ಅಮೆರಿಕ ಜನಾಂಗೀಯ ಪ್ರತಿಭಟನೆ ವೇಳೆ ಪ್ರೇಮಿಗಳ ಸರಸ?: ವೈರಲ್​ ಫೋಟೋ ಹಿಂದಿನ ಸತ್ಯಾಂಶವೇ ಬೇರೆ!

Couple Kissing
Published on

ನವದೆಹಲಿ: ಆಫ್ರಿಕಾ ಮೂಲದ ವ್ಯಕ್ತಿಯನ್ನು ಕುತ್ತಿಗೆಯ ಮೇಲೆ ಕಾಲಿಟ್ಟು ಕೊಂದ ಪೊಲೀಸರ ವಿರುದ್ಧ ಅಮೆರಿಕದಲ್ಲಿ ಆರಂಭಗೊಂಡಿರುವ ಜನಾಂಗೀಯ ಸಂಘರ್ಷ ತಾರಕಕ್ಕೇರಿದ್ದು, ಭಾರಿ ಪ್ರತಿಭಟನೆಗಳು ವ್ಯಕ್ತವಾಗಿವೆ. ಇದರ ನಡುವೆ ಜೋಡಿಯೊಂದು ಭದ್ರತಾ ಪಡೆಗಳಿದ್ದರೂ ಖ್ಯಾರೆ ಎನ್ನದೇ ರಸ್ತೆ ಮೇಲೆ ಬಿದ್ದು, ಪರಸ್ಪರ ಚುಂಬಿಸುತ್ತಿರುವ ಫೋಟೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದ್ದು, ಇದನ್ನು ಜನಾಂಗೀಯ ಸಂಘರ್ಷಕ್ಕೆ ತಳುಕು ಹಾಕಲಾಗಿದೆ.

ನ್ಯಾಷನಲಿಸ್ಟ್​ ಕೆ.ಆರ್ ಹೆಸರಿನ ಫೇಸ್​ಬುಕ್​ ಖಾತೆಯಲ್ಲಿ ಫೋಟೋ ಅಪ್​ಲೋಡ್​ ಮಾಡಲಾಗಿದೆ. ಹಿಂದಿಯಲ್ಲಿ ಅಡಿಬರಹ ಬರೆಯಲಾಗಿದ್ದು, ಅದರ ಸಾರ ಹೀಗಿದೆ... ಅಮೆರಿಕದಲ್ಲಿ ಹೇಗೆ ಪ್ರತಿಭಟನೆಗಳು ನಡೆಯುತ್ತವೆ ಎಂಬುದಕ್ಕೆ ಈ ಫೋಟೋ ಸಾಕ್ಷಿಯಾಗಿದೆ ಎಂದು ಬರೆಯಲಾಗಿದೆ. ಇದೀಗ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ವೈರಲ್​ ಆಗಿದೆ. ಇದನ್ನೂ ಓದಿ: ವಿಶ್ವಸಂಸ್ಥೆಯ ಬಡವರ ಸದ್ಭಾವನಾ ರಾಯಭಾರಿಯಾದ 13ರ ಬಾಲಕಿ: ಈಕೆಯ ಸಹೃದಯ ಜಗತ್ತಿಗೆ ಸ್ಪೂರ್ತಿ!

ಫೋಟೋ ಕುರಿತು ಅನುಮಾನ ವ್ಯಕ್ತವಾಗಿ ಇಂಡಿಯಾ ಟುಡೆ ಆ್ಯಂಟಿ ಫೇಕ್​ ನ್ಯೂಸ್​ ವಾರ್​ ರೂಮ್ ಫ್ಯಾಕ್ಟ್​ಚೆಕ್​ ನಡೆಸಿದ್ದು, ವೈರಲ್​ ಫೋಟೋ ಹಿಂದೆ ದಾರಿ ತಪ್ಪಿಸುವ ತಂತ್ರವಿದೆ ಎಂಬುದು ಬಹಿರಂಗವಾಗಿದೆ. ಅಷ್ಟಕ್ಕೂ ವೈರಲ್​ ಫೋಟೋ ಹಿಂದಿನ ಅಸಲಿ ಸತ್ಯ ಏನೆಂದರೆ, ಅದನ್ನು 2011ರಲ್ಲಿ ಕೆನಡಾದ ವ್ಯಾಂಕೋವರ್​ನಲ್ಲಿ ಎರಡು ಹಾಕಿ ಕ್ಲಬ್​ ಬೆಂಬಲಿಗರ ನಡುವೆ ಉಂಟಾದ ಗಲಭೆ ವೇಳೆ ಕ್ಲಿಕ್ಕಿಸಲಾಗಿದೆ. ​

