Priyanka Gandhi | ತಾಲಿಬಾನ್​ ವಿದೇಶಾಂಗ ಸಚಿವರ ಪತ್ರಿಕಾಗೋಷ್ಠಿಯಿಂದ ಮಹಿಳಾ ಪತ್ರಕರ್ತರು ಹೊರಗೆ; ಪ್ರಧಾನಿ ನಿಲುವು ಪ್ರಶ್ನಿಸಿದ ಪ್ರಿಯಾಂಕ ಗಾಂಧಿ

Priyanka Gandhi 1
Published on

Priyanka Gandhi: ಅಫ್ಘಾನಿಸ್ತಾನಕ್ಕೆ ಭೇಟಿ ನೀಡಿರುವ ವಿದೇಶಾಂಗ ಸಚಿವ ಅಮೀರ್ ಖಾನ್ ಮುತ್ತಕಿ ಅವರ ಪತ್ರಿಕಾಗೋಷ್ಠಿಯಲ್ಲಿ ಮಹಿಳಾ ಪತ್ರಕರ್ತರನ್ನು ಹೊರಗಿಡುವ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ತಮ್ಮ ನಿಲುವನ್ನು ಸ್ಪಷ್ಟಪಡಿಸಬೇಕೆಂದು ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಶನಿವಾರ (ಅ 11) ಒತ್ತಾಯಿಸಿದ್ದಾರೆ.

ತಮ್ಮ ಎಕ್ಸ್​ ಖಾತೆಯಲ್ಲಿ ಪೋಸ್ಟ್ ಹಂಚಿಕೊಂಡಿರುವ ಪ್ರಿಯಾಂಕಾ, ಪ್ರಧಾನಿ ಮೋದಿ ಮಹಿಳಾ ಹಕ್ಕುಗಳನ್ನು ಚುನಾವಣೆಯಿಂದ ಇನ್ನೊಂದು ಚುನಾವಣೆಗೆ ಲಾಭದ ಉದ್ದೇಶದಿಂದ ಮಾತ್ರ ಬೆಂಬಲಿಸುತ್ತಾರೆಯೇ ಎಂದು ಪ್ರಶ್ನಿಸಿದರು. ತಾಲಿಬಾನ್ ಪ್ರತಿನಿಧಿಯ ಭಾರತ ಭೇಟಿಯ ಸಮಯದಲ್ಲಿ ಪತ್ರಿಕಾಗೋಷ್ಠಿಯಿಂದ ಮಹಿಳಾ ಪತ್ರಕರ್ತರನ್ನು ಹೊರಗಿಡುವ ಬಗ್ಗೆ ತಮ್ಮ ನಿಲುವು ಏನು ಎನ್ನುವುದನ್ನು ಪ್ರಧಾನಿ ಸ್ಪಷ್ಟಪಡಿಸಬೇಕು, ಮಹಿಳಾ ಹಕ್ಕುಗಳ ಮಾನ್ಯತೆಯನ್ನು ಚುನಾವಣೆಯ ಲಾಭದ ಉದ್ದೇಶದಿಂದ ನೋಡುವುದಾದರೆ, ಅದು ಭಾರತದ ಸಮರ್ಥ ಮಹಿಳೆಯರಿಗೆ ಮಾಡಿದ ಅವಮಾನವಾಗುತ್ತದೆ, ಈ ಅವಮಾನವನ್ನು ನಮ್ಮ ದೇಶದಲ್ಲಿ ಅನುಮತಿಸಸಿರುವುದು ಹೇಗೆ..? ಎಂದರು.

ಘಟನೆ ಏನು..

ನವದೆಹಲಿಯಲ್ಲಿ ತಾಲಿಬಾನ್‌ನ ಹಂಗಾಮಿ ವಿದೇಶಾಂಗ ಸಚಿವ ಅಮೀರ್ ಖಾನ್ ಮುತಾಕಿ ಅವರು ಅಫ್ಘಾನಿಸ್ತಾನ ರಾಯಭಾರ ಕಚೇರಿಯಲ್ಲಿ ಭಾರತೀಯ ಮಹಿಳಾ ಪತ್ರಕರ್ತರಿಗೆ ಹಾಜರಾಗುವುದನ್ನು ನಿಷೇಧಿಸಲಾಗಿದೆ ಎಂಬ ಆರೋಪದ ಮೇಲೆ ಪತ್ರಿಕಾಗೋಷ್ಠಿ ನಡೆಸಿದ್ದು ವಿವಾದ ಭುಗಿಲೆದ್ದಿತು.

ಈ ನಡೆಯನ್ನು ಅನೇಕರು ಟೀಕಿಸಿದ್ದು, ಮಾಜಿ ಕೇಂದ್ರ ಗೃಹ ಸಚಿವ ಪಿ. ಚಿದಂಬರಂ ಘಟನೆಯ ಬಗ್ಗೆ ಆಘಾತ ಮತ್ತು ನಿರಾಶೆ ವ್ಯಕ್ತಪಡಿಸಿದ್ದು, ಪುರುಷ ಪತ್ರಕರ್ತರು ತಮ್ಮ ಮಹಿಳಾ ಸಹೋದ್ಯೋಗಿಗಳೊಂದಿಗೆ ಒಗ್ಗಟ್ಟಿನಿಂದ ಕಾರ್ಯಕ್ರಮವನ್ನು ಬಹಿಷ್ಕರಿಸಬೇಕಾಗಿತ್ತು ಎಂದು ಅಭಿಪ್ರಾಯಪಟ್ಟಿದ್ದಾರೆ. ತಮ್ಮ ಎಕ್ಸ್​ ಖಾತೆಯಲ್ಲಿ ಪೋಸ್ಟ್​ ಹಂಚಿಕೊಂಡಿರುವ ಅವರು, ಅಫ್ಘಾನಿಸ್ತಾನದ ಅಮೀರ್ ಖಾನ್ ಮುತ್ತಕಿ ಅವರ ಪತ್ರಿಕಾಗೋಷ್ಠಿಯಿಂದ ಮಹಿಳಾ ಪತ್ರಕರ್ತರನ್ನು ಹೊರಗಿಡಲಾಗಿದೆ ಎಂಬ ವಿಷಯ ತಿಳಿದು ಆಘಾತವಾಯ್ತು, ನನ್ನ ವೈಯಕ್ತಿಕ ಅಭಿಪ್ರಾಯದಲ್ಲಿ ಪುರುಷ ಪತ್ರಕರ್ತರು ಅಲ್ಲಿಂದ ಹೊರನಡೆಯಬೇಕಿತ್ತು ಎಂದು ಬರೆದುಕೊಂಡಿದ್ದಾರೆ.

