ಆಪರೇಷನ್​ ಸಿಂಧೂರ - ಸಿದ್ದಗಂಗಾ ಶ್ರೀಗಳ ಗದ್ದುಗೆಗೆ ವಿಶೇಷ ಪೂಜೆ

Renukacharya_Mutt11
Published on

ತುಮಕೂರು: ಪಾಕಿಸ್ತಾನದ ಉಗ್ರ ನೆಲೆ ಮೇಲೆ ದಾಳಿ ನಡೆಸಿ ಧ್ವಂಸಗೈದಿರುವ ಭಾರತೀಯ ಸೈನಿಕರ ಯಶಸ್ವಿ ಕಾರ್ಯಾಚಾರ ಹಿನ್ನೆಲೆ ಸಿದ್ದಗಂಗೆಯ ಡಾ.ಶಿವಕುಮಾರ ಸ್ವಾಮೀಜಿ ಗದ್ದುಗೆಗೆ ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ವಿಶೇಷ ಪೂಜೆ ಸಲ್ಲಿಸಿದರು. ಆಪರೇಷನ್​ ಸಿಂಧೂರ ಯಶಸ್ವಿ ಹಿನ್ನೆಲೆ ಮಹಿಳೆಯರಿಗೆ ಸಿಂಧೂರ ವಿತರಣೆ ಮಾಡಿದರು.

ಬುಧವಾರ ಶ್ರೀಮಠಕ್ಕೆ ಭೇಟಿ ನೀಡಿ ಶ್ರೀಗಳ ಗದ್ದುಗೆಯಲ್ಲಿ ಪ್ರಾರ್ಥನೆ ಸಲ್ಲಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಶ್ಮೀರದ ಪಹಲ್ಗಾಮ್​ನಲ್ಲಿ ಭಯೋತ್ಪಾದಕರು ಹಿಂದು ಪ್ರವಾಸಿಗರನ್ನು ಹತ್ಯೆ ಮಾಡಿದ್ದಕ್ಕೆ ಭಾರತೀಯ ಯೋಧರು ಪ್ರತೀಕಾರ ತೀರಿಸಿಕೊಂಡಿದ್ದಾರೆ. ಪಾಕ್​ ಆಕ್ರಮಿತ ಪ್ರದೇಶ ಮೇಲೆ ವಾಯು ದಾಳಿ ನಡೆದ ಉಗ್ರರ ನೆಲೆಗಳನ್ನು ಧ್ವಂಸ ಮಾಡುವ ಆಪರೇಷನ್​ ಸಿಂಧೂರ ಕಾರ್ಯಾಚರಣೆ ಯಶಸ್ವಿಯಾಗಿದೆ ಎಂದರು.

ಪ್ರಧಾನಿ ನರೇಂದ್ರ ಮೋದಿ ಹಾಗೂ ಯೋಧರಿಗೆ ಇನ್ನಷ್ಟು ಶಕ್ತಿ ಕೊಡಲಿ. ಶಿವಕುಮಾರ ಶ್ರೀಗಳ, ದೇವಾನುದೇವತೆಗಳ ಆಶೀರ್ವಾದ ಇರಲಿ ಅಂತ ವಿಶೇಷ ಪೂಜೆಯನ್ನು ನಮ್ಮ ಮುಖಂಡರ ಜತೆ ಸಲ್ಲಿಸಿದ್ದೀವೆ. ವಿಶೇಷವಾಗಿ ಮೋದಿ, ಇಬ್ಬರು ಮಹಿಳಾ ಕಮಾಂಡರ್​ಗಳಿಗೆ ಭಾರತೀಯರ ಪರವಾಗಿ ಅಭಿನಂದನೆ ಸಲ್ಲಿಸುತ್ತೇನೆ. ಪಹಲ್ಗಾಮ ದಾಳಿಗೆ ಪ್ರತಿಕಾರ ನೀಡುತ್ತೇವೆ ಎಂದು ಮೋದಿ ಸಂಕಲ್ಪ ಮಾಡಿದ್ದರು. ಅದರಂತೆ ಇವತ್ತು 9 ಕಡೆ ಉಗ್ರರ ಅಡಗುತಾಣಗಳ ಮೆಲೆ ದಾಳಿ ಮಾಡಿ, 100 ಕ್ಕೂ ಹೆಚ್ಚು ಉಗ್ರರನ್ನ ಕೊಂದಿದ್ದಾರೆ ಎಂದು ಹೇಳಿದರು.

