

ವಿಜಯವಾಣಿ ಸುದ್ದಿಜಾಲ ಬಂಟ್ವಾಳ
ಪೊಳಲಿ ಫಲ್ಗುಣಿ ನದಿಗೆ ನಿರ್ಮಿಸಲಾದ ಸೇತುವೆಯ ಧಾರಣಾ ಸಾಮರ್ಥ್ಯ ಪರೀಕ್ಷಾ ಯಂತ್ರ ಇದುವರೆಗೂ ಬಾರದಿರುವ ಹಿನ್ನೆಲೆಯಲ್ಲಿ ಬಂಟ್ವಾಳ ಶಾಸಕ ರಾಜೇಶ್ ನಾೈಕ್ ಉಳಿಪಾಡಿಗುತ್ತು ಇಂಜಿನಿಯರ್‌ಗೆ ಕರೆ ಮಾಡಿ ಮಾಹಿತಿ ಪಡೆದುಕೊಂಡರು.
ಆ.25 ಅಥವಾ 26ರಂದು ಧಾರಣಾ ಸಾಮರ್ಥ್ಯ ಯಂತ್ರ ಅಗಮಿಸಿ ಪರೀಕ್ಷಿಸಲಿದೆ ಎಂದು ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಸ್ಥಳಕ್ಕೆ ಭೇಟಿ ನೀಡಿದ ವೇಳೆ ಸ್ಥಳೀಯರಿಗೆ ತಿಳಿಸಿದ್ದರು. ಆದರೆ ವಾರ ಕಳೆದರೂ ಯಂತ್ರ ಇನ್ನೂ ಬಂದಿಲ್ಲ, ಈ ನಿಟ್ಡಿನಲ್ಲಿ ಶುಕ್ರವಾರ ಪೊಳಲಿ ಕೇತ್ರದಿಂದಲೇ ಶಾಸಕ ರಾಜೇಶ್ ನಾೈಕ್ ನೇರವಾಗಿ ಇಂಜಿನಿಯರ್ ಅಮರನಾಥ್ ಅವರಿಗೆ ಕರೆ ಮಾಡಿ ಪ್ರಶ್ನಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಇಂಜಿನಿಯರ್ ಅಮರನಾಥ್ ಈ ಬಗ್ಗೆ ಸಂಬಂಧಪಟ್ಟವರನ್ನು ವಿಚಾರಿಸಲಾಗಿದ್ದು, ದೆಹಲಿಯಿಂದ ಬರಬೇಕಾದ ಸಾಮರ್ಥ್ಯ ಪರೀಕ್ಷಾ ಯಂತ್ರ ತಾಂತ್ರಿಕ ತೊಂದರೆಯಿಂದ ಬರಲು ಸಾಧ್ಯವಾಗಿಲ್ಲ. ಹಾಗಾಗಿ ವಿಳಂಬವಾಗಿದೆ ಎಂದು ವಿವರಣೆ ನೀಡಿದ್ದಾರೆ.
ಅದಷ್ಟು ಶೀಘ್ರ ಯಂತ್ರವನ್ನು ತರಿಸಿ ಸಾಮರ್ಥ್ಯ ಪರೀಕ್ಷಿಸಿ ಸೇತುವೆಯಲ್ಲಿ ವಾಹನ ಸಂಚಾರದ ಬಗ್ಗೆ ಸದ್ಯ ಜನರಲ್ಲಿ ಉಂಟಾಗಿರುವ ಗೊಂದಲವನ್ನು ನಿವಾರಿಸಲು ಕ್ರಮಕೈಗೊಳ್ಳುವಂತೆ ಶಾಸಕ ರಾಜೇಶ್ ನಾೈಕ್ ಸೂಚಿಸಿದರು. ಈ ನಿಟ್ಟಿನಲ್ಲಿ ಇಲಾಖಾ ವತಿಯಿಂದ ಎಲ್ಲ ರೀತಿಯ ಪ್ರಯತ್ನ ಸಾಗಿದೆ ಎಂದು ಇಂಜಿನಿಯರ್ ಅಮರನಾಥ್ ಶಾಸಕರಿಗೆ ಮನವರಿಕೆ ಮಾಡಿದರು.
