More

    40 ಸಾವಿರ ರೂಪಾಯಿ ಕೊಟ್ರೆ ಸಿಗಲಿವೆ ಅಂಕಪಟ್ಟಿ!; ಫೇಲಾದ ವಿದ್ಯಾರ್ಥಿಗಳೇ ಟಾರ್ಗೆಟ್

    ಬೆಂಗಳೂರು: ಪದವೀಧರರಾಗಲು ಹಗಲು-ರಾತ್ರಿ ಕಷ್ಟಪಟ್ಟು ಓದಬೇಕು. ಕೆಲವೊಮ್ಮೆ ಇನ್ನಿಲ್ಲದಂತೆ ಅಭ್ಯಾಸ ಮಾಡಿದರೂ ಕೆಲವರು ಪಾಸ್ ಆಗಲ್ಲ. ಆದರೆ, ಬರೀ 40 ಸಾವಿರ ರೂ. ಕೊಟ್ಟರೆ ಸಾಕು, ರಾಜ್ಯ ಹಾಗೂ ಹೊರರಾಜ್ಯಗಳ ವಿವಿಧ ವಿಶ್ವವಿದ್ಯಾಲಯಗಳ ಅಂಕಪಟ್ಟಿಗಳೇ ನಿಮಗೆ ಸಿಗುತ್ತೆ! ಅದೂ ಹಣ ಕೊಟ್ಟ 20 ದಿನದಲ್ಲೇ! ಹೌದು, ಅಚ್ಚರಿ ಎನಿಸಿದರೂ ಇದು ನಿಜ. ದೇಶದ ವಿವಿಧ ವಿವಿಗಳ ಪದವಿಯ ನಕಲಿ ಅಂಕಪಟ್ಟಿ ಹಾಗೂ ಪ್ರಮಾಣಪತ್ರಗಳನ್ನು ಮಾರಾಟ ಮಾಡುತ್ತಿದ್ದ ಜಾಲ ಬೆಳಕಿಗೆ ಬಂದಿದೆ. ಬೆಂಗಳೂರಿನ ಜಯನಗರ ಪೊಲೀಸರು ನಾಲ್ವರನ್ನು ಬಂಧಿಸಿ, ಬರೋಬ್ಬರಿ 200ಕ್ಕೂ ಅಧಿಕ ನಕಲಿ ಅಂಕಪಟ್ಟಿ, 4.60 ಲಕ್ಷ ನಗದು ಹಾಗೂ ಹಲವು ವಿವಿಗಳ ನಕಲಿ ಸೀಲು ಮತ್ತು ಹಾಲೋಗ್ರಾಮ್ ಜಪ್ತಿ ಮಾಡಿದ್ದಾರೆ.

    ಜಯನಗರದ ನಿವಾಸಿ ರಘು (34), ಧರ್ಮ ಕುಮಾರ್ (39), ದೀಪಕ್ (32), ನರೇಶ್ ರೆಡ್ಡಿ (37) ಬಂಧಿತರು. ಆರೋಪಿಗಳ ಪೈಕಿ ನರೇಶ್ ಸಾಫ್ಟ್​ವೇರ್ ಇಂಜಿನಿಯರ್ ಆಗಿದ್ದರೆ, ದಿಲೀಪ್ ಎಂಬಿಎ ಪದವೀಧರನಾಗಿದ್ದ. ಧರ್ಮ ಕುಮಾರ್ ಕರ್ನಾಟಕ ಮುಕ್ತ ವಿವಿ ಹಾಗೂ ಹಲವಾರು ವಿವಿಯಲ್ಲಿ ಡೊನೇಷನ್ ಆಧಾರದಲ್ಲಿ ಸೀಟು ಕೊಡಿಸುವ ಏಜೆಂಟ್ ಆಗಿ ಕೆಲಸ ಮಾಡುತ್ತಿದ್ದ. ಆರೋಪಿಗಳು 2019ರಲ್ಲಿ ನಕಲಿ ಮಾರ್ಕ್ಸ್​ಕಾರ್ಡ್ ಮಾರಾಟ ದಂಧೆ ಆರಂಭಿಸಿದ್ದರು.