ಒಂದು ಕಡೆ ಕೇಂದ್ರದ ನಿರ್ಧಾರಕ್ಕೆ ಬದ್ಧ ಅನ್ನುವ ಕಾಂಗ್ರೆಸ್ಸಿಗರು ಇನ್ನೊಂದು ಕಡೆ ವಿಭಿನ್ನವಾದ ಹೇಳಿಕೆಗಳನ್ನ ಕೊಡುತ್ತಾರೆ. ಸಿದ್ದರಾಮಯ್ಯ ಯುದ್ಧ ಅನಿವಾರ್ಯ ಅಲ್ಲ, ಶಾಂತಿ ಅಂತ ಹೇಳಿದ್ದರು. ಯಾವಾಗ ಈ ದೇಶದ ಜನ ಛೀಮಾರಿ ಹಾಕಿದ ಮೇಲೆ ಯುದ್ಧ ಮಾಡೋಕೆ ನಮ್ಮದೇನು ಅಭ್ಯಂತರ ಇಲ್ಲ ಅಂತ ಹೇಳಿಕೆ ಕೊಡುತ್ತಿದ್ದಾರೆ. ಮಲ್ಲಿಕಾರ್ಜುನ ರ್ಖಗೆ ವಿಭಿನ್ನವಾದ ಹೇಳಿಕೆ ಕೊಟ್ಟಿದ್ದಾರೆ. ಮೋದಿ ಅವರಿಗೆ 3 ದಿನದ ಮುಂಚೇನೆ ಮಾಹಿತಿ ಇತ್ತು. ಅದಕ್ಕೋಸ್ಕರ ಅವರ ಪ್ರವಾಸವನ್ನ ಮುಂದೂಡಿದರು ಅಂತ. ರ್ಖಗೆ ಅವರು ಹಿರಯರಿದ್ದು ಕೇಂದ್ರ ಸಚಿವರಾಗಿದ್ದವರು. ಜವಾಬ್ದಾರಿ ಹೇಳಿಕೆ ಕೊಡಬೇಕು ಎಂದು ರೇಣುಕಾಚಾರ್ಯ ತರಾಟೆಗೆ ತೆಗೆದುಕೊಂಡರು.

ಈ ಹಿಂದೆ ನಡೆದ ಸರ್ಜಿಕಲ್​ ಸ್ಟ್ರೆ$ಕ್​ ಬಗ್ಗೆ ಇದೇ ಕಾಂಗ್ರೆಸ್ಸಿಗರು ಸಾಕ್ಷ್ಯಚಿತ್ರ ಬಿಡುಗಡೆ ಮಾಡುವಂತೆ ಒತ್ತಾಯ ಮಾಡಿದ್ದರು. ಆ ದಾಳಿಯನ್ನು ಅನುಮಾನಿಸಿದ್ದರು. ಇವತ್ತು ಸಾಕ್ಷಿ ಸಮೇತ ವಿಡಿಯೋ ಬಿಡುಗಡೆ ಮಾಡಿದ್ದಾರೆ. ಇವತ್ತು ಕಾಂಗ್ರೆಸ್​ನವರು ಶಾಂತಿ ಮಂತ್ರ, ಗಾಂಧಿ ಮಂತ್ರ ಜಪಿಸುತ್ತಿದ್ದಾರೆ. ನಮಗು ಮಹಾತ್ಮಗಾಂಧಿ ಬಗ್ಗೆ ಅಪಾರವಾದ ಗೌರವ ಇದೆ. ನಮ್ಮವರನ್ನು ಹೊಡೆದುರುಳಿಸಿದರು, ಇನ್ನು ನಾವು ಶಾಂತಿ ಮಂತ್ರದ ಜಪ ಮಾಡಬೇಕಾ. ಏಟಿಗೆ ಎದುರೇಟು, ಮುಯ್ಯಿಗೆ ಮುಯ್ಯಿ ಸೇಡಿಗೆ ಸೇಡು ತೀರಿಸಿಕೊಳ್ಳಲು ಇವತ್ತು ತಕ್ಕ ಉತ್ತರವನ್ನ ಕೊಟ್ಟಿದ್ದಾರೆ ಎಂದರು.

ಜಿಲ್ಲಾ ಬಿಜೆಪಿ ವಕ್ತಾರ ಟಿ.ಆರ್​.ಸದಾಶಿವಯ್ಯ, ಯುವ ಮೋರ್ಚಾ ಜಿಲ್ಲಾಧ್ಯಕ್ಷ ಬಿ.ಎಚ್​.ನವಚೇತನ್​, ಮುಖಂಡರಾದ ಚಂದನ್​ ಪಟೇಲ್​, ರಾಯರಪಾಳ್ಯ ಮಹೇಶ್​ ಮತ್ತಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net