More

    ಬಾಗಿಲು ಮುಚ್ಚಿದ 115 ಆರ್‌ಒ ಘಟಕಗಳು ನಾಣ್ಯ ನುಂಗಿದರೂ ನೀರು ಬಾರದು

    ಸುಭಾಸ ಧೂಪದಹೊಂಡ ಕಾರವಾರ: ಬಿರು ಬೇಸಿಗೆಯಲ್ಲಿ ಜನರ ನೀರಿನ ದಾಹ ತೀರಿಸಬೇಕಿದ್ದ ಆರ್‌ಒ ಪ್ಲಾಂಟ್ ಗಳು ಬಂದ್ ಆಗಿವೆ.

    ಅವುಗಳ ನಿರ್ವಹಣೆ ಮಾಡಲು ಗುತ್ತಿಗೆ ಪಡೆದ ಕಂಪನಿಗಳು ನಾಪತ್ತೆಯಾಗಿವೆ. ಸರ್ಕಾರದ ಮಟ್ಟದಲ್ಲಿ ಕಂಪನಿಗಳನ್ನು ಕಾಣದ ಕೈಗಳು ರಕ್ಷಿಸುತ್ತಿವೆ.
    ಗ್ರಾಮೀಣ ಭಾಗದ ಜನರಿಗೆ ಶುದ್ಧ ಕುಡಿಯುವ ನೀರು ಕೊಡುವ ಸಲುವಾಗಿ 2018 ಹಾಗೂ 2019 ರಲ್ಲಿ ಜಿಲ್ಲೆಯ ವಿವಿಧ ಗ್ರಾಮಗಳಲ್ಲಿ 241 ಶುದ್ಕುಧ ಡಿಯುವ ನೀರಿನ ಘಟಕಗಳನ್ನು (ಆರ್‌ಒ ಪ್ಲಾಂಟ್‌) ತಲಾ 12 ಲಕ್ಷ ರೂ. ಖರ್ಚು ಮಾಡಿ ವಿವಿಧ ಕಂಪನಿಗಳಿಂದ ನಿರ್ಮಾಣ ಮಾಡಲಾಗಿತ್ತು.

    2 ರೂ. ನಾಣ್ಯ ಹಾಕಿದರೆ 1 ಲೀಟರ್ ಶುದ್ಧ ನೀರು ಒದಗಿಸುವ ಸ್ವಯಂಚಾಲಿತ ವ್ಯವಸ್ಥೆ ಮಾಡಲಾಗಿತ್ತು. ನಿರ್ಮಾಣದ ನಂತರ ಐದು ವರ್ಷಗಳ ನಿರ್ವಹಣೆಯನ್ನೂ ಕಂಪನಿಗಳಿಗೇ ಒದಗಿಸಲಾಗಿತ್ತು.

    ಆದರೆ, ಅದರಲ್ಲಿ 115 ಘಟಕಗಳು ನಿರ್ವಹಣಾ ಅವಧಿ ಮುಗಿಯುವುದಕ್ಕೂ ಮೊದಲೇ ಬಂದ್ ಆಗಿವೆ. ಸಂಬಂಧಪಟ್ಟ ಕಂಪನಿಗಳು ಹೆಚ್ಚು ನಾಣ್ಯ ಸಂಗ್ರಹವಾಗುವ ಘಟಕಗಳನ್ನು ಮಾತ್ರ ನಿರ್ವಹಿಸಿ ಉಳಿದವನ್ನು ಪಾಳು ಬಿಟ್ಟಿವೆ.

    ಹಲವು ಘಟಕಗಳ ಹೆಸ್ಕಾಂ ಕರೆಂಟ್ ಬಿಲ್ ಲಕ್ಷಾಂತರ ರೂ. ಬಾಕಿ ಇದೆ. ಇನ್ನು ಕೆಲವು ಘಟಕಗಳಿಗೆ ನೀರಿನ ಮೂಲಗಳು ಸರಿಯಿಲ್ಲ.

    ಇವೆರಡೂ ಸರಿ ಇದ್ದರೆ ನಾಣ್ಯ ನುಂಗಿ ನೀರು ಮಾತ್ರ ಕೊಡುತ್ತಿಲ್ಲ. 126 ಘಟಕಗಳು ಸರಿ ಇವೆ ಎಂದು ಇಲಾಖೆ ವರದಿ ನೀಡಿವೆ.

    ಆದರೆ, `ವಿಜಯವಾಣಿ’ ರಿಯಾಲಿಟಿ ಚೆಕ್ ನಡೆಸಿದಾಗ ಅವುಗಳಲ್ಲೂ ಕೆಲವು ಹಾಳಾಗಿರುವುದು ಕಂಡುಬಂತು.


