ಮದುವೆಯಾಗುವುದಾಗಿ ನಂಬಿಸಿ ಯುವತಿಗೆ ವಂಚನೆ - ನಗರಸಭಾ ಸದಸ್ಯ ಪುತ್ರನ ವಿರುದ್ಧ ಅತ್ಯಾಚಾರ, ವಂಚನೆ ಪ್ರಕರಣ

Sexual-Harassment-Victims-Cover-pic
Published on

ಪುತ್ತೂರು: ಮದುವೆಯಾಗುವುದಾಗಿ ನಂಬಿಸಿ ಯುವತಿಯನ್ನು ಗರ್ಭವತಿಯಾಗಿಸಿ, ಮದುವೆ ನಿರಾಕರಿಸಿದ ಹಿನ್ನೆಲೆಯಲ್ಲಿ ನಗರಸಭಾ ಸದಸ್ಯ ಪುತ್ರನ ವಿರುದ್ಧ ಪುತ್ತೂರು ಮಹಿಳಾ ಠಾಣೆಯಲ್ಲಿ ಅತ್ಯಾಚಾರ ಮತ್ತು ವಂಚನೆ ಪ್ರಕರಣ ದಾಖಲಾಗಿದೆ.

ಬಪ್ಪಳಿಗೆ ನಿವಾಸಿ ಬಿಜೆಪಿ ನಗರ ಮಂಡಲ ಮಾಜಿ ಅಧ್ಯಕ್ಷ ಪುತ್ರ ಶ್ರೀಕೃಷ್ಣ ಜೆ. ರಾವ್ (೨೧) ಕೃತ್ಯ ಎಸಗಿದಾತ. ಠಾಣೆಯಲ್ಲಿ ದೂರು ದಾಖಲಾಗುತ್ತಿದ್ದಂತೆ ತಲೆಮರೆಸಿಕೊಂಡಿದ್ದು, ಪತ್ತೆಗಾಗಿ ಪೊಲೀಸರು ಬಲೆ ಬೀಸಿದ್ದಾರೆ.

ಸಂತ್ರಸ್ತೆ ಪ್ರೌಢಶಾಲೆಯಿಂದಲೇ ಸಹಪಾಠಿಗಳಾಗಿದ್ದು, ಪ್ರೌಢಾವಸ್ಥೆಗೆ ಬಂದ ಬಳಿಕ ಪರಸ್ಪರ ಪ್ರೀತಿಸಲು ಆರಂಭಿಸಿದ್ದರು. ಈ ಆತ್ಮೀಯತೆಯಿಂದ ಸಂತ್ರಸ್ತೆ ಆರೋಪಿಯ ಮನೆಗೆ ಆಗಾಗ ಭೇಟಿ ನೀಡುತ್ತಿದ್ದಳು. ೨೦೨೪ರ ಅಕ್ಟೋಬರ್ ೧೧ರಂದು ಆರೋಪಿತ ತನ್ನ ಮನೆಗೆ ಸಂತ್ರಸ್ತೆಯನ್ನು ಕರೆಸಿಕೊಂಡಿದ್ದು, ಮನೆಯಲ್ಲಿ ಯಾರೂ ಇಲ್ಲದ ಕಾರಣ ಮಲಗುವ ಕೋಣೆಗೆ ಕರೆದುಕೊಂಡು ಹೋಗಿ ಬಲವಂತವಾಗಿ ದೈಹಿಕ ಸಂಪರ್ಕಕ್ಕೆ ಯತ್ನಿಸಿದ್ದಾನೆ. ಯುವತಿ ವಿರೋಧಿಸಿದಾಗ, ಮದುವೆಯಾಗುವುದಾಗಿ ನಂಬಿಸಿ ಲೈಂಗಿಕ ಕ್ರಿಯೆ ನಡೆಸಿ ಈ ವಿಷಯವನ್ನು ರಹಸ್ಯವಾಗಿಡುವಂತೆ ತಿಳಿಸಿದ್ದಾನೆ. ಜನವರಿ ತಿಂಗಳಲ್ಲಿಯೂ ಯುವತಿಯನ್ನು ಮನೆಗೆ ಕರೆಸಿ ದೈಹಿಕ ಸಂಪರ್ಕ ನಡೆಸಿದ್ದಾನೆ. ಗರ್ಭಿಣಿಯಾಗಿರುವ ಅನುಮಾನವನ್ನು ಕೃಷ್ಣನಲ್ಲಿ ಹೇಳಿಕೊಂಡಿದ್ದು, ಮೇ ತಿಂಗಳಿನಲ್ಲಿ ಯುವತಿಯನ್ನು ಮಂಗಳೂರಿನ ಕ್ಲಿನಿಕ್‌ಗೆ ಕರೆದುಕೊಂಡು ಹೋಗಿ ಪರೀಕ್ಷೆ ಮಾಡಿಸಿದ್ದಾನೆ. ಈ ಸಂದರ್ಭ ಏಳೂವರೆ ತಿಂಗಳ ಗರ್ಭಿಣಿ ಎಂಬುದು ತಿಳಿದುಬಂದಿದೆ. ನಾನು ನಿನ್ನನ್ನು ಮದುವೆಯಾಗುತ್ತೇನೆ, ಈ ವಿಚಾರವನ್ನು ಯಾರಲ್ಲೂ ಹೇಳಬೇಡ ಎಂದು ಕೃಷ್ಣ ಹೇಳಿದ್ದರೂ, ಯುವತಿ ಪೋಷಕರಿಗೆ ವಿಚಾರ ತಿಳಿಸಿದ್ದಾಳೆ. ಯುವತಿಯ ಮನೆಯವರು ಯುವಕನ ಮನೆಯವರಿಗೆ ಈ ವಿಷಯ ಹೇಳಿದ್ದು, ಮದುವೆ ಮಾಡಿಕೊಳ್ಳುವುದಾಗಿ ಒಪ್ಪಿಕೊಂಡಿದ್ದರು ಎಂದು ದೂರಿನಲ್ಲಿ ಆರೋಪಿಸಿದ್ದಾಳೆ.

