

ಗುಂಡ್ಲುಪೇಟೆ: ತಾಲೂಕಿನ ಪುತ್ತನಪುರ ಗ್ರಾಮದ ಕೆರೆಗೆ ಮಳೆ ನೀರು ಹರಿಯುವ ಹಳ್ಳವನ್ನು ಮುಚ್ಚಿಸಿ ಪ್ರಭಾವಿ ವ್ಯಕ್ತಿಗಳಿಗೆ ದಾರಿ ಮಾಡಿಕೊಟ್ಟಿರುವ ಕಂದಾಯ ಅಧಿಕಾರಿಗಳ ವಿರುದ್ಧ ಅಕ್ಕಪಕ್ಕದ ಜಮೀನುಗಳ ರೈತರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕಾಲಾಂತರದಿಂದಲೂ ಮಳೆ ನೀರು ಹರಿಯುವ ಮಾರ್ಗವನ್ನು ಬದಲಿಸುವ ಇಲ್ಲವೇ ಮುಚ್ಚುವುದನ್ನು ಸರ್ಕಾರ ಕಟ್ಟುನಿಟ್ಟಾಗಿ ನಿರ್ಬಂಧಿಸಿದೆ. ಆದರೆ ಕಾಲುವೆ ಒತ್ತುವರಿ ತೆರವು ಮಾಡುವುದಾಗಿ ನೋಟಿಸ್ ನೀಡಿದ್ದ ತಹಸೀಲ್ದಾರ್ ಖುದ್ದಾಗಿ ತಾವೇ ನಿಂತು ಪೊಲೀಸ್ ಬೆಂಗಾವಲಿನಲ್ಲಿ ಮಳೆನೀರು ಹರಿಯುವ ನೀರ್ಗಾಲುವೆಗೆ ಮಣ್ಣು ಮುಚ್ಚಿಸಿ ದಾರಿ ಮಾಡಿಕೊಟ್ಟಿದ್ದಾರೆ. ಹಂಗಳದ ಕುರುಬನಕಟ್ಟೆಯಿಂದ ಹೊರಬಂದ ಮಳೆನೀರು ಹರಿಯುತ್ತಿದ್ದ ಗ್ರಾಮದ ಸರ್ವೇ ನಂ. 80/1, 80/2, 80/3ರ ಮೂಲಕ ಹಾದು ಪುತ್ತನಪುರ ಕೆರೆಗೆ ಹರಿದುಹೋಗುವ ಕಾಲುವೆಯನ್ನು ಖುದ್ದಾಗಿ ತಹಸೀಲ್ದಾರ್ ನಿಂತು ಮಣ್ಣು ಮುಚ್ಚಿಸಿದ್ದಾರೆ. ಇದರಿಂದ ಮಳೆಗಾಲದಲ್ಲಿ ಹರಿದು ಬರುವ ನೀರು ಅಕ್ಕಪಕ್ಕದ ಜಮೀನುಗಳಿಗೆ ನುಗ್ಗಿ ಬೆಳೆನಾಶ ಮಾಡುವ ಆತಂಕ ಎದುರಾಗಿದೆ ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕೆರೆ ಒತ್ತುವರಿ ಮಾಡಿಕೊಂಡಿರುವ ಬಗ್ಗೆ ತಾಲೂಕಿನ ನಾನಾ ಗ್ರಾಮಗಳ 31 ರೈತರ ಮೇಲೆ ಕಂದಾಯ ಇಲಾಖೆ ಕೇಸ್ ಹಾಕಿ ಬೆಂಗಳೂರಿಗೆ ಅಲೆದಾಡುವಂತೆ ಮಾಡಿತು. ಅಲ್ಲದೆ ಕೋಟ್ಯಂತರ ರೈತರ ಜಮೀನುಗಳಿಗೆ ಹೋಗಲು ರಸ್ತೆಗಳಿಲ್ಲ. ಆದರೆ ಪ್ರಭಾವಿಗಳ ಒತ್ತಡಕ್ಕೆ ಮಣಿದ ಕಂದಾಯ ಇಲಾಖೆ ನೀರು ಕಾಲುವೆಗೆ ಮಣ್ಣು ತುಂಬಿಸಿ ಮುಚ್ಚಿಸಿ ಕಾನೂನನ್ನು ಗಾಳಿಗೆ ತೂರಿದ್ದಾರೆ. ಇದರಿಂದ ಮಳೆ ನೀರು ಅಕ್ಕಪಕ್ಕದ ಜಮೀನುಗಳಿಗೆ ನುಗ್ಗಿ ಬೆಳೆ ನಾಶವಾಗುವ ಭೀತಿಯುಂಟಾಗಿದೆ.
ಮಹೇಂದ್ರ, ಅಂಕಹಳ್ಳಿ ಗ್ರಾಮಸ್ಥ
ತಮ್ಮ ಜಮೀನಿಗೆ ಹೋಗುವ ದಾರಿಯನ್ನು ಗುರುತಿಸಿಕೊಡುವಂತೆ ರಾಧಿಕಾ ರಾಜ್ ಸಲ್ಲಿಸಿದ್ದ ಅರ್ಜಿಯನ್ನು ಪರಿಶೀಲಿಸಿದ ಜಿಲ್ಲಾಧಿಕಾರಿಗಳು ಒತ್ತುವರಿ ತೆರವುಗೊಳಿಸುವಂತೆ ಸೂಚನೆ ನೀಡಿದ್ದ ಹಿನ್ನೆಲೆಯಲ್ಲಿ 17 ಅಡಿ ಒತ್ತುವರಿ ತೆರವುಗೊಳಿಸಲಾಗಿದೆ. ಮಳೆಗಾಲದಲ್ಲಿ ನೀರು ಹರಿದು ಹೋಗಲು 4 ಅಡಿ ಅಳತೆಗೆ ಕಾಲುವೆಯನ್ನು ಬಿಟ್ಟು 10 ಅಡಿ ಅಗಲದ ರಸ್ತೆ ನಿರ್ಮಿಸಲಾಗಿದೆ. ಇದರಿಂದ ಮಳೆನೀರು ಹರಿಯಲು ಮತ್ತು ರೈತರು ಜಮೀನುಗಳಿಗೆ ಹೋಗಲು ಅನುಕೂಲವಾಗಲಿದೆ.
ಟಿ.ರಮೇಶ್ ಬಾಬು, ತಹಸೀಲ್ದಾರ್