

ಉಡುಪಿ: ಕಾಪು ಕ್ಷೇತ್ರದ ಅಭಿವೃದ್ಧಿಗೆ ನಾನು ಯಾವುದೇ ರೀತಿಯ ಅಡ್ಡಿ ಮಾಡಿಲ್ಲ. ನಾನು ಚುನಾವಣೆಯಲ್ಲಿ ಸೋತಿದ್ದರೂ ಸಹ 69 ಸಾವಿರ ಜನ ನನಗೆ ಮತ ಹಾಕಿದ್ದಾರೆ. ಹೀಗಾಗಿ ಕ್ಷೇತ್ರದ ಅಭಿವೃದ್ಧಿಗಾಗಿ ಹಾಗೂ ಜನರ ಹಿತಕ್ಕಾಗಿ ಅಧಿಕಾರ ಇಲ್ಲದಿದ್ದರೂ ಸಹ ನಾನು ಕೆಲಸ ಮಾಡುತ್ತೇನೆ ಎಂದು ಕ್ಷೇತ್ರದ ಮಾಜಿ ಶಾಸಕ, ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ವಿನಯಕುಮಾರ್ ಸೊರಕೆ ಸ್ಪಷ್ಟನೆ ನೀಡಿದರು.
ಉಡುಪಿಯ ಪ್ರೆಸ್ಕ್ಲಬ್ನಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಇತ್ತೀಚೆಗೆ ಬಿಜೆಪಿ ಜಿಲ್ಲಾಧ್ಯಕ್ಷ ಕಿಶೋರಕುಮಾರ್ ಕುಂದಾಪುರ ಮಾಡಿದ್ದ ಆರೋಪಕ್ಕೆ ಪ್ರತಿಕ್ರಿಯೆ ನೀಡಿದರು.
ಸರ್ಕಾರದಿಂದ ಶಾಸಕರಿಗೆ ಅನುದಾನ ಬಿಡುಗಡೆ ಆಗುತ್ತಿಲ್ಲ ಎಂದು ಅವರು ಆರೋಪಿಸಿದ್ದು, ಶಾಸಕರಿಗೆ ಕೊಡಬೇಕಿದ್ದ ಕಳೆದ ವರ್ಷದ 2 ಕೋಟಿ ರೂ. ಅನುದಾನ ಈಗಾಗಲೇ ಬಿಡುಗಡೆ ಆಗಿದೆ. ಅಲ್ಲದೆ, ಈ ವರ್ಷದ 55 ಲಕ್ಷ ರೂ. ಅನುದಾನವೂ ಸಹ ಬಿಡುಗಡೆ ಆಗಿದೆ. ಈ ಹಿಂದೆ ನಾನು ಶಾಸಕನಾಗಿದ್ದಾಗ ಆರಂಭಿಸಿದ್ದ ಯುನಿವರ್ಸಿಟಿ ಕಾಲೇಜ್ ರಿಸರ್ಚ್ ಸೆಂಟರ್ಗೆ ಆರ್ಥಿಕ ಇಲಾಖೆ 5 ಕೋಟಿ ರೂ. ಬಿಡುಗಡೆ ಮಾಡಿದೆ. ಇತ್ತೀಚೆಗಷ್ಟೇ ಕಾಪು ಶಾಸಕರಿಗೆ ಹಾಗೂ ಅವರ ಸಂಬಂಧಿಕರಿಗೆ ಸಂಬಂಧಿಸಿದ ಗುತ್ತಿಗೆದಾರರಿಗೆ 10 ಕೋಟಿ ರೂ. ಅನುದಾನ ಬಿಡುಗಡೆ ಆಗಿದೆ. ಆದರೂ ಬಿಜೆಪಿಗರು ಅನುದಾನವೇ ಇಲ್ಲ ಎನ್ನುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಅಧಿಕಾರ ಇಲ್ಲದಿರುವ ಸೊರಕೆ ಅವರು ಗುತ್ತಿಗೆದಾರರ ಕೆಲಸ ಕಾರ್ಯಗಳಿಗೆ ಸರ್ಕಾರದಿಂದ ಅನುದಾನ ಕೊಡಿಸಲು