    ಆಓ ಘಟಕ ನಿರ್ವಹಿಸದ ಕಂಪನಿಗಳಿವು:

    ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಮಾಹಿತಿಯಂತೆ ಜಿಲ್ಲೆಯಲ್ಲಿ ಪಾನ್ ಏಷ್ಯಾ ಎಂಬ ಕಂಪನಿ 57 ಘಟಕಗಳನ್ನು ನಿರ್ಮಾಣ ಮಾಡಿತ್ತು. ಅವುಗಳಲ್ಲಿ 16 ಮಾತ್ರ ಕಾರ್ಯನಿರ್ವಹಿಸುತ್ತಿವೆ. ಉಳಿದ 41 ಘಟಕಗಳು ಹಾಳಾಗಿವೆ.

    ಶೀಟ್ ಶೇಪರ್ಸ್ ಪ್ರೈ,ಲಿ. ಎಂಬ ಕಂಪನಿ 63 ಘಟಕಗಳನ್ನು ಗುತ್ತಿಗೆ ಪಡೆದು ನಿರ್ಮಾಣ ಮಾಡಿತ್ತು. ಅವುಗಳಲ್ಲಿ 31 ಘಟಕಗಳು ಸರಿ ಇದ್ದು, 31 ಘಟಕಗಳು ಹಾಳಾಗಿವೆ.

    ಇದನ್ನೂ ಓದಿ: ಕಿರುಕುಳಕ್ಕೆ ಪ್ರತಿರೋಧ ಒಡ್ಡಿದ ಯುವತಿ; ಪೆಟ್ರೋಲ್​ ಸುರಿದು ಹತ್ಯೆ

    ಅಭಿಮಾನ್ಯ ಶಿಂಧೆ ಎಂಬುವವರು 11 ಘಟಕ ನಿರ್ಮಾಣ ಮಾಡಿದ್ದು, ಅವುಗಳಲ್ಲಿ 6 ಹಾಳಾಗಿವೆ. ಕೆಆರ್‌ಐಡಿಎಲ್ ಮತ್ತು ಇತರ ಸಂಸ್ಥೆಗಳ ಅನುದಾನದಲ್ಲಿ ಔರಂಗಾಬಾದ್‌ನ ಮ್ಯಾಕ್ಸ್ ಅಕ್ವಾ ಪ್ರೈ ಲಿ. ಎಂಬ ಕಂಪನಿಯಿಂದ 77 ಘಟಕಗಳನ್ನು ನಿರ್ಮಾಣ ಮಾಡಿಸಿತ್ತು.

    ಅದರಲ್ಲಿ 26 ಘಟಕಗಳು ಹಾಳಾಗಿ ನಿಂತಿವೆ. ಸಹಕಾರ ಇಲಾಖೆ ನಿರ್ಮಿಸಿದ 25 ಘಟಕಗಳ ಪೈಕಿ 8 ಹಾಳಾಗಿವೆ.


    ಆರ್‌ ಒ ಕಂಪನಿಗಳನ್ನು ರಕ್ಷಿಸುತ್ತಿರುವರ‍್ಯಾರು?
    ರಾಜ್ಯದಿಂದಲೇ ಕಂಪನಿಗಳನ್ನು ಗುರುತು ಮಾಡಿ ಅವುಗಳಿಗೆ ನೂರಾರು ಕೋಟಿ ರೂ. ಗುತ್ತಿಗೆ ನೀಡಲಾಗಿದೆ. ಜನರಿಗೆ ನೀರು ಅಗತ್ಯವಿರುವ ಪ್ರದೇಶಗಳನ್ನು ಸರಿಯಾಗಿ ಗುರುತಿಸದೆ ಮನಸ್ಸಿಗೆ ಬಂದ ಜಾಗದಲ್ಲಿ ಆರ್‌ಒ ಘಟಕಗಳನ್ನು ಕಂಪನಿಗಳು ಅಳವಡಿಸಿವೆ. ಕೆಲವು ಪ್ರಾರಂಭವೇ ಆಗಿಲ್ಲ. ಅವುಗಳನ್ನು ನಿರ್ವಹಣೆಯನ್ನೂ ಮಾಡಿಲ್ಲ. ಆದರೆ, ಇದನ್ನೆಲ್ಲ ಕೇಳಲು ಕಂಪನಿಗಳು ಜಿಲ್ಲಾ ಮಟ್ಟದ ಅಽಕಾರಿಗಳ ಕೈಗೆ ಸಿಗುತ್ತಿಲ್ಲ. ಅವುಗಳ ವಿರುದ್ಧ ಕ್ರಮ ವಹಿಸದಂತೆ ಕಾಣದ ಕೈಗಳು ಕೆಲಸ ಮಾಡುತ್ತಿವೆ ಎಂದು ಹೆಸರು ಹೇಳಲಿಚ್ಛಿಸದ ಅಧಿಕಾರಿಯೊಬ್ಬರು `ವಿಜಯವಾಣಿ’ ಜತೆ ತಮ್ಮ ಅಭಿಪ್ರಾಯ ಹಂಚಿಕೊಂಡರು.


