Ladakh Violence | ಇದರಲ್ಲಿ ಕಾಂಗ್ರೆಸ್​​ ತಪ್ಪಿಲ್ಲ.. ಕೇಂದ್ರ ಸರ್ಕಾರದ ವಿಫಲತೆಯಿಂದ ಹಿಂಸಾಚಾರ : ಮಾಜಿ ಸಿಎಂ ಫಾರೂಕ್ ಅಬ್ದುಲ್ಲಾ!

Farooq Abdullah
Published on

Ladakh Violence: ಲಡಾಖ್ ಜನರ ಮೇಲೆ ಬಲಪ್ರಯೋಗ ಮಾಡುವುದನ್ನು ನ್ಯಾಷನಲ್ ಕಾನ್ಫರೆನ್ಸ್ ಅಧ್ಯಕ್ಷ, ಮಾಜಿ ಮುಖ್ಯಮಂತ್ರಿ ಫಾರೂಕ್ ಅಬ್ದುಲ್ಲಾ ಖಂಡಿಸಿದ್ದು, ಕೇಂದ್ರ ಸರ್ಕಾರ ತನ್ನ ಭರವಸೆಗಳನ್ನು ಈಡೇರಿಸಲು ವಿಫಲವಾಗಿರುವುದರಿಂದಲೇ ಲಡಾಖ್‌ನಲ್ಲಿ ಅಶಾಂತಿ ಮತ್ತು ಹಿಂಸಾಚಾರ ಸಂಭವಿಸಿದೆ ಎಂದು ಹೇಳಿದರು.

ಲಡಾಖ್ ಸೂಕ್ಷ್ಮ ಪ್ರದೇಶವಾಗಿದ್ದು, ಚೀನಾ ಮೆಕ್‌ಮಹಾನ್ ರೇಖೆಯನ್ನು ಒಪ್ಪಿಕೊಂಡಿಲ್ಲ. ಸರ್ಕಾರ ಜನರನ್ನು ಮೌನಗೊಳಿಸುವ ಬದಲು ಇರುವ ಸಮಸ್ಯೆಗಳನ್ನು ಪರಿಹರಿಸುವ ಪ್ರಯತ್ನ ಮಾಡಬೇಕು ಎಂದರು.

370 ನೇ ವಿಧಿಯನ್ನು ರದ್ದುಗೊಳಿಸಿದ ಬಳಿಕ ಜಮ್ಮು ಮತ್ತು ಕಾಶ್ಮೀರವನ್ನು ಎರಡು ಕೇಂದ್ರಾಡಳಿತ ಪ್ರದೇಶಗಳಾಗಿ - ಜೆ & ಕೆ ಮತ್ತು ಲಡಾಖ್ - ವಿಭಜಿಸಿದ ನಂತರ ಸರ್ಕಾರ ನೀಡಿದ ಪೊಳ್ಳು ಭರವಸೆಗಳ ಪರಿಣಾಮವೇ ನಾಗರಿಕ ಅಶಾಂತಿ ಉದ್ಬವಿಸಿದೆ, ಯುವಕರು ಉಪವಾಸ ಸತ್ಯಾಗ್ರಹ ಸ್ಥಳದಿಂದ ಹೊರಬಂದು ಗಾಂಧಿ ಮಾರ್ಗವನ್ನು ತ್ಯಜಿಸಿ, ಕಲ್ಲು ತೂರಾಟ ಮತ್ತು ಕಟ್ಟಡಗಳಿಗೆ ಬೆಂಕಿ ಹಚ್ಚುವ ಮೂಲಕ ದಾಳಿ ನಡೆಸಿದರು ಎಂದು ಅಬ್ದುಲ್ಲಾ ಹೇಳಿದರು.

ಕಾಂಗ್ರೆಸ್​ ಕೈವಾಡ ಹೇಳಿಕೆಯನ್ನು ತಿರಸ್ಕರಿಸಿದ ಅಬ್ದುಲ್ಲಾ.

