

ಇದು ಶಸ್ತ್ರಚಿಕಿತ್ಸೆ ಇಲ್ಲದ, ಕ್ರೀಮ್ ಲೋಷನ್ ಇಲ್ಲದ ಸಂಪೂರ್ಣ ನೈಸರ್ಗಿಕ ವಿಧಾನ. ಇದರಲ್ಲಿ ಮುಖದ ಸ್ನಾಯುಗಳಿಗೆ ವ್ಯಾಯಾಮ, ಮಸಾಜ್ ಮತ್ತು ಉಸಿರಾಟದ ಕ್ರಿಯೆಗಳು ಸೇರಿವೆ. ಇದು ಮುಖದ ಅಂದವನ್ನು ಹೆಚ್ಚಿಸುವುದು ಮಾತ್ರವಲ್ಲ, ಮನಸ್ಸಿಗೆ ನೆಮ್ಮದಿ ಮತ್ತು ಶಾಂತಿಯನ್ನು ಸಹ ನೀಡುತ್ತದೆ.
ಯಾಕೆ ಮುಖ ಯೋಗ ಮುಖ್ಯ?: ನಮ್ಮ ಮುಖವು ನಮ್ಮ ಮನಸ್ಸಿನ ಭಾವನೆಗಳನ್ನು ತೋರಿಸುವ ಒಂದು ಕನ್ನಡಿ. ನಾವು ಒತ್ತಡ, ಚಿಂತೆ ಅಥವಾ ಕೋಪದಲ್ಲಿದ್ದಾಗ, ಮುಖದ ಮೇಲೆ ಸುಕ್ಕುಗಳು, ರೇಖೆಗಳು ಮೂಡುತ್ತವೆ. ಮುಖ ಯೋಗದಿಂದ ಈ ಸ್ನಾಯುಗಳು ಪುನಃ ಚುರುಕಾಗುತ್ತವೆ. ಇದು ಮುಖಕ್ಕೆ ಉತ್ತಮ ರಕ್ತ ಸಂಚಾರವನ್ನು ಒದಗಿಸುತ್ತದೆ, ಇದರಿಂದ ಚರ್ಮವು ಹೊಳೆಯುತ್ತದೆ ಮತ್ತು ಯೌವನದಿಂದ ಕೂಡಿದಂತೆ ಕಾಣುತ್ತದೆ. ಇದಲ್ಲದೆ, ಮುಖ ಯೋಗವು ಒತ್ತಡವನ್ನು ಕಡಿಮೆ ಮಾಡಲು ಮತ್ತು ಮನಸ್ಸಿಗೆ ಶಾಂತಿ ತರಲು ಸಹಾಯ ಮಾಡುತ್ತದೆ.
1. ಹಣೆಯ ಸುಕ್ಕುಗಳಿಗೆ: ಕೈ ಬೆರಳುಗಳನ್ನು ಹಣೆಯ ಮೇಲೆ ಇಟ್ಟು ನಿಧಾನವಾಗಿ ಮೇಲಕ್ಕೆ ಮತ್ತು ಕೆಳಕ್ಕೆ ಚಲಿಸಿ. ನಂತರ, ನಿಮ್ಮ ಹುಬ್ಬುಗಳನ್ನು ಮೇಲಕ್ಕೆತ್ತಿ ಮತ್ತು ಕೆಳಗೆ ಇಳಿಸಿ. ಹೀಗೆ 5-10 ಬಾರಿ ಪುನರಾವರ್ತಿಸಿ.
2. ಕಣ್ಣಿನ ಒತ್ತಡಕ್ಕೆ: ಕಣ್ಣುಗಳನ್ನು ಬಿಗಿಯಾಗಿ ಮುಚ್ಚಿ, 5 ಸೆಕೆಂಡುಗಳ ಕಾಲ ಹಿಡಿದು ನಂತರ ದೊಡ್ಡದಾಗಿ ತೆರೆಯಿರಿ. ಇದನ್ನು 5-6 ಬಾರಿ ಪುನರಾವರ್ತಿಸಿ. ಈ ಅಭ್ಯಾಸವು ಕಣ್ಣಿನ ಸುತ್ತಲಿನ ಆಯಾಸವನ್ನು ಕಡಿಮೆ ಮಾಡುತ್ತದೆ.