ಕಾಂಗ್ರೆಸ್ ಸಂಸದ ಕಾರ್ತಿ ಪಿ ಚಿದಂಬರಂ ಕೂಡ ಈ ವಿಷಯದ ಬಗ್ಗೆ ಭಾರತೀಯ ಜನತಾ ಪಕ್ಷ (ಬಿಜೆಪಿ) ಸರ್ಕಾರವನ್ನು ಟೀಕಿಸಿದ್ದು, ವಿದೇಶಾಂಗ ಸಚಿವ ಎಸ್ ಜೈಶಂಕರ್ ವಿರುದ್ಧ ಅಸಮಧಾನ ವ್ಯಕ್ತಪಡಿಸಿದರು. ತಾಲಿಬಾನ್ ಜೊತೆ ತೊಡಗಿಸಿಕೊಳ್ಳಲು ನಮ್ಮನ್ನು ಒತ್ತಾಯಿಸುವ ಭೌಗೋಳಿಕ ರಾಜಕೀಯ ಬಲವಂತಗಳನ್ನು ನಾನು ಅರ್ಥಮಾಡಿಕೊಂಡಿದ್ದೇನೆ, ಆದರೆ ಅವರ ತಾರತಮ್ಯ ಮತ್ತು ಸರಳವಾದ ಪ್ರಾಚೀನ ನಡವಳಿಕೆಗಳಿಗೆ ಮಣಿಯುವುದು ಸಂಪೂರ್ಣವಾಗಿ ಹಾಸ್ಯಾಸ್ಪದವಾಗಿದೆ. ತಾಲಿಬಾನ್ ಸಚಿವರ ಪತ್ರಿಕಾಗೋಷ್ಠಿಯಿಂದ ಮಹಿಳಾ ಪತ್ರಕರ್ತರನ್ನು ಹೊರಗಿಡುವಲ್ಲಿ ವಿದೇಶಾಂಗ ಸಚಿವಾಲಯ ಮತ್ತು ಎಸ್ ಜೈಶಂಕರ್ ಅವರ ನಡವಳಿಕೆ ತುಂಬಾ ನಿರಾಶಾದಾಯಕವಾಗಿದೆ ಎಂದು ಅವರು ಹೇಳಿದರು.

ಕಾಂಗ್ರೆಸ್ ವಕ್ತಾರೆ ಶಮಾ ಮೊಹಮ್ಮದ್ ತಮ್ಮ ಎಕ್ಸ್ ಖಾತೆಯಲ್ಲಿನ ಪೋಸ್ಟ್​ನಲ್ಲಿ, ಅಫ್ಘಾನಿಸ್ತಾನದ ತಾಲಿಬಾನ್ ವಿದೇಶಾಂಗ ಸಚಿವ ಅಮೀರ್ ಖಾನ್ ಮುತ್ತಕಿ ಅವರ ಪತ್ರಿಕಾಗೋಷ್ಠಿಗೆ ಮಹಿಳಾ ಪತ್ರಕರ್ತರನ್ನು ಆಹ್ವಾನಿಸಲಾಗಿಲ್ಲ ಎಂಬುದು ನಿಜವೇ.? ನಮ್ಮ ಸ್ವಂತ ನೆಲದಲ್ಲಿ ನಿಯಮಗಳನ್ನು ನಿರ್ದೇಶಿಸಲು ಮತ್ತು ಮಹಿಳೆಯರ ವಿರುದ್ಧ ಅವರ ತಾರತಮ್ಯದ ಕಾರ್ಯಸೂಚಿಯನ್ನು ಹೇರಲು ಅವರು ಯಾರು? ಎಂದು ಪ್ರಶ್ನಿಸಿದರು.

ತಾಲಿಬಾನ್ ಸಚಿವರು ಅಕ್ಟೋಬರ್ 9 ರಿಂದ ಅಕ್ಟೋಬರ್ 16 ರವರೆಗೆ ಒಂದು ವಾರದ ಭಾರತ ಭೇಟಿಯಲ್ಲಿದ್ದಾರೆ. ಆಗಸ್ಟ್ 2021 ರಲ್ಲಿ ತಾಲಿಬಾನ್ ಅಫ್ಘಾನಿಸ್ತಾನವನ್ನು ವಶಪಡಿಸಿಕೊಂಡ ನಂತರ ಕಾಬೂಲ್‌ನಿಂದ ಭಾರತಕ್ಕೆ ಬಂದಿರುವ ಮೊದಲ ಉನ್ನತ ಮಟ್ಟದ ನಿಯೋಗ ಇದಾಗಿದೆ.(ಏಜೆನ್ಸೀಸ್​​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net