ಹತ್ಯೆಯಾಗಿದ್ದ ಮಾಜಿ ರೂಪದರ್ಶಿ ದಿವ್ಯಾ ಪಹುಜಾ ಮೃತದೇಹ ಪತ್ತೆ

Divya Pahuja
Published on

ಗುರುಗ್ರಾಮ: ಕೊಲೆಯಾಗಿದ್ದ ಮಾಜಿ ರೂಪದರ್ಶಿ ದಿವ್ಯಾ ಪಹುಜಾ ಅವರ ಮೃತದೇಹ ಹರಿಯಾಣದ ತೊಹಾನಾದಲ್ಲಿರುವ ಕಾಲುವೆ ಒಂದರಲ್ಲಿ ಪತ್ತೆಯಾಗಿದೆ.

ದಿವ್ಯಾ ಅವರ ಮೃತದೇಹವನ್ನು ಆಕೆಯ ಕುಟುಂಬಸ್ಥರು ಗುರುತು ಹಿಡಿದಿದ್ದು, ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಹತ್ಯೆ ಸಂಬಂಧ ಮೂವರು ಆರೋಪಿಗಳನ್ನು ಬಂಧಿಸಿರುವ ಪೊಲೀಸರು ಆಕೆಯ ಮರತದೇಹವನ್ನು ಪತ್ತೆ ಮಾಡಲು ಆರು ವಿಶೇಷ ತಂಡಗಳನ್ನು ರಚಿಸಿದ್ದರು.

ಮುಂಬೈನಲ್ಲಿ ನಡೆದ ನಕಲಿ ಪೊಲೀಸ್ ಎನ್‌ಕೌಂಟರ್‌ನಲ್ಲಿ ತನ್ನ ಗೆಳೆಯ, ಗ್ಯಾಂಗ್‌ಸ್ಟರ್ ಸಂದೀಪ್ ಗಡೋಲಿ ಹತ್ಯೆಯ ಆರೋಪಿಗಳಲ್ಲಿ ಒಬ್ಬಳಾದ ಮಾಜಿ ಮಾಡೆಲ್ ದಿವ್ಯಾ ಪಹುಜಾಳನ್ನು ಗುರುಗ್ರಾಮದ ಹೋಟೆಲ್​ ಒಂದರಲ್ಲಿ ಜನವರಿ 03ರಂದು ಗುಂಡಿಕ್ಕಿ ಹತ್ಯೆ ಮಾಡಲಾಗಿತ್ತು.

ದಿವ್ಯಾ ಪಹುಜಾ ಯಾರು?

ಫೆಬ್ರವರಿ 7, 2016 ರಂದು ಮುಂಬೈನ ಹೋಟೆಲ್‌ ಒಂದರಲ್ಲಿ ಗ್ಯಾಂಗ್‌ಸ್ಟರ್ ಸಂದೀಪ್ ಗಡೋಲಿ ಹತ್ಯೆಗೆ ಸಂಬಂಧಿಸಿದಂತೆ ಏಳು ವರ್ಷಗಳ ನಂತರ ಪಹುಜಾ ಅವರನ್ನು ಬಂಧಿಸಲಾಗಿತ್ತು.ಕಳೆದ ವರ್ಷ ಜೂನ್‌ನಲ್ಲಿ ಬಾಂಬೆ ಹೈಕೋರ್ಟ್ ಈಕೆಗೆ ಜಾಮೀನು ನೀಡಿತ್ತು. ಗ್ಯಾಂಗ್‌ಸ್ಟರ್ ಹತ್ಯೆಯಲ್ಲಿ ಭಾಗಿಯಾಗಿದ್ದ ಪಹುಜಾ, ಆಕೆಯ ತಾಯಿ ಮತ್ತು ಐವರು ಪೊಲೀಸರನ್ನು ಮುಂಬೈ ಪೊಲೀಸರು ಬಂಧಿಸಿದ್ದರು.

ಮುಂಬೈ ಪೊಲೀಸರ ಪ್ರಕಾರ, ಗಡೋಲಿಯನ್ನು ಆತನ “ಗೆಳತಿ” ಪಹುಜಾ ಸಹಾಯದಿಂದ ಬಲೆಗೆ ಬೀಳಿಸಿದ ನಂತರ ನಕಲಿ ಎನ್‌ಕೌಂಟರ್‌ನಲ್ಲಿ ಕೊಲ್ಲಲಾಗಿತ್ತು. ಪ್ರತಿಸ್ಪರ್ಧಿ ಗ್ಯಾಂಗ್​ನ ವೀರೇಂದ್ರ ಕುಮಾರ್ ಅಲಿಯಾಸ್ ಬಿಂದರ್ ಗುಜ್ಜರ್ ಎಂಬಾತ ಗಡೋಲಿ ಹತ್ಯೆಗೈಯಲು ಹರಿಯಾಣ ಪೊಲೀಸ್ ಅಧಿಕಾರಿಗಳೊಂದಿಗೆ ಸಂಚು ರೂಪಿಸಿದ್ದ ಎಂದು ಮುಂಬೈ ಪೊಲೀಸರು ತಿಳಿಸಿದ್ದಾರೆ.

ಮುಂಬೈ ಪೊಲೀಸರ ಪ್ರಕಾರ, ಎನ್‌ಕೌಂಟರ್‌ನ ಸಮಯದಲ್ಲಿ ಗುಜ್ಜರ್ ಜೈಲಿನಲ್ಲಿದ್ದನು, ಆದರೆ, ಅವನ ಸಹೋದರ ಮನೋಜ್ ಸಹಾಯದಿಂದ ಸಂಚು ರೂಪಿಸಿದ್ದನು. ಇದಕ್ಕಾಗಿ, ಪಹುಜಾಳನ್ನು ಹನಿ ಟ್ರ್ಯಾಪ್‌ನಂತೆ ಬಳಸುತ್ತಿದ್ದ ಎಂದು ತನಿಖೆ ವೇಳೆ ಬೆಳಕಿಗೆ ಬಂದಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net