3. ಕಪೋಲದ ಬಿಗಿತಕ್ಕೆ: ಬಾಯಿಯಲ್ಲಿ ಗಾಳಿಯನ್ನು ತುಂಬಿ ಕೊಂಡು ನಿಮ್ಮ ಕೆನ್ನೆಗಳನ್ನು ಉಬ್ಬಿಸಿ. ಗಾಳಿಯನ್ನು ನಿಧಾನವಾಗಿ ಬಲ ಕೆನ್ನೆಯಿಂದ ಎಡ ಕೆನ್ನೆಗೆ ಮತ್ತು ಮತ್ತೆ ಎಡದಿಂದ ಬಲಕ್ಕೆ ಸರಿಸಿ. ನಂತರ, ನಿಧಾನವಾಗಿ ಗಾಳಿಯನ್ನು ಹೊರಬಿಡಿ. ಈ ಅಭ್ಯಾಸವು ಕೆನ್ನೆಗಳು ಸಡಿಲವಾಗುವುದನ್ನು ತಡೆಯುತ್ತದೆ.
4. ದವಡೆ ಮತ್ತು ಕುತ್ತಿಗೆಗೆ : ತಲೆಯನ್ನು ಹಿಂದಕ್ಕೆ ಬಾಗಿಸಿ, ನಂತರ ಕೆಳಗಿನ ದವಡೆಯನ್ನು ಸಾಧ್ಯವಾದಷ್ಟು ಮೇಲಕ್ಕೆತ್ತಿ. ಆಗ ನೀವು ಕುತ್ತಿಗೆಯ ಸ್ನಾಯುಗಳು ಬಿಗಿಯಾಗುವುದನ್ನು ಗಮನಿಸಬಹುದು. ಹೀಗೆ 10 ಸೆಕೆಂಡುಗಳ ಕಾಲ ಹಿಡಿದು ನಂತರ ವಿಶ್ರಾಂತಿ ಪಡೆಯಿರಿ. ಇದು ಗಲ್ಲದ ಕೆಳಗಿನ ಕೊಬ್ಬನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.
ಮುಖ ಯೋಗದ ಅದ್ಭುತ ಲಾಭಗಳು: ನಿಯಮಿತವಾಗಿ ಮುಖ ಯೋಗ ಮಾಡಿದರೆ ಹಲವಾರು ಲಾಭಗಳಿವೆ: ಸುಕ್ಕುಗಳು, ರೇಖೆಗಳು ಕಡಿಮೆ ಆಗಿ ಮುಖ ಯೌವನದಿಂದ ಕೂಡಿದಂತೆ ಕಾಣುತ್ತದೆ. ಚರ್ಮವು ತಾಜಾ ಮತ್ತು ಆರೋಗ್ಯಕರವಾಗಿ ಕಾಣುತ್ತದೆ. ಮುಖದ ಅಂದ ಹೆಚ್ಚಾದಂತೆ ಮನಸ್ಸಿಗೆ ಸಂತೋಷ ಮತ್ತು ಆತ್ಮವಿಶ್ವಾಸ ಹೆಚ್ಚುತ್ತದೆ. ಮುಖದ ಸ್ನಾಯುಗಳ ಬಿಗಿತ ಕಡಿಮೆಯಾಗಿ, ಮನಸ್ಸಿಗೆ ಶಾಂತಿ ಸಿಗುತ್ತದೆ.
ಮುಖ ಯೋಗವು ಕೇವಲ ಮುಖದ ಅಂದವನ್ನು ಹೆಚ್ಚಿಸುವ ಒಂದು ವಿಧಾನವಲ್ಲ. ಇದು ನಿಮ್ಮ ದೇಹ ಮತ್ತು ಮನಸ್ಸನ್ನು ಸಮತೋಲನದಲ್ಲಿ ಇಡುವ ಒಂದು ಸುಂದರ ಮಾರ್ಗ. ಪ್ರತಿದಿನ ಕೇವಲ 10 ರಿಂದ 15 ನಿಮಿಷಗಳ ಕಾಲ ಇದನ್ನು ಅಭ್ಯಾಸ ಮಾಡಿದರೆ ಸಾಕು, ನಿಮ್ಮ ಮುಖದ ಮೇಲಿನ ನಗು ಮತ್ತಷ್ಟು ಸುಂದರವಾಗುತ್ತದೆ.