

ಬೆಂಗಳೂರು: ಕಡಿಮೆ ಖರ್ಚಿನಲ್ಲಿ ಹೆಚ್ಚು ಲಾಭ ತರುವಂಥದ್ದು ಬಿದಿರು ಕೃಷಿ. ಹೀಗಾಗಿ, ಮುಂದಿನ ದಿನಗಳಲ್ಲಿ ಜಿಲ್ಲಾ ಮಟ್ಟದಲ್ಲಿ ಬಿದಿರು ಕೃಷಿ, ಮೌಲ್ಯವರ್ಧನೆ, ಮಾರುಕಟ್ಟೆ ಕುರಿತ ಕಾರ್ಯಾಗಾರ ಆಯೋಜಿಸಿ ರೈತರಿಗೆ ಅರಿವು ಮೂಡಿಸಲಾಗುವುದು ಎಂದು ಕೃಷಿ ಸಚಿವ ಎನ್.ಚಲುವರಾಯಸ್ವಾಮಿ ತಿಳಿಸಿದ್ದಾರೆ.
ಕೃಷಿ ಸಂಸ್ಥೆ, ಕೃಷಿ ಜಲಾನಯನ ಅಭಿವೃದ್ಧಿ ಮತ್ತು ತಂತ್ರಜ್ಞಾನ ಸಂಸ್ಥೆ, ಬೆಂಗಳೂರು ಬಿದಿರು ಸೊಸೈಟಿ ಸಹಯೊಗದೊಂದಿಗೆ ಶೇಷಾದ್ರಿರಸ್ತೆಯ ಕೃಷಿ ಇಲಾಖೆ ಆವರಣದಲ್ಲಿ ಆಯೋಜಿಸಿದ್ದ ರಾಜ್ಯಮಟ್ಟದ ಕಾರ್ಯಾಗಾರ ಕಾರ್ಯಕ್ರಮದಲ್ಲಿ ಮಾತನಾಡಿದರು. ಸಣ್ಣ ಪ್ರಮಾಣದ ರೈತರಿಗೆ ಬಿದಿರು ಒಳ್ಳೆಯ ಲಾಭ ತರುವ ಕೃಷಿಯಾಗಿದೆ. ಬಿದಿರು ವೇಗವಾಗಿ ಬೆಳೆಯುವುದರ ಜತೆಗೆ ಪರಿಸರ, ಆರ್ಥಿಕ ಮತ್ತು ಜೀವನ ಭದ್ರತೆ ಒದಗಿಸಲು ಸಹಕಾರಿಯಾಗಲಿದೆ. ಪೀಠೋಪಕರಣಗಳ ತಯಾರಿಕೆ ಸೇರಿ ನಾನಾ ಕೈಗಾರಿಕೆಗಳಿಗೆ ಕಚ್ಚಾ ವಸ್ತುಗಳನ್ನು ಒದಗಿಸುತ್ತದೆ. ಪೇಪರ್ ತಯಾರಿಕೆ, ಜವಳಿ ಉದ್ಯಮ, ಆಹಾರೋದ್ಯಮ ಮತ್ತು ಇಂಧನ ತಯಾರಿಕೆಯಲ್ಲಿ ಬಿದಿರನ್ನು ಪರಿಣಾಮಕಾರಿಯಾಗಿ ಬಳಸಲಾಗುತ್ತಿದೆ' ಎಂದರು.
ಬಿದಿರು ಸೊಸೈಟಿಯು ಬಿದಿರು ಕೃಷಿಯ ಕುರಿತು ಹೆಚ್ಚಿನ ಜನರಿಗೆ ಅರಿವು ಮೂಡಿಸುವ ನಿಟ್ಟಿನಲ್ಲಿ ಸರ್ಕಾರದಿಂದ ಅಗತ್ಯ ನೆರವು ಒದಗಿಸಲಾಗುವುದು. ಈ ನಿಟ್ಟಿನಲ್ಲಿ ಸಚಿವರು, ಅಧಿಕಾರಿಗಳು ಹಾಗೂ ಸೊಸೈಟಿ ಅವರ ನೇತೃತ್ವದಲ್ಲಿ ಸಭೆ ನಡೆಸಿ ಚರ್ಚಿಸೋಣ ಎಂದು ಸಚಿವರು ಭರವಸೆ ನೀಡಿದರು. ನಾನಾ ತಜ್ಞರು ರೈತರಿಗೆ ಬಿದಿರು ಕೃಷಿ ಹೇಗೆ ಲಾಭದಾಯಕ ಎಂಬುದನ್ನು ನಾನಾ ತಜ್ಞರು ಪ್ರಾತ್ಯಕ್ಷಿಕೆ ಮೂಲಕ ತಿಳಿಸಿದರು. ಕೃಷಿ ತಂತ್ರಜ್ಞರ ಸಂಸ್ಥೆಯ ಅಧ್ಯಕ್ಷೆ ಸಿ.ಎನ್. ನಂದಿನಿ ಕುಮಾರಿ, ಕೃಷಿ ಆಯುಕ್ತ ವೈ.ಎಸ್. ಪಾಟೀಲ್ ಮತ್ತಿತರರಿದ್ದರು.
ಗಮನ ಸೆಳೆದ ಬಿದಿರು ಪೆಲೆಟ್ಸ್
ಬಿದಿರು ಪುಡಿ, ಕಟ್ಟಿಗೆ ಪುಡಿಗಳನ್ನು ಬಳಸಿ ತಯಾರಿಸಿದ ಪರಿಸರ ಸ್ನೇಹಿ ಬಿದಿರು ಪೆಲೆಟ್ಸ್ಗಳು ಬಂದಿವೆ. ಇವು ಹೋಟೆಲ್ಗಳಲ್ಲಿ ಅಡುಗೆ ತಯಾರಿಗೆ, ಕೈಗಾರಿಕೆಗಳ ಬಳಕೆಗೆ ಅತ್ಯಂತ ಉಪಯುಕ್ತವಾದ ಉರುವಲಾಗಿದೆ. ಇವು ಕೃಷಿ ವಿವಿ ಆವರಣದಲ್ಲಿ ನೋಡುಗರ ಗಮನ ಸೆಳೆದವು. ಜತೆಗೆ ಬಿದಿರಿನ ಓಲೆ,ಜುಮುಕಿ, ನೆಕ್ಲೆಸ್ಗಳು, ಹ್ಯಾಂಗಿಂಗ್ಸ್, ಅಲಂಕಾರಿಕ ಲ್ಯಾಂಪ್ಗಳು, ಸಂಗೀತ ಪರಿಕರಗಳು, ಗಾಂಧೀಜಿ ಸೇರಿ ನಾನಾ ಗಣ್ಯ ವ್ಯಕ್ತಿಗಳ ಬಿದಿರಿನ ಕಲಾಕೃತಿಗಳು ವಿಶೇಷವಾಗಿದ್ದವು. ಬಿದಿರು ಖುರ್ಚಿ, ಟೇಬಲ್ಗಳು ಮತ್ತಿತರ ಅಲಂಕಾರಿಕ ವಸ್ತುಗಳು ಪ್ರದರ್ಶನದಲ್ಲಿದ್ದವು.