ತಿಂಗಳ ಹಿಂದೆಯೇ ದೂರು?

ಗರ್ಭಿಣಿಯಾದ ವಿಚಾರದ ಬಗ್ಗೆ ಮಹಿಳಾ ಠಾಣೆಗೆ ತಿಂಗಳ ಹಿಂದೆಯೇ ಸಂತ್ರಸ್ತೆ ಪೋಷಕರ ಜತಗೆ ಆಗಮಿಸಿ ದೂರು ನೀಡಿದ್ದಾರೆ. ಈ ಸಂದರ್ಭ ಬಾಲಕನ ಪೋಷಕರು, ವಿವಾಹ ಮಾಡಿಕೊಳ್ಳುವುದಾಗಿ ಯುವತಿ ಕಡೆಯವರನ್ನು ಒಪ್ಪಿಸಿದ್ದರು. ಬಾಲಕನಿಗೆ ಜೂನ್‌ನಲ್ಲಿ ೨೧ ತುಂಬಲಿದ್ದು, ತಕ್ಷಣ ವಿವಾಹ ನೋಂದಣಿ ಮಾಡಿಸಿಕೊಂಡು, ಮಗು ಜನನದ ಬಳಿಕ ಶಾಸ್ತ್ರೋಕ್ತ ವಿವಾಹ ಮಾಡುವ ಬಗ್ಗೆ ಠಾಣೆಗೆ ಮುಚ್ಚಳಿಕೆ ಬರೆದುಕೊಟ್ಟಿದ್ದರು.

ಪ್ರಾಯವಾಗುತ್ತಿದ್ದಂತೆ ತಿರಸ್ಕಾರ!

ಯುವಕನಿಗೆ ಜೂನ್ ೨೩ಕ್ಕೆ ವಿವಾಹ ಪ್ರಾಯವಾಗಿದ್ದು, ಇದಾಗುತ್ತಿದ್ದಂತೆ ವಿವಾಹವನ್ನು ತಿರಸ್ಕರಿಸಿದ್ದಾನೆ. ಇದರಿಂದ ಕಂಗಾಲಾದ ಯುವತಿ ಮನೆಯವರು ಪೊಲೀಸ್ ಠಾಣೆಯ ಮೆಟ್ಟಲೇರಿ ದೂರು ನೀಡಿದ್ದಾರೆ. ರಾಜಕೀಯ ಪ್ರಭಾವದ ಮೂಲಕ ವಿವಿಧ ರೀತಿಯ ಒತ್ತಡ ಹಾಕುವ ಕಾರ್ಯವಾಗಿದ್ದು, ಇದಕ್ಕೆ ಇಲಾಖೆ ಸೊಪ್ಪು ಹಾಕದೆ ಪ್ರಕರಣ ದಾಖಲಿಸಿಕೊಂಡಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net