    ಫೇಲಾದವರೇ ಟಾರ್ಗೆಟ್!: ವಿವಿಧ ಕಾಲೇಜುಗಳ ಬಳಿ ಹೋಗಿ ಅಲ್ಲಿನ ಅಟೆಂಡರ್​ಗಳಿಗೆ ಹಣ ಕೊಟ್ಟು ಅನುತ್ತೀರ್ಣ ಹೊಂದಿದ್ದ ವಿದ್ಯಾರ್ಥಿಗಳ ಪಟ್ಟಿ ಹಾಗೂ ಅವರ ಬಗ್ಗೆ ಮಾಹಿತಿ ಪಡೆಯುತ್ತಿದ್ದರು. ನಂತರ ವಿದ್ಯಾರ್ಥಿಗಳನ್ನು ಸಂರ್ಪಸಿ, ‘ಕಷ್ಟಪಟ್ಟು ಏಕೆ ಓದುತ್ತೀರಾ. ಅರಾಮಾಗಿ ಕೆಲಸಕ್ಕೆ ಸೇರಿ ದುಡಿಯಿರಿ. ಉತ್ತೀರ್ಣ ಹೊಂದಿರುವ ನೈಜ ಅಂಕಪಟ್ಟಿ ಹಾಗೂ ಪ್ರಮಾಣಪತ್ರ ಕೊಡುತ್ತೇವೆ’ ಎಂದು ನಂಬಿಸುತ್ತಿದ್ದರು. ಒಂದು ಅಂಕಪಟ್ಟಿಗೆ ತಲಾ 25 ರಿಂದ 40 ಸಾವಿರ ರೂ. ಪಡೆಯುತ್ತಿದ್ದರು. ಯಾವುದೇ ಪರೀಕ್ಷೆ ಬರೆಯದಿದ್ದರೂ ಎಲ್ಲ ವಿಷಯಗಳಲ್ಲೂ ಉತ್ತೀರ್ಣರಾದಂತೆ ವಿದ್ಯಾರ್ಥಿಯ ಹೆಸರಿನಲ್ಲಿ ಆತ ಹೇಳಿದ ವಿಶ್ವವಿದ್ಯಾಲಯದ ನಕಲಿ ಅಂಕಪಟ್ಟಿ ಸಿದ್ಧಪಡಿಸಿ ಮಾರಾಟ ಮಾಡುತ್ತಿದ್ದರು. ಹಣ ಕೊಟ್ಟ 20 ದಿನದಲ್ಲೇ ಅಂಕಪಟ್ಟಿ ಸಿದ್ಧವಾಗುತ್ತಿತ್ತು. ಹೊರ ರಾಜ್ಯಗಳಲ್ಲಿ ಮುಚ್ಚಿರುವ ವಿವಿಗಳ ಹೆಸರಿನ ನಕಲಿ ಮಾರ್ಕ್ಸ್​ಕಾರ್ಡ್ ಅನ್ನೂ ಮಾರಾಟ ಮಾಡುತ್ತಿದ್ದರು.

    ಆರೋಪಿಗಳು ಕಾಲೇಜು ನಡೆಸುತ್ತಿದ್ದೇವೆ ಎಂಬ ನೆಪವನ್ನೂ ಹೇಳುತ್ತಿದ್ದರು. ಕೋಚಿಂಗ್ ಸೆಂಟರ್​ಗಳಿಗೆ ಬರುವ ವಿದ್ಯಾರ್ಥಿಗಳನ್ನೂ ಟಾರ್ಗೆಟ್ ಮಾಡುತ್ತಿದ್ದರು. ಇಂಜಿನಿಯರಿಂಗ್, ಡಿಗ್ರಿ ಪದವಿಯ ಅಂಕಪಟ್ಟಿಗೆ ಹೆಚ್ಚು ಹಣ ಪಡೆಯುತ್ತಿದ್ದರು.

