

ಗೋಣಿಕೊಪ್ಪ : ಕೊಡವರ ಕಲೆ, ಸಂಸ್ಕೃತಿ, ಆಚಾರ, ವಿಚಾರ, ಪದ್ಧತಿ, ಪರಂಪರೆ ಉಳಿಸುವ ನಿಟ್ಟಿನಲ್ಲಿ ಎಲ್ಲರ ಸಹಕಾರ ಅಗತ್ಯ ಎಂದು ಪೊಂಬೊಳ್ಚ ಕೂಟದ ಜಿಲ್ಲಾಧ್ಯಕ್ಷ ಮಾಳೆಟಿರ ಶ್ರೀನಿವಾಸ್ ಅಭಿಪ್ರಾಯಪಟ್ಟರು.
ಗೋಣಿಕೊಪ್ಪಲಿನ ಇಗ್ಗುತ್ತಪ್ಪ ಕೊಡವ ಸಂಘದ ಸಭಾಂಗಣದಲ್ಲಿ ಪೊಂಬೊಳ್ಚ ಕೂಟದಿಂದ ಬುಧವಾರ ಆಯೋಜಿಸಿದ್ದ ಜಿಲ್ಲಾ ಮಟ್ಟದ ಕವಿಗೋಷ್ಠಿಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಕೊಡವ ಕವಿಗಳು ಸಾಕಷ್ಟು ಸಂಖ್ಯೆಯಲ್ಲಿದ್ದರೂ ಅವರಿಗೆ ವೇದಿಕೆ ಲಭಿಸುತ್ತಿಲ್ಲ. ಹಾಗಾಗಿ, ಕವಿಗಳಿಗೆ ವೇದಿಕೆ ನೀಡಲು ಪೊಂಬೊಳ್ಚ ಕೂಟದಿಂದ ತಿಂಗಳಿಗೊಂದು ಹೆಜ್ಜೆ ಎಂಬ ಕಾರ್ಯಕ್ರಮ ರೂಪಿಸಲಾಗಿದೆ ಎಂದು ತಿಳಿಸಿದರು.
ಸಾಹಿತಿ ಮಂಡೇಪಂಡ ಗೀತಾ ಮಂದಣ್ಣ ಮಾತನಾಡಿ, ಕವಿ, ಸಾಹಿತ್ಯ ಹಾಗೂ ಅಕ್ಷರ ಸರಸ್ವತಿ ಕೊಟ್ಟಂತಹ ದೊಡ್ಡ ವರ. ಕವಿಗಳಿಗೆ ಅಪ್ಪನೆರವಂಡ ಹರಿದಾಸ ಅಪ್ಪಚ್ಚಕವಿ ಸ್ಫೂರ್ತಿಯಾಗಿದ್ದಾರೆ. ಇವರು ಹಾಕಿಕೊಟ್ಟ ಮಾರ್ಗದಲ್ಲಿ ನಾವುಗಳು ಸಾಗಬೇಕು ಎಂದು ತಿಳಿಸಿದರು. ಪೊಂಬೊಳ್ಚ ಕೂಟದ ಸ್ಥಾಪಕ ಅಧ್ಯಕ್ಷ ಕೋಟೆರ ಉದಯ್ ಪೂಣಚ್ಚ ಮಾತನಾಡಿ, ಬರಹಗಾರರಿಗೆ ಮುಂದಿನ ದಿನದಲ್ಲಿ ಕೂಟದ ವತಿಯಿಂದ ಸಹಕಾರ ನೀಡಲಾಗುವುದು. ಪುಸ್ತಕ ಸಂಸ್ಕೃತಿ ಉಳಿಸುವ ನಿಟ್ಟಿನಲ್ಲಿ ತಮ್ಮಲ್ಲಿರುವ ಬರಹಗಳು ಹೆಚ್ಚಾಗಿ ಮೂಡಿಬರುವಂತಾಗಲಿ ಎಂದು ಆಶಿಸಿದರು.
ಜಿಲ್ಲೆಯ ವಿವಿಧ ಭಾಗದಿಂದ 25ಕ್ಕೂ ಹೆಚ್ಚು ಕವಿಗಳು ಆಗಮಿಸಿ ಕವಿತೆ ವಾಚನ ಮಾಡಿದರು. ಕುಶಾಲನಗರದ ಕೊಡವ ಸಮಾಜದಿಂದ ಉಮ್ಮತ್ತಾಟ್ ಕಾರ್ಯಕ್ರಮ ಗಮನ ಸೆಳೆಯಿತು. ಪೊಂಬೊಳ್ಚ ಕೂಟದ ಉಪಾಧ್ಯಕ್ಷ ಕಿಕ್ಕೇರಿಯಂಡ ಲೀಲಾ ಅಯ್ಯಪ್ಪ, ಪೊಂಬೊಳ್ಚ ಕೂಟದ ಸದಸ್ಯೆ ಮಲ್ಚೀರ ಯಶೋದಾ ದೇವಯ್ಯ ಉಪಸ್ಥಿತರಿದ್ದರು.