ಡಿಸಿ ಹೆಸರಲ್ಲಿ ನಕಲಿ ಫೇಸ್‌ಬುಕ್‌ ಖಾತೆ ತೆರೆದು ಹಣ ಲಪಟಾಯಿಸಿದ ಖದೀಮರು

DC-Face-book-account
Published on

ಕಾರವಾರ: ಉತ್ತರ ಕನ್ನಡ ಜಿಲ್ಲಾಧಿಕಾರಿ ಅವರ ಹೆಸರಿನಲ್ಲಿ ನಕಲಿ ಫೇಸ್‌ಬುಕ್ ಖಾತೆಯನ್ನು ತೆರೆದಿರುವ ಕಿಡಿಗೇಡಿಗಳು ವಂಚನೆಯನ್ನು ಮುಂದುವರಿಸಿದ್ದಾರೆ ಈ ಸಂಬಂಧ ಈಗ ಸಿಎನ್‌ಇ ಪೊಲೀಸ್ ಠಾಣೆಯಲ್ಲಿ ಶನಿವಾರ ದೂರು ದಾಖಲಾಗಿದೆ.
ಡೆಪ್ಯುಟಿ ಕಮೀಷನರ್ ಉತ್ತರ ಕನ್ನಡ' ಹೆಸರಿನ ಅಧಿಕೃತ ಖಾತೆಯ ಬದಲು ನವೆಂಬರ್ 3 ರಂದು ನಕಲಿ ಖಾತೆಯೊಂದನ್ನು ತೆರೆಯಲಾಗಿತ್ತು. ಆ ಖಾತೆಯಿಂದ ಹಲವರಿಗೆ ಮೆಸೆಂಜರ್ ಮೂಲಕ ಸಂದೇಶ ಕಳಿಸಿ, ನಂಬರ್ ಕೇಳಿ ಪಡೆಯಲಾಗಿತ್ತು. ಅಲ್ಲದೆ, ತಮ್ಮ ಪರಿಚಯದ ಸಿಆರ್‌ಪಿಎಫ್ ಅಧಿಕಾರಿಯೊಬ್ಬರು ವರ್ಗವಾಗುವವರಿದ್ದು, ಅವರ ಮನೆಯ ಫರ್ನೀಚರ್‌ಗಳಿವೆ ಅವುಗಳನ್ನು ಕೊಳ್ಳಿ ಎಂದು ಸಂದೇಶ ಕಳಿಸಲಾಗಿತ್ತು. ನಕಲಿ ಖಾತೆ ಸೃಷ್ಟಿಯಾದ ಬಗ್ಗೆ ಮಾಹಿತಿ ಬಂದ ಹಿನ್ನೆಲೆಯಲ್ಲಿ"ಡೆಪ್ಯುಟಿ ಕಮೀಷನರ್ ಉತ್ತರ ಕನ್ನಡ' ಹೆಸರಿನ ಅಧಿಕೃತ ಖಾತೆಯಲ್ಲಿ ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ್ ಅವರ ಫೋಟೋ ಬದಲಿಸಲಾಗಿತ್ತು. ಖಾತೆ ನಕಲು ಮಾಡಿ ಮೋಸ ಮಾಡುತ್ತಿರುವ ಬಗ್ಗೆ ಸಂದೇಶ ಹಾಕಲಾಗಿತ್ತು. ಫೇಸ್‌ಬುಕ್‌ಗೆ ರಿಪೋರ್ಟ್ ಮಾಡಲಾಗಿತ್ತು. ಈ ಎಲ್ಲ ಕ್ರಮಗಳ ನಂತರವೂ ವಂಚಕರು ತಮ್ಮ ವಂಚನೆಯನ್ನು ಮುಂದುವರಿಸಿದ್ದಾರೆ. ಡಿಸಿ ಫೋಟೋ ಬದಲಿಸಿದ ನಂತರ ನಕಲಿ ಖಾತೆಯಲ್ಲೂ ಫೋಟೋ ಬದಲಿಸಲಾಗಿದೆ. ಮಾತ್ರವಲ್ಲ ಕರೆ ಮಾಡಿ ಹಣ ಹಾಕುವಂತೆ ಒತ್ತಾಯ ಮಾಡುತ್ತಿದ್ದಾರೆ ಎನ್ನಲಾಗಿದೆ. ಸುರೇಶ ಖಾರ್ವಿ ಅವರಿಗೆ 10 ಸಾವಿರ ರೂ. ಹಣ ಹಾಕುವಂತೆ ಸಂದೇಶ ಕಳಿಸಲಾಗಿದೆ. ಅವರು ಅದನ್ನು ನಂಬಿ ಖಾತೆಗೆ ಹಣ ಹಾಕಿದ್ದಾರೆ ಎಂದು ಪೊಲೀಸ್ ಠಾಣೆಯಲ್ಲಿ ದಾಖಲಾದ ದೂರಿನಲ್ಲಿ ತಿಳಿಸಲಾಗಿದೆ.

ವ್ಯತ್ಯಾಸ ತಿಳಿಯುವುದು ಹೇಗೆ..?
ಡೆಪ್ಯುಟಿ ಕಮೀಷನರ್ ಉತ್ತರ ಕನ್ನಡ' ಎಂಬ ಹೆಸರಿನಲ್ಲಿ ಉತ್ತರ ಕನ್ನಡ ಜಿಲ್ಲಾಡಳಿತ 2017 ರಿಂದಲೂ ಅಧಿಕೃತ ಫೇಸ್‌ಬುಕ್ ಖಾತೆ ಹಾಗೂ ಪೇಜ್ ಹೊಂದಿದೆ. ಜಿಲ್ಲಾಧಿಕಾರಿ ಅವರ ಸಾರ್ವಜನಿಕ ಸಂದೇಶಗಳನ್ನು ಅದರಲ್ಲಿ ಹಂಚಿಕೊಳ್ಳಲಾಗುತ್ತದೆ. ಸುಮಾರು 8 ಸಾವಿರದಷ್ಟು ಫಾಲೋವರ್‌ಗಳು, ಸಾಕಷ್ಟು ಸ್ನೇಹಿತರು ಈ ಪೇಜ್ ಹಾಗೂ ಅಕೌಂಟ್‌ಗೆ ಇದ್ದಾರೆ. ಆದರೆ, ನಕಲಿ ಖಾತೆಯಲ್ಲಿ ಮೂರು ಫೋಟೋಗಳು ಮಾತ್ರ ಅಪ್‌ಲೋಡ್‌ ಆಗಿವೆ. ಕೆಲವೇ ಫಾಲೋವರ್‌ಗಳಿದ್ದಾರೆ.

"ಜಿಲ್ಲಾಧಿಕಾರಿ ಆಪ್ತರು ಎಂದು ಕರೆ ಮಾಡಿ, ಸಂದೇಶ ಕಳಿಸಿ ಮೋಸ ಮಾಡಲು ಯತ್ನಿಸಿದಲ್ಲಿ ಯಾರೂ ಅದಕ್ಕೆ ಮೋಸ ಹೋಗಬಾರದು. ನಮ್ಮ ಕಚೇರಿಗೆ ಕರೆ ಮಾಡಿ ಖಚಿತ ಮಾಡಿಕೊಳ್ಳಿ ಎಂದು ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ್ ಫೇಸ್‌ಬುಕ್‌ ಹಾಗೂ ಟ್ವಿಟ್ಟರ್‌ನಲ್ಲಿ ವಿಡಿಯೋ ಸಂದೇಶ ಅಪ್‌ಲೋಡ್‌ ಮಾಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net