ಟೀಂ ಇಂಡಿಯಾದ ಪಾಕ್​ ಪ್ರವಾಸದಲ್ಲಿ ಭಾರತದ ಈ ಆಟಗಾರ ಇಮ್ರಾನ್​ ಖಾನ್​ಗಿಂತ ಹೆಚ್ಚು ಜನಪ್ರಿಯರಾಗಿದ್ದರಂತೆ...!

balaji
Published on

ನವದೆಹಲಿ: ಭಾರತ ಮತ್ತು ಪಾಕಿಸ್ತಾನ ನಡುವಿನ ಯಾವುದೇ ಕ್ರಿಕೆಟ್​ ಪಂದ್ಯವಿರಲಿ. ಅಲ್ಲೊಂದು ಕದನ ಕುತೂಹಲ ಇದ್ದೇ ಇರುತ್ತದೆ. ಮೈದಾನದಲ್ಲಿ ಆಟಗಾರರ ನಡುವಿನ ಸಂಘರ್ಷ ಉಭಯ ತಂಡಗಳ ಅಭಿಮಾನಿಗಳನ್ನು ತುದಿಗಾಲ ಮೇಲೆ ನಿಲ್ಲಿಸಿರುತ್ತದೆ. ಹೀಗಿರುವಾಗ ಪಾಕಿಸ್ತಾನದ ನೆಲದಲ್ಲಿ ಸ್ಥಳೀಯ ಆಟಗಾರನಿಗಿಂತಲೂ ಭಾರತೀಯ ಆಟಗಾರರು ಹೆಚ್ಚಿನ ಜನಪ್ರಿಯತೆ ಗಳಿಸುವುದು ಅಸಾಧ್ಯದ ಮಾತು ಎನಿಸುತ್ತದೆ. ಆದರೆ, ತಮಿಳುನಾಡು ಮೂಲದ ಲಕ್ಷ್ಮೀಪತಿ ಬಾಲಾಜಿ ಎಂಬ ವೇಗಿ ಈ ಮಾತನ್ನು ಸುಳ್ಳು ಮಾಡಿದ್ದರಂತೆ.

ಹೌದು, 2004ರಲ್ಲಿ ಭಾರತ ಸೌರವ್​ ಗಂಗೂಲಿ ನಾಯಕತ್ವದಲ್ಲಿ ಪಾಕ್​ ಪ್ರವಾಸ ಕೈಗೊಂಡು ಐದು ಏಕದಿನ ಮತ್ತು ಮೂರು ಟೆಸ್ಟ್​ ಪಂದ್ಯಗಳ ಸರಣಿಯನ್ನು ಆಡಿತ್ತು. ಮಾ.11ರಿಂದ ಏ.16ರ ನಡುವೆ ನಡೆದ ಈ ದ್ವಿಪಕ್ಷೀಯ ಸರಣಿಯ ಸಂದರ್ಭದಲ್ಲಿ ಲಕ್ಷ್ಮೀಪತಿ ಬಾಲಾಜಿ ಪಾಕಿಸ್ತಾನ ತಂಡದ ಮಾಜಿ ನಾಯಕ ಇಮ್ರಾನ್​ ಖಾನ್​ ಅವರಿಗಿಂತಲೂ ಹೆಚ್ಚಿನ ಜನಪ್ರಿಯತೆ ಗಳಿಸಿದ್ದರಂತೆ.

ಹೀಗೆಂದು ಆ ತಂಡದ ಭಾಗವಾಗಿದ್ದ ಮತ್ತೊಬ್ಬ ವೇಗಿ ಆಶೀಶ್​ ನೆಹ್ರಾ ತಿಳಿಸಿದ್ದಾರೆ.

ಲಕ್ಷ್ಮೀಪತಿ ಬಾಲಾಜಿ ಯಾರು ಎಂಬ ಬಗ್ಗೆ ಹೇಳುವುದಾದರೆ, ಅವರೊಬ್ಬ ವೇಗದ ಬೌಲರ್​. ಪ್ರತಿ ಎಸೆತವನ್ನು ಹಾಕಿದ ಬಳಿಕ ಎದುರಾಳಿ ಬ್ಯಾಟ್ಸ್​ಮನ್​ನತ್ತ ಒಂದು ನಗು ಅರಳಿಸಿ, ತಮ್ಮ ಬೌಲಿಂಗ್​ ಮಾರ್ಕ್​ಗೆ ಮರಳುತ್ತಿದ್ದರು. ಆದರೆ, ಆ ನಗುವಿನಲ್ಲಿ ವ್ಯಂಗ್ಯಕ್ಕಿಂತಲೂ ಒಂದು ರೀತಿಯ ಸ್ನೇಹಭಾವ ಸ್ಫುರಿಸುತ್ತಿತ್ತು ಎಂಬುದು ಗಮನಾರ್ಹ ಸಂಗತಿ.

