

ನನ್ನನ್ನು ಅಪ್ರಬುದ್ಧನೆಂದು ಟೀಕಿಸುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಐದು ಗ್ಯಾರಂಟಿ ಯೋಜನೆಗಳಿಗೆ ಬೇಕಿರುವ 59 ಸಾವಿರ ಕೋಟಿ ರೂ.ಗಳನ್ನು ಹೇಗೆ ಹೊಂದಿಸುತ್ತಾರೆ ಎಂಬುದನ್ನು ರಾಜ್ಯದ ಜನತೆಗೆ ತಿಳಿಸಿ ತಮ್ಮ ಪ್ರಬುದ್ಧತೆ ಪ್ರದರ್ಶಿಸಬೇಕು ಎಂದು ಸಂಸದ ಪ್ರತಾಪ್ ಸಿಂಹ ಸವಾಲು ಹಾಕಿದರು.
ಪ್ರತಾಪ್ ಸಿಂಹ ಎಳಸು, ಅಪ್ರಬುದ್ಧ ಎಂಬ ಸಿದ್ದರಾಮಯ್ಯ ಅವರ ಟೀಕೆಗೆ ಸುದ್ದಿಗೋಷ್ಠಿಯಲ್ಲಿ ಶುಕ್ರವಾರ ಪ್ರತಿಕ್ರಿಯಿಸಿದ ಅವರು, ಸಿದ್ದರಾಮಯ್ಯ ಅವರ ಟೀಕೆಯಿಂದ ನನಗೇನೂ ಬೇಜಾರಿಲ್ಲ. ನೀವು ಮಹಾಮೇದಾವಿ, ಅರ್ಥಶಾಸ್ತ್ರಜ್ಞ. ನಿಮ್ಮ ಪ್ರಕಾರ ಪ್ರಬುದ್ಧತೆ ಎಂದರೆ ಏನು? ನಿಮ್ಮ ರಾಜಕೀಯ ಲಾಭಕ್ಕಾಗಿ ಸ್ವಪಕ್ಷೀಯರನ್ನೇ ಎತ್ತಿಕಟ್ಟಿ ಪರಮೇಶ್ವರ್ ಅವರನ್ನು ಸೋಲಿಸಿದ್ದಾ? ಮೊಮ್ಮಗನನ್ನು ರಾಜಕೀಯಕ್ಕೆ ತರಲು ಪ್ರಯತ್ನಿಸುತ್ತಿರುವುದಾ? ನಿಮ್ಮನ್ನು ರಾಜಕೀಯವಾಗಿ ಬೆಳೆಸಿದ ಮಾಜಿ ಪ್ರಧಾನಿ ದೇವೇಗೌಡರನ್ನು ಏಕವಚನದಲ್ಲಿ ಕರೆಯುವುದಾ? ಹಿರಿಯರನ್ನು ತುಚ್ಛವಾಗಿ ಕಾಣುವುದಾ? ಗ್ಯಾರಂಟಿಗಳ ಹೆಸರಿನಲ್ಲಿ ಜನರನ್ನು ದಾರಿ ತಪ್ಪಿಸುತ್ತಿರುವುದಾ? ಇದೇ ಪ್ರಬುದ್ಧತೆ ಎನ್ನುವುದಾದರೆ ಇಂತಹ ಪ್ರಬುದ್ಧತೆ ನನಗೆ ಬೇಡ. ರಾಜ್ಯದ ಆರ್ಥಿಕ ಪರಿಸ್ಥಿತಿ ಗೊತ್ತಿಲ್ಲದೆ ಗ್ಯಾರಂಟಿಗಳನ್ನು ಘೋಷಿಸಿ ವಿಲವಿಲ ಒದ್ದಾಡುತ್ತಿದ್ದೀರಿ. ನಿಮ್ಮ ಪ್ರಕಾರವೇ ಗ್ಯಾರಂಟಿಗಳ ಜಾರಿಗೆ ವರ್ಷಕ್ಕೆ 59 ಸಾವಿರ ಕೋಟಿ ರೂ. ಬೇಕು. ಅದನ್ನು ಯಾವ ಮೂಲದಿಂದ ತರುತ್ತೀರಿ ಎಂಬುದನ್ನು ಜನರಿಗೆ ತಿಳಿಸಿ ಎಂದು ಟಾಂಗ್ ಕೊಟ್ಟರು.
ಸಿದ್ದರಾಮಯ್ಯ ಅವರಿಗೆ ಉಪಕಾರ ಸ್ಮರಣೆ ಇಲ್ಲ. ಅವರನ್ನು ರಾಜಕಾರಣಕ್ಕೆ ಕರೆತಂದಿದ್ದು ಕೆಂಪೀರೇಗೌಡರು. ಅಧಿಕಾರ ಕೊಟ್ಟವರು ದೇವೇಗೌಡರು. ಆದರೂ ಅವರ ಹೆಸರನ್ನು ಸಿದ್ದರಾಮಯ್ಯ ಎಲ್ಲಿಯೂ ಹೇಳುವುದಿಲ್ಲ. ಈ ಬಾರಿಯ ಚುನಾವಣೆಯಲ್ಲಿ ವರುಣದಲ್ಲಿ ನೀವು ಯಾರಿಗೆ ಕರೆ ಮಾಡಿದ್ದಿರಿ? ನಟ ಸುದೀಪ್ ಪ್ರಚಾರಕ್ಕೆ ಬಾರದಂತೆ ಹೇಗೆ ತಡೆದಿರಿ? ನಿಮ್ಮ ವಿರುದ್ಧ ತೀಕ್ಷ್ಣ ಹೇಳಿಕೆ ನೀಡದಂತೆ ಹೇಗೆ ನೋಡಿಕೊಂಡಿರಿ ಎಂಬುದನ್ನಾದರೂ ಸ್ಮರಿಸಿಕೊಳ್ಳಿ. ನಂತರ ಬಿಜೆಪಿಯಲ್ಲಿ ನಿಮ್ಮೊಂದಿಗೆ ಹೊಂದಾಣಿಕೆ ಮಾಡಿಕೊಂಡಿದ್ದು ಯಾರು ಎನ್ನುವುದನ್ನು ಬಹಿರಂಗಪಡಿಸುತ್ತೇನೆ ಎಂದರು.
ಕಲಬುರಗಿಯಲ್ಲಿ ಮರಳು ದಂಧೆಕೋರರು ಪೊಲೀಸ್ ಕಾನ್ಸ್ಟೇಬಲ್ ಮೇಲೆ ಟ್ರ್ಯಾಕ್ಟರ್ ಹರಿಸಿರುವ ಕುರಿತು ಪ್ರತಿಕ್ರಿಯಿಸಿದ ಪ್ರತಾಪ್ ಸಿಂಹ, ಹಿಂದೆ ಸಿದ್ದರಾಮಯ್ಯ ಸರ್ಕಾರದ ಅವಧಿಯಲ್ಲಿ ಇನ್ಸ್ಪೆಕ್ಟರ್ ಮಲ್ಲಿಕಾರ್ಜುನ ಬಂಡೆ ಕೊಲೆಯಾಯಿತು. ಐಎಎಸ್ ಅಧಿಕಾರಿ ಡಿ.ಕೆ.ರವಿ, ಡಿವೈಎಸ್ಪಿ ಗಣಪತಿ ಆತ್ಮಹತ್ಯೆ ಮಾಡಿಕೊಂಡರು. ರಶ್ಮಿ ಮಹೇಶ್, ಶಿಖಾ ಸೇರಿದಂತೆ ಹಲವು ಅಧಿಕಾರಿಗಳ ಮೇಲೆ ಸರಣಿ ದಾಳಿ ನಡೆದವು. ಮತ್ತೆ ಸಿದ್ದರಾಮಯ್ಯ ಅಧಿಕಾರಕ್ಕೆ ಬಂದಿರುವುದರಿಂದ ಕೆಲವರಿಗೆ ಧೈರ್ಯ ಬಂದಿದೆ. ಮುಂದಿನ ದಿನಗಳಲ್ಲಿ ಇಂತಹ ಘಟನೆಗಳು ಮರುಕಳಿಸುತ್ತವೆ ಎಂದರು.
