ಬೆಂಗಳೂರು: ಪಂಜಾಬಿನ ಪಟಿಯಾಲ ಬಳಿ ಸಂಭವಿಸಿದ ಅಪಘಾತದಲ್ಲಿ ತೀವ್ರ ಗಾಯಗೊಂಡ ರೈತ ಮುಖಂಡ ಕುರಬೂರು ಶಾಂತಕುಮಾರ್ ಅವರನ್ನು ಏರ್ ಆಂಬುಲೆನ್ಸ್ ಮೂಲಕ ಬೆಂಗಳೂರಿಗೆ ಕರೆ ತರಲಾಗಿದೆ.
ಚಿಕಿತ್ಸೆಗಾಗಿ ಶಾಂತಕುಮಾರ್ ಅವರನ್ನು ಮಣಿಪಾಲ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ(Farmer leader Shanthakumar admitted to Manipal hospital) . ಶಾಂತಕುಮಾರ್ ಅವರು ಶೀಘ್ರ ಗುಣಮುಖರಾಗಲಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ(CM Siddaramaiah) ಹಾರೈಸಿದ್ದಾರೆ.
ಮೂರು ದಿನಗಳ ಹಿಂದೆ ಸಂಭವಿಸಿದ ಅಪಘಾತದಲ್ಲಿ ಶಾಂತಕುಮಾರ್ ಗಾಯಗೊಂಡು ಪಟಿಯಾಲದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.
ವಿಷಯ ತಿಳಿದ ಕೂಡಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಏರ್ ಆಂಬುಲೆನ್ಸ್ ಮೂಲಕ ಶಾಂತಕುಮಾರ್ ಅವರನ್ನು ಬೆಂಗಳೂರಿಗೆ ಕರೆತರುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದರು.
ಈ ಮಧ್ಯೆ ದೆಹಲಿ ನಿವಾಸಿ ಆಯುಕ್ತ ಇಂಕೊಂಗ್ಲ ಜಮೀರ್ ಅವರು ಪಂಜಾಬ್ ಸರ್ಕಾರದ ಮುಖ್ಯ ಕಾರ್ಯದರ್ಶಿ ಹಾಗೂ ಪಟಿಯಾಲದ ಆಸ್ಪತ್ರೆ ವೈದ್ಯರ ಜೊತೆ ಸತತ ಸಂಪರ್ಕದಲ್ಲಿದ್ದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಸೂಚನೆ ಮೇರೆಗೆ ಅಧಿಕಾರಿಗಳು ಶನಿವಾರ ಏರ್ ಆಂಬುಲೆನ್ಸ್ ಸಜ್ಜುಗೊಳಿಸಿದ್ದರು. ಇಬ್ಬರು ಸಹಾಯಕರು ಹಾಗೂ ವೈದ್ಯರ ತಂಡದೊಂದಿಗೆ ಭಾನುವಾರ ಶಾಂತಕುಮಾರ್ ಅವರನ್ನು ಬೆಂಗಳೂರಿಗೆ ಕರೆತರಲಾಗಿದೆ.
ಎಂಎಸ್‌ಪಿ ಗ್ಯಾರಂಟಿಗಾಗಿ ಕೇಂದ್ರ ಸರ್ಕಾರದ ಸಭೆಯಲ್ಲಿ ಭಾಗವಹಿಸಲು ತೆರಳುತ್ತಿದ್ದಾಗ ಪಟಿಯಾಲ ಬಳಿ ಸಂಭವಿಸಿದ ಅಪಘಾತದಲ್ಲಿ ಶಾಂತಕುಮಾರ್ ಗಾಯಗೊಂಡಿದ್ದರು.