ಅಡ್ಡೂರು ಸೇತುವೆಯಲ್ಲಿ ವಾಹನ ಸಂಚಾರ ನಿಷೇಧಿಸಿರುವುದರಿಂದ ಜನರು, ವಿದ್ಯಾರ್ಥಿಗಳು, ಪೊಳಲಿ ದೇವಳಕ್ಕೆ ಬರುವ ಭಕ್ತಾದಿಗಳಿಗೆ ತೊಂದರೆಯಾಗುತ್ತಿರುವ ಹಿನ್ನೆಲೆಯಲ್ಲಿ ಶಾಸಕರು ವೈಯಕ್ತಿಕ ನೆಲೆಯಲ್ಲಿ ಉಚಿತವಾಗಿ ವಾಹನದ ವ್ಯವಸ್ಥೆ ಕಲ್ಪಿಸಿದ್ದರು. ಈ ನಡುವೆ ಜನರ ಆಕ್ರೋಶಕ್ಕೆ ಮಣಿದ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಸ್ಥಳಕ್ಕೆ ಭೇಟಿ ನೀಡಿ ಜನರ ಅಹವಾಲು ಆಲಿಸಿದ್ದರು. ಸೇತುವೆಯ ಧಾರಣಾ ಸಾಮರ್ಥ್ಯ ಪರೀಕ್ಷಿಸಿದ ಬಳಿಕ ವರದಿಯನ್ನಾಧರಿಸಿ ಕ್ರಮ ಕೈಗೊಳ್ಳಲಿದೆ ಎಂದು ಭರವಸೆ ನೀಡಿದ್ದರು. ಆದರೆ ಸಾಮರ್ಥ್ಯ ಪರೀಕ್ಷಿಸುವ ಯಂತ್ರ ಇನ್ನೂ ಕೂಡ ಬಾರದಿರುವುದು ಸ್ಥಳೀಯರಲ್ಲಿ ಅಸಮಾಧಾನ par ವ್ಯಕ್ತವಾಗಿದೆ.
ಅಡ್ಡೂರು ಸೇತುವೆಯಲ್ಲಿ ಭಾರಿ ವಾಹನ ಸಂಚಾರಕ್ಕೆ ನಿಷೇಧವಿದ್ದರೂ ಶುಕ್ರವಾರ ಹೊರಜಿಲ್ಲೆಯ ಚಾಲಕನೊರ್ವ ಈಚರ್ ಲಾರಿಯೊಂದನ್ನು ಈ ರಸ್ತೆ ಮೂಲಕ ಚಲಾಯಿಸಿಕೊಂಡು ಬಂದಿದು, ನಿಷೇಧದ ಹಿನ್ನೆಲೆಯಲ್ಲಿ ಸೇತುವೆಗೆ ಅಡ್ಡಲಾಗಿ ಹಾಕಲಾದ ಕಬ್ಬಿಣದ ರಾಡಿಗೆ ಸಿಲುಕಿದ ಘಟನೆ ನಡೆದಿದೆ. ಸೇತುವೆಯ ಇಕ್ಕಡೆಯಲ್ಲಿ ಪೊಲೀಸ್ ಚೆಕ್‌ಪೋಸ್ಟ್ ನಿರ್ಮಿಸಿ ಸಿಬ್ಬಂದಿ ನಿಯುಕ್ತಿಗೊಳಿಸಲಾಗಿದೆ. ಬಿ.ಸಿ.ರೋಡ್ ಮೂಲಕ ಬಂದಿದ್ದ ಈ ಲಾರಿ ಚೆಕ್ ಪೋಸ್ಟ್ ದಾಟಿ ಬಂದರೂ ಇಲ್ಲಿ ಕರ್ತವ್ಯದಲ್ಲಿದ್ದ ಬಂಟ್ವಾಳ ಗ್ರಾಮಾಂತರ ಠಾಣೆಯ ಸಿಬ್ಬಂದಿ ಪೋನ್‌ನಲ್ಲಿಯೇ ತಲ್ಲಿನರಾಗಿದ್ದರೆನ್ನಲಾಗಿದ್ದರು ಎಂದು ಸ್ಥಳೀಯರು ದೂರಿದ್ದಾರೆ. ಲಾರಿ ಸೇತುವೆಯಲ್ಲಿ ಸಿಲುಕಿದ ವಿಚಾರವನ್ನು ಪೊಲೀಸ್ ಸಿಬ್ಬಂದಿಗೆ ಸ್ಥಳೀಯರು ಮಾಹಿತಿ ನೀಡಿದಾಗಲು ಉಡಾಫೆಯಿಂದ ಮಾತನಾಡಿದ್ದ ಎಂದು ಹೇಳಲಾಗಿದೆ. ಬಳಿಕ ಸ್ಥಳೀಯರೇ ಹಿಂದಕ್ಕೆ ಸರಿಸಿ ವಾಪಾಸ್ ಕಳಿಸಿಕೊಟ್ಟಿದ್ದರೆಂದು ತಿಳಿದು ಬಂದಿದೆ.