ಬಿಜೆಪಿ ಕಾರ್ಯಕತರಾದ ಪ್ರವೀಣ್ ನೆಟ್ಟಾರು, ಹರ್ಷನ ಹತ್ಯೆಯಾದಾಗ ಕಠಿಣ ಕ್ರಮ ಕೈಗೊಳ್ಳಲಿಲ್ಲ. ಯಡಿಯೂರಪ್ಪ ಅವರಿಂದ ಅಧಿಕಾರ ವಹಿಸಿಕೊಂಡ ಅತಿರಥ ಮಹಾರಥರು ಪಕ್ಷವನ್ನು ಅಧಿಕಾರಕ್ಕೆ ತರಲು ಶ್ರಮಿಸಲಿಲ್ಲ. ಅಧಿಕಾರಕ್ಕೆ ತರುವ ಛಲವೂ ಅವರಲ್ಲಿರಲಿಲ್ಲ. ಈ ನೋವು ಕಾರ್ಯಕರ್ತರಲ್ಲಿತ್ತು. ಕಾರ್ಯಕರ್ತರ ಮನಸ್ಸಿನ ನೋವನ್ನು ನಾನು ಹೇಳಿದ್ದೇನೆ. ನನಗೆ ಯಾವ ಅಧಿಕಾರದ ಆಸೆಯೂ ಇಲ್ಲ ಎಂದು ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಅವರಿಗೆ ಪ್ರತಾಪ್ ಸಿಂಹ ಟಾಂಗ್ ಕೊಟ್ಟರು.
ಜನತಾ ಪರಿವಾರದಿಂದ ರಾಜಕೀಯ ಆರಂಭಿಸಿದ ಸಿದ್ದರಾಮಯ್ಯ ಬಾಯಿಗೆ ಬಂದಂತೆ ಕಾಂಗ್ರೆಸ್ ಬೈಯ್ಯುತ್ತಿದ್ದರು. 2006ರಿಂದ ಕಾಂಗ್ರೆಸ್ನಲ್ಲಿದ್ದಾರೆ. ಸಾವರ್ಕರ್ ಬ್ರಿಟಿಷರ ಬಳಿ ಕ್ಷಮೆ ಕೋರಿದ್ದರು ಎಂಬ ಕಾರಣಕ್ಕೆ ಅವರ ಪಠ್ಯ ಕೈಬಿಟ್ಟು, ನೆಹರು ಪಠ್ಯ ಹಾಕಿದ್ದಾರೆ. ನೂರು ವರ್ಷಗಳ ಹಿಂದೆ ನೆಹರು ಅವರನ್ನು ನಬಾ ಜೈಲಿಗೆ ಹಾಕಲಾಗಿತ್ತು. ನೆಹರು ಅವರು ಕ್ಷಮಾಪಣಾ ಪತ್ರ ಬರೆದುಕೊಟ್ಟು ಜೈಲಿನಿಂದ ಹೊರಬಂದಿದ್ದರು. ಆದರೆ, ಸಾವರ್ಕರ್ ಎರಡೆರಡು ಬಾರಿ ಜೀವಾವಧಿ ಶಿಕ್ಷೆ ಅನುಭವಿಸಿದ್ದರು. ಅಂತಹವರ ಪಠ್ಯ ಕೈಬಿಟ್ಟಿರುವುದು ಇತಿಹಾಸಕ್ಕೆ ಮಾಡುತ್ತಿರುವ ಧೋಖಾ. ಗ್ಯಾರಂಟಿ ವಿಚಾರದಲ್ಲೂ ಇದೇ ರೀತಿ ಮಾಡುತ್ತಿದ್ದಾರೆ.ಪ್ರತಾಪ್ ಸಿಂಹ, ಸಂಸದ