

ಹರ್ದೋಯಿ: ಕ್ಷುಲ್ಲಕ ಕಾರಣಕ್ಕೆ ತಂದೆಯೊಬ್ಬ ಮಗಳ ಕೂದಲು ಹಿಡಿದು ಎಳೆದಾಡಿ ಚಾಕುವಿನಿಂದ 15 ಬಾರಿ ಇರಿದಿರುವ ಘಟನೆ ಉತ್ತರಪ್ರದೇಶ ಹರ್ದೋಯಿ ಬಳಿಯ ಬಾಂದಾ ಎಂಬಲ್ಲಿ ನಡೆದಿದೆ.
ಕಾರಾಣಾಂತರಗಳಿಂದ ಹೆಸರನ್ನು ಬಹಿರಂಗಪಡಿಸಿಲ್ಲವಾದರೂ, 55ರ ಆಸುಪಾಸಿನ ವ್ಯಕ್ತಿಯ ಪತ್ನಿ ಅದಾಗಲೇ ಮೃತಪಟ್ಟಿದ್ದಾಳೆ. ಆಕೆಯ ಮಗಳು ಮನೆಯಲ್ಲಿದ್ದು ಮನೆಯ ಕೆಲಸವನ್ನೆಲ್ಲ ಆಕೆಯ ನಿಭಾಯಿಸುತ್ತಾಳೆ. ಆದರೆ ಆಕೆ ಶನಿವಾರ ರಾತ್ರಿ ಅಡುಗೆ ಮಾಡುವಾಗ ಎರಡು ಬಾರಿ ಉಪ್ಪು ಹಾಕಿದ್ದಾಳೆ. ಊಟಕ್ಕೆ ಕುಳಿತಾಗ ಉಪ್ಪು ಜಾಸ್ತಿಯಾಗಿದ್ದು ಕಂಡ ಆಕೆಯ ತಂದೆ, ಸಿಟ್ಟಿಗೆದ್ದು ಮಗಳ ಕೂದಲನ್ನ ಎಳೆದು ಈ ಬಗ್ಗೆ ಕೇಳಿದ್ದಾನೆ.
ಈ ವೇಳೆ ಮಗಳು ಸ್ಪಷ್ಟನೆ ನೀಡಲು ಮುಂದಾದಾಗ ಆತನ ಕೋಪ ಇನ್ನಷ್ಟು ಹೆಚ್ಚಾಗಿದ್ದು, ತಕ್ಷಣವೇ ಅಡುಗೆ ಮನೆಯಲ್ಲಿಟ್ಟಿದ್ದ ಚಾಕು ಎತ್ತಿಕೊಂಡು ಮಗಳ ಮೇಲೆ ತೀವ್ರವಾಗಿ ಹಲ್ಲೆ ನಡೆಸಿದ್ದಾನೆ. ಈ ವೇಳೆ ಆಕೆ ಚಿರಾಡಿದ್ದು, ಪಕ್ಕದ ಮನೆಯ ಮಹಿಳೆ ಬಂದು ನೋಡಿದಾಗ ಕೋಣೆಯ ಬಾಗಿಲು ಮುಚ್ಚಿತ್ತು. ಕೂಡಲೇ ಆಕೆ ಪೊಲೀಸರಿಗೆ ವಿಷಯ ತಿಳಿಸಿದ್ದಾಳೆ. ಬಳಿಕ ಸ್ಥಳಕ್ಕಾಗಮಿಸಿದ ಪೊಲೀಸರು ಬಾಗಿಲು ಒಡೆದು ಗಾಯಗೊಂಡಿದ್ದ ಬಾಲಕಿಯನ್ನು ತಮ್ಮ ವಾಹನದಲ್ಲಿ ಆಸ್ಪತ್ರೆಗೆ ಸಾಗಿಸಿದ್ದಾರೆ.
ಅಲ್ಲದೇ ಆರೋಪಿಯನ್ನು ಸ್ಥಳದಿಂದಲೇ ಪೊಲೀಸರು ಬಂಧಿಸಿದ್ದು, ಆತ ಬಾಲಕಿಯ ಎದೆ ಮತ್ತು ಸೊಂಟಕ್ಕೆ 15 ಬಾರಿ ಇರಿದಿದ್ದರಿಂದ ಆಕೆಯ ಸ್ಥಿತಿ ಗಂಭೀರವಾಗಿದೆ. ಮತ್ತೊಂದೆಡೆ ಆರೋಪಿ ತಂದೆಯು ಮಾನಸಿಕ ಅಸ್ವಸ್ಥನೂ ಆಗಿದ್ದಾನೆ. ವಿಶೇಷವಾಗಿ, ಆತನ ಪತ್ನಿಯ ಸಾವಿನ ನಂತರ ಮಾನಸಿಕ ಸಮತೋಲನ ಹದಗೆಟ್ಟಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಅಲ್ಲದೇ, ಮನೆಯೊಡತಿಯು ಕೂಡ, ಆತ ಮಾನಸಿಕ ಅಸ್ವಸ್ಥ. ಆದರೆ ಆತ ಈ ಹಿಂದೆ ಈ ರೀತಿ ಮಾಡಿಲ್ಲ ಎಂದು ಹೇಳಿದ್ದಾಳೆ.(ಏಜೆನ್ಸೀಸ್)