

ಬೆಳ್ತಂಗಡಿ: ಜನಸೇವೆಯ ಉದ್ದೇಶದೊಂದಿಗೆ ಡಾ.ವೀರೇಂದ್ರ ಹೆಗ್ಗಡೆಯವರು ಹಾಗೂ ಹೇಮಾವತಿ ವೀ.ಹೆಗ್ಗಡೆಯವರ ಮಾರ್ಗದರ್ಶನದಲ್ಲಿ, ಹರ್ಷೇಂದ್ರ ಕುಮಾರ್ ಹಾಗೂ ಹೆಗ್ಗಡೆ ಪರಿವಾರದ ಸಹಕಾರದಲ್ಲಿ ನಡೆಯುತ್ತಿರುವ ಆಸ್ಪತ್ರೆಯಲ್ಲಿ ಸಮಯದ ಬಗ್ಗೆ ಚಿಂತಿಸದೆ, ರೋಗಿಯ ಆರೈಕೆಯಲ್ಲಿಯೇ ತಮ್ಮ ಬದುಕಿನ ಅತಿ ಹೆಚ್ಚಿನ ಸಮಯ ಕಳೆದವರು ಡಾ.ಬಾಲಕೃಷ್ಣ ಭಟ್ ಮತ್ತು ಡಾ.ಕಮಲಾ ಭಟ್. ಇಳಿವಯಸ್ಸಿನಲ್ಲಿಯೂ ರೋಗಿಗಳ ಹಿತವನ್ನೇ ಬಯಸಿದ ಇವರ ಸೇವೆ ಆಸ್ಪತ್ರೆಗೆ ಅತ್ಯುತ್ತಮ ಕೊಡುಗೆ ಎಂದು ಆಸ್ಪತ್ರೆಯ ವ್ಯವಸ್ಥಾಪಕ ನಿರ್ದೇಶಕ ಎಂ.ಜನಾರ್ದನ್ ಹೇಳಿದರು.
ಉಜಿರೆ ಎಸ್.ಡಿ.ಎಂ. ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಜನರಲ್ ಮೆಡಿಸಿನ್ ವಿಭಾಗದಲ್ಲಿ ವೈದ್ಯರಾಗಿ ಸೇವೆ ಸಲ್ಲಿಸಿ ನಿವೃತ್ತಿ ಪಡೆದ ಡಾ.ಬಾಲಕೃಷ್ಣ ಭಟ್ ಮತ್ತು ಡಾ.ಕಮಲಾ ಭಟ್ ಅವರನ್ನು ಗೌರವಿಸಿ ಮಾತನಾಡಿದರು.
ಡಾ.ಬಾಲಕೃಷ್ಣ ಭಟ್ ಮಾತನಾಡಿ, ಡಾ.ಹೆಗ್ಗಡೆಯವರ ಸಂಸ್ಥೆಯಲ್ಲಿ ವೈದ್ಯಕೀಯ ಸೇವೆ ಮಾಡುವ ಸದವಕಾಶ ನಮಗೆ ದೊರೆತಿದೆ. ವಯೋಸಹಜ ಸಮಸ್ಯೆಯಿಂದ ನಿವೃತ್ತಿ ಪಡೆಯುತ್ತಿದ್ದು, ವೈದ್ಯಕೀಯ ಸೇವಾ ಬದುಕಿನಲ್ಲಿ ಉತ್ತಮ ರೀತಿಯಲ್ಲಿ ರೋಗಿಗಳ ಸೇವೆ ಮಾಡಿದ ಸಂತೃಪ್ತಿ ನಮಗಿದೆ. ವ್ಯವಸ್ಥಾಪಕ ನಿರ್ದೇಶಕ ಎಂ.ಜನಾರ್ದನ್ ಅವರ ಸಮರ್ಥ ನಾಯಕತ್ವದಲ್ಲಿ ಜನಪ್ರಿಯಗೊಂಡಿರುವ ಈ ಆಸ್ಪತ್ರೆಯಲ್ಲಿ ಅತ್ಯುತ್ತಮ ವೈದ್ಯ ವೃಂದ, ನುರಿತ ದಾದಿಯರು, ಒಳ್ಳೆಯ ಸಿಬ್ಬಂದಿಗಳೊಂದಿಗೆ ಸೇವೆ ಮಾಡಿದ್ದು, ಎಲ್ಲರೂ ನಮಗೆ ಸದಾ ಸ್ಮರಣೀಯರು ಎಂದರು.
ಡಾ.ಚಿನ್ಮಯ್, ಆಸ್ಪತ್ರೆಯ ನರ್ಸಿಂಗ್ ಅಧೀಕ್ಷಕಿ ಶೆರ್ಲಿ ಶುಭಹಾರೈಸಿದರು. ವೈದ್ಯರು, ದಾದಿಯರು, ಸಿಬ್ಬಂದಿ ಉಪಸ್ಥಿತರಿದ್ದರು. ಇನ್ಶೂರೆನ್ಸ್ ವಿಭಾಗದ ಜಗನ್ನಾಥ್ ಕಾರ್ಯಕ್ರಮ ನಿರೂಪಿಸಿದರು.