    | ಹರೀಶ್ ಪಾಂಡೆ ಡಿಸಿಪಿ, ದಕ್ಷಿಣ ವಿಭಾಗ

    ಯಾವ್ಯಾವ ವಿವಿಗಳು?: ಕರ್ನಾಟಕ ಮುಕ್ತ ವಿಶ್ವವಿದ್ಯಾಲಯ, ಕುವೆಂಪು ವಿವಿ, ಮಂಗಳೂರು ಇನ್​ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಸೈನ್ಸ್, ಛತ್ತೀಸ್​ಗಢ ರಾಜ್ಯದ ಡಾ.ಸಿ.ವಿ.ರಾಮನ್ ವಿಶ್ವವಿದ್ಯಾಲಯ, ಮಧ್ಯಪ್ರದೇಶದ ರವೀಂದ್ರನಾಥ್ ಠಾಗೂರ್ ವಿವಿ ಹಾಗೂ ದೇಶದ ಇನ್ನಿತರ ವಿವಿಗಳ 200 ನಕಲಿ ಮಾರ್ಕ್ಸ್ ಕಾರ್ಡ್​ಗಳು ಆರೋಪಿಗಳ ಬಳಿ ಪತ್ತೆಯಾಗಿವೆ. ಪದವಿ, ಸ್ನಾತ್ತಕೋತ್ತರ ಪದವಿ, ಇಂಜಿನಿಯರಿಂಗ್, ಎಂಬಿಎ ಸೇರಿ ಇನ್ನಿತರ ಕೋರ್ಸ್​ಗಳ ಮಾರ್ಕ್ಸ್​ಕಾರ್ಡ್​ಗಳನ್ನು ತಯಾರಿಸುತ್ತಿದ್ದರು. ಬಂಧಿತರಿಂದ ಮಾರ್ಕ್ಸ್​ಕಾರ್ಡ್ ಪಡೆದಿರುವ ಹಲವು ಮಂದಿ ಪ್ರತಿಷ್ಠಿತ ಖಾಸಗಿ ಕಂಪನಿ, ಬ್ಯಾಂಕ್ ಸೇರಿ ಇನ್ನಿತರ ಕಡೆ ಕೆಲಸಕ್ಕೆ ಸೇರಿರುವುದು ತನಿಖೆಯಲ್ಲಿ ಗೊತ್ತಾಗಿದ್ದು, ಪೊಲೀಸರು ಅವರಿಗೆ ಶೋಧ ನಡೆಸುತ್ತಿದ್ದಾರೆ. ಫೇಲ್ ಆದ ವಿದ್ಯಾರ್ಥಿಗಳನ್ನು ಆರೋಪಿ ರಘು ಮತ್ತು ಧರ್ಮಕುಮಾರ್ ಹುಡುಕುತ್ತಿದ್ದರೆ, ದೀಪಕ್ ಮತ್ತು ನರೇಶ್ ಮಾರ್ಕ್ಸ್​ಕಾರ್ಡ್ ತಯಾರಿಸುತ್ತಿದ್ದರು.

    ತಯಾರಿ ಹೇಗೆ?: ಕೆಲ ವಿವಿಯ ಮಾರ್ಕ್ಸ್​ಕಾರ್ಡ್​ಗಳ ಜೆರಾಕ್ಸ್ ಪ್ರತಿಗಳನ್ನು ಆರೋಪಿಗಳು ಸಂಗ್ರಹಿಸಿದ್ದರು. ಲ್ಯಾಪ್​ಟಾಪ್ ಮೂಲಕ ಕೆಲ ತಂತ್ರಜ್ಞಾನ ಬಳಸಿಕೊಂಡು ವಿವಿಗಳು ಕೊಡುವ ಅಸಲಿ ಅಂಕಪಟ್ಟಿ ಹೋಲುವಂತೆ ನಕಲಿ ಮಾರ್ಕ್ಸ್​ಕಾರ್ಡ್ ತಯಾರಿಸುತ್ತಿದ್ದರು. ನಂತರ ಪ್ರಿಂಟರ್ ಸಹಾಯದಿಂದ ಕಲರ್ ಪ್ರಿಂಟ್ ತೆಗೆದು, ನಕಲಿ ಸೀಲನ್ನು ಅಂಕಪಟ್ಟಿಗೆ ಹಾಕುತ್ತಿದ್ದರು.

    ಸಿಕ್ಕಿಬಿದ್ದಿದ್ದು ಹೇಗೆ?: ಮಾ.7ರ ಮಧ್ಯಾಹ್ನ ಜಯನಗರ 3ನೇ ಬ್ಲಾಕ್​ನಲ್ಲಿರುವ ಎನ್​ಎಂಕೆಆರ್ ಕಾಲೇಜಿನ ಬಳಿ ರಘು, ಧರ್ಮಕುಮಾರ್ ಪರೀಕ್ಷೆ ಬರೆಯಲು ಬರುವ ವಿದ್ಯಾರ್ಥಿಗಳನ್ನು ಹುಡುಕುತ್ತಿದ್ದರು. ಇದು ಕಾಲೇಜು ಆಡಳಿತ ಮಂಡಳಿ ಗಮನಕ್ಕೆ ಬಂದು ಪೊಲೀಸರಿಗೆ ಕರೆ ಮಾಡಿ ಮಾಹಿತಿ ನೀಡಿದ್ದರು. ಪೊಲೀಸರು ಇಬ್ಬರನ್ನು ಕರೆ ದೊಯ್ದು ವಿಚಾರಣೆ ನಡೆಸಿದಾಗ ಪ್ರಕರಣ ಬೆಳಕಿಗೆ ಬಂದಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts