

ಬಂಟ್ವಾಳ: ಸಜಿಪನಡು ಶ್ರೀ ಷಣ್ಮುಖ ಸುಬ್ರಹ್ಮಣ್ಯ ದೇವಸ್ಥಾನದ ಷಷ್ಠಿ ವಾರ್ಷಿಕ ಜಾತ್ರೆ ಹಾಗೂ ಬಿಲ್ಲಂಪದವು ಕ್ಷೇತ್ರದಲ್ಲಿ ಒಂದು ತಿಂಗಳ ಪರ್ಯಂತ ಜರುಗಲಿರುವ ದೀಪೋತ್ಸವದ ಪೂರ್ವಭಾವಿ ಸಭೆ ಸಜಿಪ ಮಾಗಣೆ ತಂತ್ರಿ ಎಂ. ಸುಬ್ರಮಣ್ಯ ಭಟ್ ಅಧ್ಯಕ್ಷತೆಯಲ್ಲಿ ಭಾನುವಾರ ನಡೆಯಿತು.
ನವೆಂಬರ್ 1ರಿಂದ ಡಿಸೆಂಬರ್ 1ರ ತನಕ ಪ್ರತಿದಿನ ಶ್ರೀ ಕಾಳಾದ್ರಿ ಸಾನ್ನಿಧ್ಯ ಬಿಲ್ಲಂಪದವಿನಲ್ಲಿ ಕಾರ್ತಿಕ ದೀಪೋತ್ಸವ ಪ್ರತಿದಿನ ಇಬ್ಬರು ಸೇವಾರ್ಥಿಗಳ ಸೇವಾ ರೂಪದಲ್ಲಿ ನಡೆಸಲು ತೀರ್ಮಾನಿಸಲಾಯಿತು. ದೇವಸ್ಥಾನದ ವಾರ್ಷಿಕ ಜಾತ್ರಾ ಮಹೋತ್ಸವದ ಅಂಗವಾಗಿ ದೇವರ ಬಲಿ ಉತ್ಸವ, ಆಶ್ಲೇಷ ಬಲಿ ಸೇವೆ, ಗಣಹೋಮ, ಸಾನ್ನಿಧ್ಯ ಕಲಶಾಭಿಷೇಕ, ಭಜನೆ ಅನ್ನದಾನ, ಯಕ್ಷಗಾನ ತಾಳಮದ್ದಳೆ, ಭಕ್ತಿಸಂಗೀತ ರಸಮಂಜರಿ, ದೇವರಿಗೆ ಹಾಗೂ ಪರಿವಾರ ದೇವರಿಗೆ ವಿಶೇಷ ಸೇವಾ ಪೂಜೆ, ಫಲ ಪಂಚಾಮೃತ ಅಭಿಷೇಕ ಪವಮಾನ ಅಭಿಷೇಕವನ್ನು ನೀಲೇಶ್ವರ ಉಚ್ಚಿಲತ್ತಾಯ ಪದ್ಮನಾಭ ತಂತ್ರಿಗಳ ನೇತೃತ್ವದಲ್ಲಿ ಜರುಗಿಸಲು ತೀರ್ಮಾನಿಸಲಾಯಿತು. ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಮುಳ್ಳುಂಜ ವೆಂಕಟೇಶ್ವರ ಭಟ್ಟ, ಅರ್ಚಕ ಗಣಪತಿ ಭಟ್, ತಾಲೂಕು ಪಂಚಾಯಿತಿ ಮಾಜಿ ಸದಸ್ಯ ಪ್ರವೀಣ್ ಆಳ್ವ, ಗ್ರಾಪಂ ಮಾಜಿ ಅಧ್ಯಕ್ಷ ಸೋಮನಾಥ ಭಂಡಾರಿ, ಸಜಿಪ ಪಡು ಗ್ರಾಪಂ ಉಪಾಧ್ಯಕ್ಷ ವಿಠಲ್ ಅಮೀನ್, ಸುಧಾಕರ ಕೆ.ಟಿ. ಕಿಶನ್ ಶೇಣವ, ಮನೋರಂಜನ್ ಶೇಖ, ಪ್ರದೀಪ ಶೆಟ್ಟಿ, ನಿತಿನ್ ಅರಸ, ಸುರೇಶ್ ಬಂಗೇರ, ನಾಗೇಶ್ ಪೂಜಾರಿ, ಸುಭಾಷ್ ಶೆಟ್ಟಿ, ಭಾಸ್ಕರ, ಮೊದಲಾದವರು ಸಲಹೆ ಸೂಚನೆ ನೀಡಿದರು.