

ವಿಜಯವಾಣಿ ವಿಶೇಷ ರಾಣೆಬೆನ್ನೂರ
ಸರ್ಕಾರ ಬೆಂಬಲ ಬೆಲೆಯಲ್ಲಿ ಭತ್ತ ಖರೀದಿಗೆ ಜಿಲ್ಲೆಯಲ್ಲಿ ಕೇಂದ್ರ ತೆರೆದಿದೆ ನಿಜ. ಆದರೆ, ಒಬ್ಬ ರೈತನಿಂದ 40 ಕ್ವಿಂಟಾಲ್ ಭತ್ತ ಮಾತ್ರ ಖರೀದಿಸುವ ಷರತ್ತು ವಿಧಿಸಿದ್ದು, ಭತ್ತ ಬೆಳೆಗಾರರಿಗೆ ಸಂಕಷ್ಟ ತಂದೊಡ್ಡಿದೆ. ಅಲ್ಲದೆ, ಸರ್ಕಾರದ ಷರತ್ತು ದಲ್ಲಾಳಿಗಳ ಪಾಲಿಗೆ ವರದಾನವಾಗಿ ಪರಿಣಮಿಸಿದೆ.
ಜಿಲ್ಲೆಯಲ್ಲಿ ಸಣ್ಣ ರೈತರ ಪ್ರಮಾಣ ಶೇ. 60ಕ್ಕಿಂತ ಅಧಿಕವಿದೆ. ಎರಡರಿಂದ ಮೂರು ಎಕರೆ ಜಮೀನು ಹೊಂದಿರುವವರು ಇದರ ವ್ಯಾಪ್ತಿಗೆ ಬರುತ್ತಾರೆ. ಒಂದು ಎಕರೆಯಲ್ಲಿ ರೈತರು 30ರಿಂದ 35 ಕ್ವಿಂಟಾಲ್ ಭತ್ತ ಬೆಳೆಯುತ್ತಾರೆ. ಸರ್ಕಾರ 40 ಕ್ವಿಂಟಾಲ್ ಭತ್ತ ಖರೀದಿಸಿದರೆ, ಉಳಿದ ಭತ್ತವನ್ನು ಯಾರಿಗೆ ಮಾರಬೇಕು ಎಂಬ ಚಿಂತೆಯಲ್ಲಿದ್ದಾರೆ.
ಕೆಲವರು ದಿಕ್ಕು ತೋಚದೆ ಅಸಹಾಯಕರಾಗಿ ಕೂತರೆ, ಮತ್ತೆ ಕೆಲವರು ಅನಿವಾರ್ಯವಾಗಿ ಸರ್ಕಾರ ನಿಗದಿಪಡಿಸಿದ ಬೆಂಬಲ ಬೆಲೆಗಿಂತ ಕನಿಷ್ಠ ಬೆಲೆಗೆ ದಲ್ಲಾಳಿಗಳಿಗೆ ಮಾರಾಟ ಮಾಡಿ ನಷ್ಟ ಅನುಭವಿಸುತ್ತಿದ್ದಾರೆ. ಸರ್ಕಾರದ ಅವೈಜ್ಞಾನಿಕ ಕ್ರಮದಿಂದ ಭತ್ತ ಬೆಳೆಗಾರರು ನಷ್ಟ ಅನುಭವಿಸುತ್ತಿದ್ದಾರೆ. ಆದ್ದರಿಂದ ಕೂಡಲೆ ಸರ್ಕಾರ ಖರೀದಿ ಮಿತಿಯನ್ನು ಕನಿಷ್ಠ 150 ಕ್ವಿಂಟಾಲ್ವರೆಗೆ ಹೆಚ್ಚಿಸಬೇಕು ಎಂಬ ಒತ್ತಾಯ ಕೇಳಿಬಂದಿದೆ.
ಸರ್ಕಾರ ಪ್ರತಿ ಕ್ವಿಂಟಾಲ್ ಭತ್ತಕ್ಕೆ 1,815 ರೂ. ಬೆಂಬಲ ಬೆಲೆ ನಿಗದಿಪಡಿಸಿದೆ. ಆದರೆ, ದಲ್ಲಾಳಿಗಳು ಬೆಂಬಲ ಬೆಲೆಗಿಂತ 150ರಿಂದ 200 ರೂ. ಕಡಿಮೆ ದರಕ್ಕೆ ಖರೀದಿಸುತ್ತಿದ್ದಾರೆ. ಹೀಗಾಗಿ, ಸರ್ಕಾರದ ಕ್ರಮವು ದಲ್ಲಾಳಿಗಳಿಗೆ ಲಾಭ ತಂದುಕೊಡುತ್ತಿದೆಯೇ ಹೊರತು ರೈತರಿಗಲ್ಲ ಎಂದು ಭತ್ತ ಬೆಳೆಗಾರರು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಹಾನಗಲ್ಲನಲ್ಲಿ ಹೆಚ್ಚು ಖರೀದಿ: ಜಿಲ್ಲೆಯ ಹಿರೇಕೆರೂರ, ಶಿಗ್ಗಾಂವಿ ಹಾಗೂ ಹಾನಗಲ್ಲ ಎಪಿಎಂಸಿಯಲ್ಲಿ ಭತ್ತ ಖರೀದಿ ಕೇಂದ್ರ ಆರಂಭಿಸಲಾಗಿತ್ತು. ಆದರೆ, ಹಿರೇಕೆರೂರ, ಶಿಗ್ಗಾಂವಿಯಲ್ಲಿ ಹೇಳಿಕೊಳ್ಳುವಷ್ಟು ಭತ್ತ ಮಾರಾಟವಾಗಿಲ್ಲ. ಹಾನಗಲ್ಲ ಎಪಿಎಂಸಿ ಭತ್ತ ಖರೀದಿ ಕೇಂದ್ರದಲ್ಲಿ 783 ರೈತರು ಭತ್ತ ಮಾರಾಟಕ್ಕೆ ನೋಂದಣಿ ಮಾಡಿಕೊಂಡಿದ್ದು, ಈಗಾಗಲೇ 639 ರೈತರು ಮಾರಾಟ ಮಾಡಿದ್ದಾರೆ. 20 ಸಾವಿರಕ್ಕೂ ಅಧಿಕ ಕ್ವಿಂಟಾಲ್ನಷ್ಟು ಖರೀದಿ ಮಾಡಲಾಗಿದೆ ಎಂದು ಹಾವೇರಿ ಎಪಿಎಂಸಿ ಸಹಾಯಕ ನಿರ್ದೇಶಕ ಬಿ.ಸಿ. ಪರಮಶೆಟ್ಟಿ ಅವರು ‘ವಿಜಯವಾಣಿ’ಗೆ ತಿಳಿಸಿದ್ದಾರೆ. ರಾಣೆಬೆನ್ನೂರಿನ ಭತ್ತ ಬೆಳೆಗಾರರು ತುಮಕೂರು, ದಾವಣಗೆರೆ ಕಡೆಯಿಂದ ವ್ಯಾಪಾರಸ್ಥರನ್ನು ಕರೆಯಿಸಿ ನೇರವಾಗಿ ಮಾರಾಟ ಮಾಡುತ್ತಿದ್ದಾರೆ.
ಕರೊನಾ ಲಾಕ್ಡೌನ್ನಿಂದ ರೈತರು ಮೊದಲೇ ಸಂಕಷ್ಟಕ್ಕೆ ಸಿಲುಕಿದ್ದಾರೆ. ಸೂಕ್ತ ಮಾರುಕಟ್ಟೆ ವ್ಯವಸ್ಥೆಯಿಲ್ಲ. ಇಂತಹದ್ದರಲ್ಲಿ ಸರ್ಕಾರದ ಕ್ರಮದಿಂದ ಭತ್ತ ಬೆಳೆಗಾರರಿಗೆ ಮತ್ತಷ್ಟು ತೊಂದರೆಯಾಗುತ್ತಿದೆ. ಹೀಗಾಗಿ, ಸರ್ಕಾರ ನಿಯಮ ಪರಿಷ್ಕರಿಸಿ ಒಬ್ಬ ರೈತನಿಂದ ಕನಿಷ್ಠ 150 ಕ್ವಿಂಟಾಲ್ ಖರೀದಿಗೆ ಕ್ರಮ ಕೈಗೊಳ್ಳಬೇಕು. | ಮಲ್ಲೇಶಪ್ಪ ಎಸ್.ಎಚ್., ಭತ್ತ ಬೆಳೆಗಾರ ಒಬ್ಬ ರೈತನಿಂದ 40 ಕ್ವಿಂಟಾಲ್ ಭತ್ತ ಮಾತ್ರ ಖರೀದಿಸುವ ಕುರಿತು ಹಾಗೂ ಇನ್ನುಳಿದ ಭತ್ತ ಮಾರಾಟಕ್ಕೆ ರೈತರು ತೊಂದರೆ ಅನುಭವಿಸುತ್ತಿರುವ ಕುರಿತು ಸರ್ಕಾರದ ಗಮನ ಸೆಳೆಯಲಾಗುವುದು. | ಬಸವರಾಜ ಹುಲ್ಲತ್ತಿ, ಎಪಿಎಂಸಿ ಸದಸ್ಯ ರಾಣೆಬೆನ್ನೂರ