ಪರಿಶ್ರಮ ಅತ್ಯಂತ ದೊಡ್ಡ ತಪಸ್ಸು: ಬಂಟ್ವಾಳ ಡಿ.ವೈ.ಎಸ್.ಪಿ.ವಿಜಯ ಪ್ರಸಾದ ಹೇಳಿಕೆ

excel
ಗುರುವಾಯನಕೆರೆ, ವಿದ್ಯಾಸಾಗರ ಕ್ಯಾಂಪಸ್‌ನ ಎಕ್ಸೆಲ್ ಪದವಿ ಪೂರ್ವ ಕಾಲೇಜಿನಲ್ಲಿ ಪ್ರಥಮ ಪಿಯುಸಿ ತರಗತಿಗಳ ಪ್ರಾರಂಭೋತ್ಸವ ಕಾರ್ಯಕ್ರಮ ಡಿವೈಎಸ್‌ಪಿ ವಿಜಯಪ್ರಸಾದ್ ಉದ್ಘಾಟಿಸಿ ಮಾತನಾಡಿದರು.
Published on

ವಿಜಯವಾಣಿ ಸುದ್ದಿಜಾಲ ಬೆಳ್ತಂಗಡಿ

ಗುರುವಾಯನಕೆರೆ, ವಿದ್ಯಾಸಾಗರ ಕ್ಯಾಂಪಸ್‌ನ ಎಕ್ಸೆಲ್ ಪದವಿ ಪೂರ್ವ ಕಾಲೇಜಿನಲ್ಲಿ ಶೈಕ್ಷಣಿಕ ವರ್ಷ 2024-25 ನೇ ಸಾಲಿನಲ್ಲಿ ದಾಖಲಾತಿ ಹೊಂದಿದ ವಿದ್ಯಾರ್ಥಿಗಳಿಗೆ ಪ್ರಥಮ ಪಿಯುಸಿ ತರಗತಿಗಳ ಪ್ರಾರಂಭೋತ್ಸವ ಕಾರ್ಯಕ್ರಮ ನಡೆಯಿತು.

ಬಂಟ್ವಾಳ ಡಿ.ವೈ.ಎಸ್.ಪಿ. ವಿಜಯ ಪ್ರಸಾದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ವಿದ್ಯಾರ್ಥಿ ಜೀವನದಲ್ಲಿ ಪಡುವ ಪರಿಶ್ರಮವೇ ಅತ್ಯಂತ ದೊಡ್ಡ ತಪಸ್ಸು. ಹಾಸ್ಟೆಲ್ ಜೀವನದಲ್ಲಿ ಸಿಗುವ ಕಲಿಕೆ ನಮ್ಮ ಸುಭದ್ರ ಜೀವನವನ್ನು ರೂಪಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಇದರೊಂದಿಗೆ ವಿದ್ಯಾರ್ಥಿಯು ಮುಂಬರುವ ತನ್ನ ಸಾರ್ವಜನಿಕ ಜೀವನದಲ್ಲಿ ದುಶ್ಚಟಗಳಿಂದ, ಸಾಮಾಜಿಕ ಜಾಲತಾಣಗಳ ದುರ್ಬಳಕೆಯಿಂದ ದೂರವಿರಬೇಕೆಂದು ಹೇಳಿದರು.

ಧರ್ಮಸ್ಥಳದ ಕಲಾ ಪೋಷಕ ಭುಜಬಲಿ ಮಾತನಾಡಿ, ಕಲಿಕೆಯೊಂದಿಗೆ ಸಾಂಸ್ಕೃತಿಕ ಕಲಾ ಪ್ರಾಶಸ್ತ್ಯವನ್ನು ಮಕ್ಕಳಿಗೆ ನೀಡುತ್ತಿರುವುದನ್ನು ಅಭಿನಂದಿಸಿದರು.

ಸಂಸ್ಥೆಯ ಅಧ್ಯಕ್ಷ ಸುಮಂತ್ ಕುಮಾರ್ ಜೈನ್ ಮಾತನಾಡಿ, ತಂದೆ ತಾಯಿಯ ಆಶೀರ್ವಾದವೇ ಪ್ರತಿಯೊಬ್ಬ ವಿದ್ಯಾರ್ಥಿಯ ಏಳಿಗೆಗೆ ಕಾರಣವಾಗುವುದು. ಪ್ರತಿ ದಿನವೂ ಬೆಳಗ್ಗೆ ತಂದೆ ತಾಯಿಯ ಪಾದಕಮಲಗಳನ್ನು ಸ್ಮರಿಸಿಕೊಳ್ಳುವುದನ್ನು ಮರೆಯದಿರಿ. ಹಾಸ್ಟೆಲ್ ಜೀವನ ಬದುಕಿನ ಬೇರೆ ಬೇರೆ ಆಯಾಮಗಳನ್ನು ಪರಿಚಯಿಸುತ್ತದೆ. ನಾಯಕತ್ವ, ಯೋಜನೆ, ವಿಚಾರ ವಿನಿಮಯ ಹೀಗೆ ಹಲವಾರು ಗುಣಗಳ ವರ್ಧನೆಗೆ ವಸತಿ ನಿಲಯಗಳ ನಿಯಮ ಕಾರಣವಾಗುತ್ತದೆ ಎಂದರು.

ಕಾಲೇಜಿನ ವಿವಿಧ ಪ್ರಾಧ್ಯಾಪಕರಿಂದ ಜೆ.ಇ.ಇ, ನೀಟ್, ಸಿಇಟಿ, ನಾಟ, ಎನ್.ಡಿ.ಎ ಮುಂತಾದ ಸ್ಪರ್ಧಾತ್ಮಕ ಪರೀಕ್ಷೆಗಳ ಕುರಿತಾಗಿ ಮಾಹಿತಿ ನೀಡಲಾಯಿತು.

ಎಸ್.ಎನ್.ಭಟ್ ಸೈಪಂಗಲ್ ಹಾಗೂ ಸ್ಮಿತೇಶ್ ಬಾರ್ಯ ಅವರಿಂದ ವಿಶೇಷ ಕಾರ್ಯಾಗಾರ ಹಾಗೂ ಬಂಟ್ವಾಳದ ಡಾನ್ಸ್ ಕ್ರೀವ್ಸ್ ತಂಡದಿಂದ ಮನೋರಂಜನಾ ಕಾರ್ಯಕ್ರಮ ನಡೆಯಿತು.

ಕಾಲೇಜಿನ ಪ್ರಾಂಶುಪಾಲ ಡಾ.ನವೀನ್ ಕುಮಾರ್ ಮರಿಕೆ ಸ್ವಾಗತಿಸಿ, ಕಾಲೇಜಿನ ವಿದ್ಯಾರ್ಥಿ ಕ್ಷೇಮಪಾಲ ಅಧಿಕಾರಿ ದುರ್ಗಾಪರಮೇಶ್ವರ ಭಟ್ ನಿರೂಪಿಸಿದರು. ಭೌತಶಾಸ್ತ್ರ ಅಧ್ಯಾಪಕಿ ದಿವ್ಯ ಹೆಗ್ಡೆ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net