ಇದೇ ಫೋಟೋ ವಾಸಫಿ ಟಿವಿ ಹೆಸರಿನ ಫೇಸ್​ಬುಕ್​ ಪೇಜ್​ನಲ್ಲೂ ಅಪ್​ಲೋಡ್​ ಆಗಿದ್ದು, ಮಿನೆಸೋಟಾದ ಮಿನ್ನಿಯಾಪೋಲಿಸ್​ನಲ್ಲಿ ಆಫ್ರಿಕಾ ಮೂಲದ ವ್ಯಕ್ತಿಯ ಸಾವಿನ ವಿರುದ್ಧದ ಪ್ರತಿಭಟನಾ ವೇಳೆ ಫೋಟೋ ಸೆರೆಹಿಡಿಯಲಾಗಿದೆ ಎಂಬ ಅಡಿಬರಹ ಬರೆದು, ಜಸ್ಟೀಸ್​ ಫಾರ್​ ಜಾರ್ಜ್​ ಫ್ಲೋಯ್ಡ್​ ಎಂಬ ಹ್ಯಾಶ್​ಟ್ಯಾಗ್​ ಕೊಡಲಾಗಿದೆ. ಇದನ್ನೂ ಓದಿ: ಮುತ್ತಪ್ಪ ರೈ ಆಸ್ತಿಯಲ್ಲಿ 2ನೇ ಪತ್ನಿಗೆ ಏನೇನು ಸಿಕ್ತು? ಆರಂಭವಾಗಲಿದೆಯಾ ಆಸ್ತಿ ವಿವಾದ?

ಪೋಟೋ ಅಸಲಿಯತ್ತೇನು?

ಫೋಟೋವನ್ನು ಗೂಗಲ್​ ರಿವರ್ಸ್​ ಸರ್ಚ್​ ಇಂಜಿನ್​ನಲ್ಲಿ ಹಾಕಿ ಹುಡುಕಾಡಿದಾಗ ಫೋಟೋ ಕುರಿತಾದ ಅನೇಕ ಲೇಖನಗಳು ಪತ್ತೆಯಾಗಿವೆ. ನ್ಯೂಯಾರ್ಕ್​ ಪೋಸ್ಟ್​ ಪ್ರಕಾರ 2011ರ ಜೂನ್​ ತಿಂಗಳಲ್ಲಿ ಕೆನಡಾದ ವ್ಯಾಂಕೋವರ್​ನಲ್ಲಿ ಒಂದು ಗಲಭೆ ನಡೆಯಿತು. ಸ್ಟ್ಯಾನ್ಲಿ ಕಪ್​ ಫೈನಲ್​ನಲ್ಲಿ ಸ್ಥಳೀಯ ಕ್ಯಾನುಕ್ಸ್ ತಂಡ ಎದುರಾಳಿ ಬೋಸ್ಟನ್​ ಬ್ರುಯಿನ್ಸ್​ ತಂಡದ ವಿರುದ್ಧ ಸೋತಿದ್ದಕ್ಕೆ ಗಲಭೆ ಸೃಷ್ಟಿಯಾಗಿತ್ತು.​ ಈ ವೇಳೆ ಫೋಟೋವನ್ನು ಸೆರೆಯಿಡಿಯಲಾಗಿದೆ. ಫೋಟೋದಲ್ಲಿರುವ ಜೋಡಿಯನ್ನು ಕೆನಡಾದ ಅಲೆಕ್ಸ್​ ಥಾಮಸ್​ ಮತ್ತು ಅವಳ ಆಸ್ಟ್ರೇಲಿಯಾ ಬಾಯ್​ಫ್ರೆಂಡ್​ ಸ್ಕಾಟ್​​​ ಜೋನ್ಸ್​ ಎಂದು ತಿಳಿದುಬಂದಿದೆ.

ಮಾಧ್ಯಮ ಸಂದರ್ಶನವೊಂದರಲ್ಲಿ ಮಾತನಾಡಿರುವ ಸ್ಕಾಟ್​, ಅಲೆಕ್ಸ್​ ಮೇಲೆ ಗುಂಪೊಂದು ಹಲ್ಲೆ ಮಾಡಿತ್ತು. ಇದರಿಂದ ವಿಚಲಿತಳಾಗಿದ್ದ ಆಕೆಯನ್ನು ಸಹಜ ಸ್ಥಿತಿಗೆ ತರಲು ಚುಂಬಿಸಿದೆ ಎಂದು ಹೇಳಿಕೊಂಡಿದ್ದಾರೆ. ಚುಂಬಿಸುತ್ತಿರುವ ಫೋಟೋವನ್ನು ರಿಚ್​ ಲಾಮ್​ ಎಂಬ ಫೋಟೋಗ್ರಾಫರ್​ ಸೆರೆಹಿಡಿದಿದ್ದರು.

ಒಟ್ಟಾರೆ ಈ ಮೂಲಕ ತಿಳಿಯುವುದೇನೆಂದರೆ ವೈರಲ್​ ಆಗಿರುವ ಫೋಟೋ 2011ನೇ ಇಸವಿಯಲ್ಲಿ ಸೆರೆಹಿಡಿದಿದ್ದು, ಪ್ರಸ್ತುತ ಅಮೆರಿಕದಲ್ಲಿ ನಡೆಯುತ್ತಿರುವ ಪ್ರತಿಭಟನೆಗೂ ಅದಕ್ಕೂ ಸಂಬಂಧವಿಲ್ಲ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net