲಿ ಇಬ್ಬರು ಮಕ್ಕಳು ಸಮೇತ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಮಕ್ಕಳನ್ನು ಮಗ ಕಾಳಿಮುತ್ತು ರಾಜ (9) ಮತ್ತು ಮಗಳು ಪವಿತ್ರಾ (11) ಎಂದು ಗುರುತಿಸಲಾಗಿದೆ. ಜಯಲಕ್ಷ್ಮಿ ಮಧುರೈ ರೈಲ್ವೇ ಪೊಲೀಸ್ ವಿಭಾಗದಲ್ಲಿ ಗ್ರೇಡ್-1 ಕಾನ್ ಸ್ಟೇಬಲ್ ಆಗಿ ಕಾರ್ಯನಿರ್ವಹಿಸುತ್ತಿದ್ದರು. ಸೆಂಗೊಟ್ಟೈ ಮೂಲದ ಸೊಕ್ಕಲಿಂಗ ಪಾಂಡಿಯನ್ ಜತೆ ಅನೈತಿಕ ಸಂಬಂಧ ಹೊಂದಿದ್ದಳು ಎನ್ನಲಾಗಿದೆ. ಪಾಂಡಿಯನ್ ಸಹ ರೈಲ್ವೆ ಪೊಲೀಸ್ ಅಧಿಕಾರಿಯಾಗಿದ್ದು, ಈಗಾಗಲೇ ಮದುವೆಯಾಗಿ ಇಬ್ಬರು ಮಕ್ಕಳಿದ್ದಾರೆ. ಅಲ್ಲದೆ, ಹಲವು ಮಹಿಳೆಯರ ಜತೆ ಪಾಂಡಿಯನ್ಗೆ ಸಂಪರ್ಕ ಇತ್ತು. ಈ ವಿಚಾರ ಜಯಲಕ್ಷ್ಮಿಗೆ ತಿಳಿದು ಆಘಾತಕ್ಕೆ ಒಳಗಾಗಿದ್ದರು. ಇದೇ ವಿಚಾರವಾಗಿ ಪಾಂಡಿಯನ್ ಜೊತೆ ಸಂಪರ್ಕದಲ್ಲಿದ್ದ ರೈಲ್ವೆ ಉದ್ಯೋಗಿ ಶಿವಕಾಮಿ ಎಂಬಾಕೆಗೆ ಕರೆ ಮಾಡಿ ಜಯಲಕ್ಷ್ಮೀ ಜಗಳವಾಡಿದ್ದಳು.
ಜಯಲಕ್ಷ್ಮೀ ಮಾತುಗಳನ್ನು ರೆಕಾರ್ಡ್ ಮಾಡಿಕೊಂಡಿದ್ದ ಶಿವಗಾಮಿ ಮಾಧ್ಯಮಗಳಿಗೆ ಬಿಡುಗಡೆ ಮಾಡುವುದಾಗಿ ಬೆದರಿಕೆ ಹಾಕಿದಳು. ಇದರಿಂದ ಹೆದರಿದ ಜಯಲಕ್ಷ್ಮಿ ತನ್ನ ಇಬ್ಬರು ಮಕ್ಕಳೊಂದಿಗೆ ರೈಲಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಈ ವಿಷಯ ತಿಳಿದ ಸೊಕ್ಕಲಿಂಗ ಪಾಂಡಿಯನ್ ತನ್ನ ಸಹೋದರನಿಗೆ ವಾಟ್ಸಾಪ್ ಮೂಲಕ ‘ತಪ್ಪು ಮಾಡಿದ್ದೇನೆ’ ಎಂದು ಸಂದೇಶ ರವಾನಿಸಿ ರಾತ್ರಿ 11:30ಕ್ಕೆ ಕೋವಿಲಪಟ್ಟಿ ಬಳಿ ರೈಲಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. (ಏಜೆನ್ಸೀಸ್)