    • ಕಾರವಾರದ ಕಡವಾಡ ಮಾಡಿಬಾಗ ಸಮೀಪ ನಿರ್ಮಾಣ ಮಾಡಿದ ಶುದ್ಧ ಕುಡಿಯುವ ನೀರಿನ ಘಟಕ ಬಂದ್ ಆಗಿ ಎರಡು ವರ್ಷ ಕಳೆದಿವೆ. ಕರೆಂಟ್ ಬಿಲ್ ಬಾಕಿ ಇದೆ ಎಂದು ಕೇಳಿದ್ದೇನೆ. ಈಗ ನೀರಿನ ಸಮಸ್ಯೆ ಇದೆ. ಆದರೆ, ಘಟಕ ಪ್ರಯೋಜನಕ್ಕೆ ಬರುತ್ತಿಲ್ಲ ಎಂದು ಸ್ಥಳೀಯ ಚಂದ್ರಕಾಂತ ಭೋವಿ ತಿಳಿಸಿದರು.
    • ಗೋಕರ್ಣದ ರೈತ ಸಂಪರ್ಕ ಕೇಂದ್ರದ ಪಕ್ಕ ನಿರ್ಮಾಣ ಮಾಡಲಾಗಿದ್ದ ಸಾಕಷ್ಟು ಪ್ರವಾಸಿಗರಿಗೆ ಅನುಕೂಲವಾಗುತ್ತಿದ್ದ ಶುದ್ಧ ಕುಡಿಯುವ ನೀರಿನ ಘಟಕ ಬಂದಾಗಿ ವರ್ಷ ಕಳೆದಿದೆ ಎನ್ನುತ್ತಾರೆ ಸ್ಥಳೀಯ ಚಂದ್ರಶೇಖರ ನಾಯ್ಕ.


    ಆರ್‌ಒ ಘಟಕಗಳು ಹಾಳಾಗಿರುವುದು ನಿಜ. ನಾನು ಅವುಗಳ ವರದಿಯನ್ನು ತರಿಸಿಕೊಂಡು ನೋಡಿದ್ದೇನೆ. ಆದರೆ, ರಾಜ್ಯಮಟ್ಟದಿಂದಲೇ ಏಜೆನ್ಸಿ ಗುರುತಿಸಿ ಅವುಗಳ ನಿರ್ಮಾಣ ಹಾಗೂ ನಿರ್ವಹಣೆಗೆ ಟೆಂಡರ್ ನೀಡಲಾಗಿದೆ. ಜಿಲ್ಲೆಯಲ್ಲಿ ಘಟಕಗಳು ಸಮರ್ಪಕವಾಗಿ ಕಾರ್ಯನಿರ್ವಹಿಸಿಲ್ಲ ಎಂದು ನಾವು ಸರ್ಕಾರಕ್ಕೆ ವರದಿ ನೀಡಿ ಸಂಬಂಧಪಟ್ಟ ಕಂಪನಿಗಳನ್ನು ಕಪ್ಪು ಪಟ್ಟಿಗೆ ಸೇರಿಸುವಂತೆ ವರ್ಷಗಳ ಹಿಂದೆಯೇ ಎರಡು ಬಾರಿ ಶಿಫಾರಸು ಮಾಡಲಾಗಿದೆ. ಆದರೆ, ಇದುವರೆಗೂ ಸರ್ಕಾರದಿಂದ ಯಾವುದೇ ಸೂಚನೆ ಬಂದಿಲ್ಲ. ನಾವು ಗುತ್ತಿಗೆ ನೀಡಿದವಲ್ಲದ ಕಾರಣ ಕ್ರಮ ವಹಿಸಲೂ ನಮಗೆ ಅಧಿಕಾರವಿಲ್ಲ.
    | ಈಶ್ವರ ಕಾಂದೂ, ಉತ್ತರ ಕನ್ನಡ ಜಿಪಂ ಸಿಇಒ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts