

ಬೆಂಗಳೂರು: ತಿದ್ದುಪಡಿ ರೂಪದ ಗೋ ಹತ್ಯೆ ನಿಷೇಧ ಕಾಯ್ದೆಯನ್ನು ಸುಗ್ರೀವಾಜ್ಞೆ ಮೂಲಕ ಜಾರಿ ಮಾಡಲು ಹೊರಟ ಸರ್ಕಾರದ ಕ್ರಮವನ್ನು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಖಂಡಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಿಧಾನಮಂಡಲದಲ್ಲಿ ಗೋಹತ್ಯೆ ನಿಷೇಧ ಕಾಯ್ದೆಯ ಬಗ್ಗೆ ಚರ್ಚೆಯನ್ನೇ ಮಾಡದೆ ಸುಗ್ರೀವಾಜ್ಞೆ ಮೂಲಕ ಜಾರಿಗೆ ತಂದಿರುವುದು ಸರ್ಕಾರದ ಹೇಡಿತನವನ್ನು ತೋರಿಸುತ್ತದೆ. ಚರ್ಚೆ ಮಾಡಿದರೆ ಈ ಮಸೂದೆಯ ಹಿಂದಿನ ದುರುದ್ದೇಶಗಳು ಅನಾವರಣಗೊಂಡು ತಮ್ಮ ಬಣ್ಣ ಬಯಲಾಗುತ್ತದೆ ಎಂಬ ಭಯ ಎಂದರು. ಮತೀಯ ಭಾವನೆಗಳನ್ನು ಕೆರಳಿಸಿ ರಾಜಕೀಯ ಲಾಭ ಪಡೆಯಬೇಕು ಮತ್ತು ಗೋರಕ್ಷಣೆಯ ಹೆಸರಲ್ಲಿ ಪುಂಡಾಟಿಕೆ ನಡೆಸುವವರಿಗೆ ರಕ್ಷಣೆ ಕೊಡಬೇಕು ಎಂಬ ಎರಡು ದುರುದ್ದೇಶಗಳನ್ನು ಬಿಟ್ಟರೆ ಗೋಹತ್ಯೆ ನಿಷೇಧ ಮಸೂದೆಗೆ ಗೋವಿನ ಬಗ್ಗೆ ಭಕ್ತಿಯಾಗಲಿ, ಕಾಳಜಿಯಾಗಲಿ ಇಲ್ಲ ಎಂದು ಹೇಳಿದ್ದಾರೆ.
ಗೋಹತ್ಯೆಗೆ ನಿಷೇಧವಂತೆ, ಗೋಮಾಂಸ ಮಾರಾಟ ಮತ್ತು ಸೇವನೆಗೆ ನಿರ್ಬಂಧ ಇಲ್ಲವಂತೆ. ಇಂತಹದ್ದೊಂದು ಎಡಬಿಡಂಗಿ ಕಾನೂನು ಮಾಡಲು ಇಷ್ಟೆಲ್ಲ ನಾಟಕ ಮಾಡಬೇಕೇ? ಮಾರಾಟ ಮಾಡಲು ಗೋಮಾಂಸವನ್ನು ಆಮದು ಮಾಡಿಕೊಳ್ಳುತ್ತೀರಾ ಎಂದು ಮುಖ್ಯಮಂತ್ರಿಯವರನ್ನು ಪ್ರಶ್ನಿಸಿದ್ದಾರೆ.
ಬಿಜೆಪಿ ಲೇವಡಿ : ಕಾಂಗ್ರೆಸ್ ಮುಕ್ತ ಮಾಡಲು ಪಣತೊಟ್ಟಿರುವ ಸಿದ್ದರಾಮಯ್ಯ ಕಾರ್ಯ ಶ್ಲಾಘನೀಯ ಎಂದು ಬಿಜೆಪಿ ಲೇವಡಿ ಮಾಡಿದೆ. ಗೋಮಾಂಸ ತಿನ್ನುತ್ತೇನೆ ಎನ್ನುತ್ತೀರಿ, ಮೀನು ತಿಂದು ದೇವಸ್ಥಾನಕ್ಕೆ ತೆರಳುತ್ತೀರಿ, ಕುಂಕುಮ ಕಂಡರೆ ನಿಮಗೆ ಭಯ, ಟಿಪ್ಪು ಜಯಂತಿಯನ್ನು ಆಚರಿಸುವ ನಿಮಗೆ ಹನುಮ ಜಯಂತಿಯ ದಿನ ತಿಳಿಯದೇ ಹೋದದ್ದು ವಿಪರ್ಯಾಸ ಎಂದು ಸಿದ್ದರಾಮಯ್ಯ ಗುರಿಯಾಗಿಸಿ ಕುಟುಕಿದೆ.
ಕ್ಷಣ ಕ್ಷಣದ ಸುದ್ದಿಗಳ ಅಪ್ಡೇಟ್ಸ್ಗಾಗಿ ನಮ್ಮ ಫೇಸ್ಬುಕ್ ಪುಟ ಲೈಕ್ ಮಾಡಿ ಮತ್ತು ಫಾಲೋ ಮಾಡಿ..