ಲೆಟರ್ ಕೊಡುತ್ತಾರೆ ಎಂದೂ ಆರೋಪಿಸುತ್ತಾರೆ. ನಾನು ಶಾಸಕನಾಗಿದ್ದಾಗ, ಮಾಜಿಯಾದಾಗ, ಈಗಲೂ ಸಹ ಕ್ಷೇತ್ರದ ಅಭಿವೃದ್ಧಿ ವಿಚಾರವಾಗಿ ಅನೇಕರು ನನ್ನ ಬಳಿ ಬಂದು ಸರ್ಕಾರಕ್ಕೆ ಪತ್ರ ಕೊಡುವಂತೆ ಕೇಳಿಕೊಳ್ಳುತ್ತಾರೆ. ನನಗೆ ಅಧಿಕಾರ ಇಲ್ಲದಿದ್ದರೂ ಸಹ ಕ್ಷೇತ್ರಕ್ಕೆ ಅನುದಾನ ಬರಲಿ ಎಂಬ ಕಾರಣಕ್ಕೆ ಪತ್ರ ಕೊಡುತ್ತೇನೆ. ಬಿಜೆಪಿಗರು ಒಂದೆಡೆ ಅನುದಾನವೇ ಇಲ್ಲ ಎನ್ನುತ್ತಾರೆ. ಮತ್ತೊಂದೆಡೆ, ಕ್ಷೇತ್ರಕ್ಕೆ ಸರ್ಕಾರದಿಂದ ಅನುದಾನ ಕೊಡಿಸಿದರೂ ಸಹ ಆರೋಪಿಸುತ್ತಾರೆ. ಅವರ ಟೀಕೆಯಲ್ಲೂ ಸಹ ದ್ವಂದ್ವ ನಿಲುವು ಇದೆ ಎಂದರು.
ಆರು ವರ್ಷದ ಹಿಂದೆ ನಾನು ಶಾಸಕನಾಗಿದ್ದಾಗ ಯಲ್ಲೂರಲ್ಲಿ ಐಟಿಐ ಕಾಲೇಜು ಮಂಜೂರಿ ಮಾಡಿಸಿದ್ದೆ. 4 ಎಕರೆ ಸರ್ಕಾರಿ ಜಾಗವೂ ಇದ್ದು, 5 ಕೋಟಿ ರೂ. ಅನುದಾನವೂ ಜಮಾ ಆಗಿದೆ. ಆದರೆ, ಶಾಸಕರು ಸ್ಥಳ ಬದಲಾವಣೆ ಮಾಡಿದ್ದರಿಂದ ಆ ಕಾಲೇಜು ಕಾಮಗಾರಿ ಸ್ಥಗಿತಗೊಂಡಿದೆ. ಕಡಲ ಕೊರೆತಕ್ಕೆ ನಿರ್ಲಕ್ಷ್ಮ ಮಾಡುತ್ತಿದ್ದಾರೆ. ಅದಕ್ಕೆ ಅನುದಾನ ತರಲಿ ಎನ್ನುತ್ತಾರೆ. ಸರ್ಕಾರ ಈಗಾಗಲೇ 5 ಕೋಟಿ ರೂ. ಕೊಡುವುದಾಗಿ ತಿಳಿಸಿದೆ. ಕಾಪು ಶಾಸಕರು ಕಡಲಕೊರೆತ ತಡೆಗೆ ಅದೇನೋ ನೀಲಿನೆ ಮಾಡಿದ್ದಾರಂತೆ. ನನಗಂತೂ ಗೊತ್ತಿಲ್ಲ. ಬಹುಶಃ ಅದು ಯಾವುದೋ ರೆಸಾರ್ಟ್ ನಿರ್ಮಾಣ ಮಾಡುವ ನೀಲಿನಕ್ಷೆ ಆಗಿರಬಹುದು ಎಂದು ಸೊರಕೆ ವ್ಯಂಗ್ಯವಾಡಿದರು.
ಸುದ್ದಿಗೋಷ್ಠಿಯಲ್ಲಿ ಜಿಲ್ಲಾಧ್ಯಕ್ಷ ಅಶೋಕಕುಮಾರ್ ಕೊಡವೂರು, ಕಾಪು ಬ್ಲಾಕ್ ಕಾಂಗ್ರೆಸ್ ಸೌತ್ ಅಧ್ಯಕ್ಷ ನವೀನಚಂದ್ರ ಸುವರ್ಣ, ಉತ್ತರ ಅಧ್ಯಕ್ಷ ಸಂತೋಷ್ ಕುಲಾಲ್, ಶರ್ಪುದ್ದೀನ್ ಶೇಖ್, ಜಿತೇಂದ್ರ ಪುಟಾಡೋ, ರೋಯ್ಸ್ ಉದ್ಯಾವರ ಇದ್ದರು.