ಲಡಾಖ್‌ನಲ್ಲಿ ನಡೆದ ಹಿಂಸಾಚಾರದ ಹಿಂದೆ ಒಂದು ನಿರ್ದಿಷ್ಟ ಪಕ್ಷ - ಕಾಂಗ್ರೆಸ್ - ಕೈವಾಡವಿದೆ ಎಂಬ ಹೇಳಿಕೆಗಳನ್ನು ಮಾಜಿ ಮುಖ್ಯಮಂತ್ರಿ ತಳ್ಳಿಹಾಕಿದ್ದು, ಕಾಂಗ್ರೆಸ್‌ಗೆ ಇಲ್ಲಿ ಯಾವುದೇ ದೊಡ್ಡ ಹೆಜ್ಜೆಗುರುತು ಇಲ್ಲ. ಇದು ಜನರ ಧ್ವನಿ ಎಂದು ಅಬ್ದುಲ್ಲಾ ಹೇಳಿದರು. ನಮಗೆ ಕ್ಷೇತ್ರ ಪುನರ್ವಿಂಗಡಣೆ, ಚುನಾವಣೆಗಳು ಮತ್ತು ರಾಜ್ಯ ಸ್ಥಾನಮಾನದ ಭರವಸೆ ನೀಡಲಾಯಿತು. ಆದರೆ ನಮಗೆ ಭರವಸೆ ನೀಡಿದಂತೆ ರಾಜ್ಯ ಸ್ಥಾನಮಾನ ಸಿಗಲಿಲ್ಲ, ಲಡಾಖ್‌ನ ಯುವಕರು ಸೋನಮ್ ವಾಂಗ್‌ಚುಕ್ ಅವರ ಪ್ರತಿಭಟನೆಯ ವಿಧಾನವನ್ನು ತ್ಯಜಿಸಲು ನಿರ್ಧರಿಸಿದ ನಂತರ ಹಿಂಸಾಚಾರ ಭುಗಿಲೆದ್ದಿತು ಎಂದು ಅವರು ಹೇಳಿದರು. ಈಗ ಸೋನಮ್ ವಾಂಗ್‌ಚುಕ್ ವಿರುದ್ಧ ಸಿಬಿಐ ವಿಚಾರಣೆ ನಡೆಸುತ್ತಿದೆ, ಸರ್ಕಾರ ಏಜೆನ್ಸಿಗಳ ಮೂಲಕ ಬಲಪ್ರಯೋಗ ಮಾಡಿದರೆ, ಪರಿಸ್ಥಿತಿ ಸ್ಫೋಟಗೊಂಡಿದೆ ಎಂದು ಅರ್ಥ, ಈ ರೀತಿಯ ಅಧಿಕಾರ ಬಳಸುವ ಬದಲು, ಮಾತುಕತೆಗಳನ್ನು ಪ್ರಾರಂಭಿಸಿ, ಅಂತಿಮವಾಗಿ ಒಂದು ತೀರ್ಮಾನಕ್ಕೆ ಬನ್ನಿ ಎಂದು ಸಲಹೆ ನೀಡಿದರು.

ಲಡಾಖ್‌ನಲ್ಲಿ ನಿನ್ನೆ ನಡೆದ ಹಿಂಸಾಚಾರದ ನಂತರ ಪೊಲೀಸರು ಕಾರ್ಯಾಚರಣೆ ಕೈಗೊಂಡಿದ್ದಾರೆ. ಲೇಹ್‌ನಲ್ಲಿ ಬೆಳಗಿನ ಜಾವ ನಡೆಸಿದ ದಾಳಿ ಮತ್ತು ಶೋಧ ಕಾರ್ಯಾಚರಣೆಗಳಲ್ಲಿ ಸುಮಾರು 50 ಜನರನ್ನು ಬಂಧಿಸಲಾಗಿದೆ ಎಂದು ವರದಿಯಾಗಿದೆ.

ಸರ್ಕಾರದ ಆರೋಪವೇನು.?

ಹವಾಮಾನ ಕಾರ್ಯಕರ್ತ ಸೋನಮ್ ವಾಂಗ್‌ಚುಕ್ ಅವರ ಪ್ರಚೋದನಕಾರಿ ಹೇಳಿಕೆಗಳೇ ಬೃಹತ್ ಹಿಂಸಾಚಾರಕ್ಕೆ ಕಾರಣ ಎಂದು ಕೇಂದ್ರ ಸರ್ಕಾರ ಆರೋಪಿಸಿದ್ದು. ಭದ್ರತಾ ಪಡೆಗಳ ಘರ್ಷಣೆ ಮತ್ತು ಗುಂಡಿನ ದಾಳಿಯಲ್ಲಿ ಕನಿಷ್ಠ ನಾಲ್ವರು ಪ್ರತಿಭಟನಾಕಾರರು ಸಾವನ್ನಪ್ಪಿದ್ದಾರೆ ಮತ್ತು 90 ಜನರು ಗಾಯಗೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ.(ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net