ಪಾಕ್​ ವಿರುದ್ಧದ ಏಕದಿನ ಸರಣಿಯಲ್ಲಿ 6 ವಿಕೆಟ್​ ಹಾಗೂ ಟೆಸ್ಟ್​ ಸರಣಿಯಲ್ಲಿ 12 ವಿಕೆಟ್​ ಕಬಳಿಸಿ ಉತ್ತಮ ಪ್ರದರ್ಶನ ತೋರಿದ್ದ ಬಾಲಾಜಿ, ತಮ್ಮ ನಗುವಿನಿಂದಾಗಿ ಹೆಚ್ಚು ಜನಪ್ರಿಯತೆ ಗಳಿಸಿದ್ದರು ಎಂದು ನೆಹ್ರಾ ಹೇಳಿದ್ದಾರೆ.

ಬ್ಯಾಟಿಂಗ್​ನಲ್ಲೂ ಮಿಂಚಿದ್ದ ಬಾಲಾಜಿ, ಏಕದಿನ ಸರಣಿಯಲ್ಲಿ 3 ಇನಿಂಗ್ಸ್​ನಿಂದ 45 ರನ್​ ಕಲೆ ಹಾಕಿದ್ದರು. ಶೋಯೆಬ್​ ಅಖ್ತರ್​ ಅವರ ಬೌಲಿಂಗ್​ನಲ್ಲಿ ಅವರು ಸಿಡಿಸಿದ ಭರ್ಜರಿ ಸಿಕ್ಸರ್​ ಇಂದಿಗೂ ಅವರ ಅತ್ಯುತ್ತಮ ಹೊಡೆತ ಎಂದೇ ಪರಿಗಣಿಸಲ್ಪಟ್ಟಿದೆ ಎಂದು ವಿವರಿಸಿದ್ದಾರೆ.

ವೀರೇಂದ್ರ ಸೆಹ್ವಾಗ್​ ತ್ರಿಶತಕ, ರಾಹುಲ್​ ದ್ರಾವಿಡ್​ ದ್ವಿಶತಕ, ಇರ್ಫಾನ್​ ಪಠಾಣ್​ ಅವರ ಚೇತೋಹಾರಿ ಪ್ರದರ್ಶನಗಳು ಅವುಗಳದ್ದೇ ಆದ ರೀತಿಯಲ್ಲಿ ಕ್ರಿಕೆಟ್​ ಅಭಿಮಾನಿಗಳನ್ನು ರಂಜಿಸಿದ್ದವು. ಆದರೆ, ನಗುಮೊಗದ ವೇಗಿ ಎಂದೇ ಪ್ರಖ್ಯಾತರಾಗಿದ್ದ ಬಾಲಾಜಿ, ಮೈದಾನದಾಚೆ ಭಾರಿ ಜನಪ್ರಿಯರಾಗಿದ್ದರು ಎಂದು ನೆಹ್ರಾ ಹೇಳಿದ್ದಾರೆ.

ಬಾಲಾಜಿ ತೀವ್ರ ಗಾಯಕ್ಕೆ ತುತ್ತಾಗಿದ್ದರಿಂದ ಅವರ ಕ್ರಿಕೆಟ್​ ವೃತ್ತಿಜೀವನ ಮೊಟಕುಗೊಂಡಿತು. 2012ರ ಟಿ20 ವಿಶ್ವಕಪ್​ ಟೂರ್ನಿಗೂ ಮುನ್ನ ಅವರು ಮೈದಾನಕ್ಕೆ ಮರಳಿ, ಐದು ಟಿ20 ಪಂದ್ಯಗಳನ್ನು ಆಡಿದರು. ಆದರೆ ಅವರ ಬೌಲಿಂಗ್​ನಲ್ಲಿ ಹಿಂದಿನ ಮೊನಚು ಇಲ್ಲದ ಕಾರಣ, ಅವರನ್ನು ತಂಡದಿಂದ ಕೈಬಿಡಲಾಯಿತು. ಆನಂತರದಲ್ಲಿ ಅವರು ಐಪಿಎಲ್​ನ ಚೆನ್ನೈ ಸೂಪರ್​ ಕಿಂಗ್ಸ್​ ಮತ್ತು ತಮಿಳುನಾಡು ಕ್ರಿಕೆಟ್​ ತಂಡದ ಬೌಲಿಂಗ್​ ಕೋಚ್​ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net