ಬರೋಬ್ಬರಿ 1.17 ಕೋಟಿ ರೂಪಾಯಿ ಮೌಲ್ಯದ ಕಳ್ಳನೋಟು, 1.2 ಕಿಲೋ ತೂಕದ ಚಿನ್ನದ ಬಿಸ್ಕೆಟ್ಸ್ !

Fake Currency Gold biscuits
Published on

ಸಿಲಿಗುರಿ: ಸಶಸ್ತ್ರ ಸೀಮಾ ಬಲ ಮತ್ತು ಪಶ್ಚಿಮ ಬಂಗಾಳ ಪೊಲೀಸರು ನಡೆಸಿದ ಬೃಹತ್ ಕಾರ್ಯಾಚರಣೆಯಲ್ಲಿ ಬರೋಬ್ಬರಿ 1.17 ಕೋಟಿ ರೂಪಾಯಿ ಮೌಲ್ಯದ ಕಳ್ಳನೋಟು, 1.2 ಕಿಲೋ ತೂಕದ ಒಟ್ಟು 17 ಚಿನ್ನದ ಬಿಸ್ಕೆಟ್​ಗಳನ್ನು ವಶಪಡಿಸಿಕೊಳ್ಳಲಾಗಿದೆ. ಈ ಪ್ರಕರಣದಲ್ಲಿ ಒಂಭತ್ತು ಜನರನ್ನು ಬಂಧಿಸಲಾಗಿದೆ. ಒಂದು ಕಾರು, ಎರಡು ದ್ವಿಚಕ್ರವಾಹನ, 11 ಮೊಬೈಲ್ ಫೋನ್​ಗಳನ್ನು ವಶಪಡಿಸಿಕೊಂಡಿದ್ದಾರೆ.

ಕಳ್ಳನೋಟುಗಳಷ್ಟೂ ಹೊಸ 500 ಮತ್ತು 2,000 ರೂಪಾಯಿ ಮುಖಬೆಲೆಯವು. ಕಳ್ಳನೋಟು ಮತ್ತು ಚಿನ್ನ ಕಳ್ಳಸಾಗಣೆಯ ಮೂಲ ಎಲ್ಲಿ ಎಂಬುದನ್ನು ಪತ್ತೆ ಹಚ್ಚುವ ಕೆಲಸವನ್ನು ಮಾಡುತ್ತಿದ್ದೇವೆ. - ಮೊಹಮ್ಮದ್ ಸನಾ ಅಖ್ತರ್,                                        ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ, ಕೂಚ್​ ಬೆಹರ್

ಈ ಭಾರಿ ಕಾರ್ಯಾಚರಣೆಯನ್ನು ಸಶಸ್ತ್ರ ಸೀಮಾ ಬಲ (ಎಸ್​ಎಸ್​ಬಿ) ಮತ್ತು ಪೊಲೀಸರು ಜಂಟಿಯಾಗಿ ಸೋಮವಾರ ಸಂಜೆ ನಡೆಸಿದ್ದರು. ಎಸ್​ಎಸ್​ಬಿಗೆ ಗುಪ್ತಚರ ಮಾಹಿತಿ ಲಭ್ಯವಾಗಿದ್ದು, ಅದನ್ನು ಆಧರಿಸಿ ಈ ಕಾರ್ಯಾಚರಣೆ ನಡೆದಿತ್ತು. ಕಳ್ಳನೋಟು ಮತ್ತು ಚಿನ್ನವನ್ನು ಅಸ್ಸಾಂಗೆ ಸಾಗಿಸಲಾಗುತ್ತಿತ್ತು ಎಂದು ಕೂಚ್​ ಬೆಹರ್ ಕೊತ್ವಾಲಿ ಪೊಲೀಸ್ ಠಾಣೆಯ ಇನ್​ಚಾರ್ಜ್​ ಇನ್​ಸ್ಪೆಕ್ಟರ್ ಸೌಮ್ಯಜಿತ್ ರಾಯ್ ತಿಳಿಸಿದ್ದಾರೆ.

ಚಿನ್ನ ಮತ್ತು ಕಳ್ಳನೋಟುಗಳಿದ್ದ ಕಾರಿಗೆ ಎರಡು ಮೋಟಾರ್​ ಸೈಕಲ್​ಗಳ ಕಾವಲಿತ್ತು. ಫಾಲಾಕಟದಲ್ಲಿ ಪೊಲೀಸರು ತಪಾಸಣೆ ನಡೆಸುತ್ತಿದ್ದಾಗ ಇವರು ಅಲ್ಲಿಂದ ತಪ್ಪಿಸಿಕೊಂಡು ಪರಾರಿಯಾಗಿದ್ದರು. ಆದರೆ, ಕೂಚ್​ ಬೆಹರ್ ಪಟ್ಟಣದ ಸಮೀಪ ದವ್ವಾಗುರಿ ಎಂಬಲ್ಲಿ ನಾಕಾ ಬಂದಿ ಮಾಡಿದ ಕಾರಣ ಅಲ್ಲಿ ಇವರಿಗೆ ತಪ್ಪಿಸಿಕೊಳ್ಳಲಾಗಲಿಲ್ಲ. ಬಂಧಿತರನ್ನು ಕೋರ್ಟ್​ಗೆ ಮಂಗಳವಾರ ಅಪರಾಹ್ನ ಹಾಜರುಪಡಿಸಿದ್ದು, ಪೊಲೀಸ್ ಕಸ್ಟಡಿಗೆ ಒಪ್ಪಿಸಿದೆ. ಹೆಚ್ಚಿನ ತನಿಖೆ ನಡೆಯತ್ತಿದೆ ಎಂದು ರಾಯ್ ತಿಳಿಸಿದ್ದಾರೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net