ಕೃಷಿಕರೆಡೆಗೆ ತಂತ್ರಜ್ಞಾನ ತಲುಪುವಲ್ಲಿ ಸಮಸ್ಯೆ: ಎನ್.ಎ.ನೆಲ್ಲಿಕುನ್ನು ಹೇಳಿಕೆ

11
Published on

ವಿಜಯವಾಣಿ ಸುದ್ದಿಜಾಲ ಬದಿಯಡ್ಕ

ಹವಾಮಾನ್ಯ ವ್ಯೆಪರೀತ್ಯ ಅಡಕೆ ಕೃಷಿಕರನ್ನು ಕಂಗೆಡಿಸಿದೆ. ವಿವಿಧ ರೋಗಗಳಿಗೆ ಪ್ರತಿರೋಧ ಔಷಧಗಳ ಬಗ್ಗೆ ಕೃಷಿಕರಿಗೆ ಸ್ಪಷ್ಟ ಮಾಹಿತಿಗಳ ಕೊರತೆಯೂ ಇದೆ. ಈ ನಿಟ್ಟಿನಲ್ಲಿ ಕೇಂದ್ರೀಯ ತೋಟಗಾರಿಕಾ ಸಂಶೋಧನಾ ಕೇಂದ್ರವನ್ನು ಸಮರ್ಥವಾಗಿ ಬಳಸಬೇಕು. ತಂತ್ರಜ್ಞಾನಗಳು ಕೃಷಿಕರೆಡೆಗೆ ತಲುಪುವಲ್ಲೂ ಸಮಸ್ಯೆಗಳಿವೆ ಎಂದು ಕಾಸರಗೋಡು ಶಾಸಕ ಎನ್.ಎ.ನೆಲ್ಲಿಕುನ್ನು ಹೇಳಿದರು.

ಕಿಸಾನ್ ಸೇನೆ ಜಿಲ್ಲಾ ಘಟಕದ ನೇತೃತ್ವದಲ್ಲಿ ಬದಿಯಡ್ಕದಲ್ಲಿ ಸೋಮವಾರ ಅಡಕೆ ಕೃಷಿಕರ ಸಮಾವೇಶ ಉದ್ಘಾಟಿಸಿ ಮಾತನಾಡಿದರು.

ಕಿಸಾನ್ ಸೇನೆ ಜಿಲ್ಲಾಧ್ಯಕ್ಷ ಕೆ.ಗೋವಿಂದ ಭಟ್ ಕೊಟ್ಟಂಗುಳಿ ಅಧ್ಯಕ್ಷತೆ ವಹಿಸಿದ್ದರು. ಪದ್ಮಶ್ರೀ ಪುರಸ್ಕೃತ ಸತ್ಯನಾರಾಯಣ ಬೆಳೇರಿ, ಕಾರಡ್ಕ ಬ್ಲಾಪಂ ಅಧ್ಯಕ್ಷ ಸಿಜಿ ಮ್ಯಾಥ್ಯೂ, ಸದಸ್ಯ ಕುಂಞಂಬು ನಂಬ್ಯಾರ್, ಬದಿಯಡ್ಕ ಗ್ರಾಪಂ ಅಧ್ಯಕ್ಷೆ ಶಾಂತಾ ಬಾರಡ್ಕ, ಸದಸ್ಯ ಶ್ಯಾಮ ಪ್ರಸಾದ್ ಮಾನ್ಯ, ರಾಘವೇಂದ್ರ ಪಿ., ಜ್ಯೋತಿ ಕುಮಾರಿ ಕೆ.ಎನ್., ಮಾಹಿನ್ ಕೇಳೋಟ್, ನಾಸಿರ್ ಚೆರ್ಕಳ, ಬಿ.ರಾಜೇಂದ್ರ ಪ್ರಸಾದ್ ಉಪಸ್ಥಿತರಿದ್ದರು.

ಕಾಸರಗೋಡು ಸಿಪಿಸಿಆರ್‌ಐ ವಿಜ್ಞಾನಿಗಳಾದ ಡಾ.ಆರ್.ತವಾ ಪ್ರಕಾಶ್ ಪಾಂಡ್ಯನ್, ಡಾ.ಚೈತ್ರಾ ಎಂ., ಅಜಿತ್ ಕುಮಾರ್, ತಳಿಯಮೋಳ್ ಕೃಷಿಕರೊಂದಿಗೆ ಸಂವಾದ ನಡೆಸಿದರು. ಕಿಸಾನ್ ಸೇನೆ ಮುಖ್ಯ ರಕ್ಷಾಧಿಕಾರಿ ಚಂದ್ರಶೇಖರ ರಾವ್ ಕಲ್ಲಗ ಪ್ರಾಸ್ತಾವಿಕ ಮಾತನಾಡಿದರು. ಕಿಸಾನ್ ಸೇನೆ ಪ್ರಧಾನ ಕಾರ್ಯದರ್ಶಿ ಶುಕೂರ್ ಕಾನಾಜೆ ಸ್ವಾಗತಿಸಿದರು. ಜತೆ ಕಾರ್ಯದರ್ಶಿ ಸಚಿನ್ ಕುಮಾರ್ ಮಾಟೆಡ್ಕ ವಂದಿಸಿದರು.

ಕಾಸರಗೋಡು ಜಿಲ್ಲೆಯಲ್ಲಿ ಅಡಿಕೆ ಕೃಷಿ ಪ್ರಧಾನ ವಾಣಿಜ್ಯ ಬೆಳೆಯಾಗಿದ್ದು, ಸಾವಿರಾರು ಕುಟುಂಬಗಳು ಅಡಕೆ ಕೃಷಿಯನ್ನೇ ಅವಲಂಬಿಸಿ ಜೀವನ ನಡೆಸುತ್ತಿದ್ದಾರೆ. ಆದರೆ ವಿವಿಧ ಕಾರಣಗಳಿಂದ ಅತಂತ್ರಕ್ಕೆ ಸಿಲುಕಿರುವ ಅಡಕೆ ಕೃಷಿಕರಿಗೆ ನ್ಯಾಯ ದೊರಕಿಸುವ ನಿಟ್ಟಿನಲ್ಲಿ ಸರ್ಕಾರದೊಂದಿಗೆ ಕಾರ್ಯ ಯೋಜನೆಗಳು ಸಿದ್ಧಗೊಂಡಿವೆ. ವೈಜ್ಞಾನಿಕ ಜ್ಞಾನದೊಂದಿಗೆ ಕೃಷಿ ನಡೆಸಬೇಕಿದ್ದು, ಸ್ಥಳೀಯಾಡಳಿತ ಸಂಸ್ಥೆಗಳಿಗೂ ಜವಾಬ್ದಾರಿ ಇದೆ. ಎನ್.ಎ.ನೆಲ್ಲಿಕುನ್ನು ಶಾಸಕ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net