

ಪ್ರಶಾಂತ ಭಾಗ್ವತ, ಉಡುಪಿ
ನಗರದ ಹೃದಯ ಭಾಗದಲ್ಲಿರುವ ಕಲ್ಸಂಕ ವೃತ್ತದಲ್ಲಿ ಪ್ರತಿದಿನವೂ ಸಂಚಾರ ಸಿಕ್ಕು (ಟ್ರಾಫಿಕ್ ಜಾಮ್) ಸಂಭವಿಸುತ್ತಿದ್ದು, ಸುಗಮ ಸಂಚಾರಕ್ಕೆ ತೊಡಕಾಗುತ್ತಿದೆ. ಅದನ್ನು ನಿವಾರಿಸಲು ಉಡುಪಿಯ ಈ ಪ್ರಮುಖ ಸರ್ಕಲ್ಗೆ ಪೊಲೀಸ್ ಇಲಾಖೆ ಬ್ಯಾರಿಕೇಡ್ ಅಳವಡಿಸಿದೆ.
ಬುಧವಾರ ರಾತ್ರಿಯೇ ಕಲ್ಸಂಕ ವೃತ್ತದಿಂದ ಗುಂಡಿಬೈಲ್ ಮಾರ್ಗಕ್ಕೆ ತೆರಳುವ ಹಾಗೂ ಗುಂಡಿಬೈಲ್ ಮಾರ್ಗದಿಂದ ಉಡುಪಿ ಕೃಷ್ಣ ಮಠ ಮತ್ತು ಉಡುಪಿ ಸಿಟಿ ಬಸ್ ನಿಲ್ದಾಣಕ್ಕೆ ಸಾಗುವ ದ್ವಿಪಥ ರಸ್ತೆಗೆ ಬ್ಯಾರಿಕೇಡ್ ಅಳವಡಿಸಿರುವ ಪೊಲೀಸರು, ಮಧ್ಯ ಭಾಗದಲ್ಲಿ ಬೈಕ್ನವರೂ ನುಸುಳದಂತೆ ಟೇಪ್ ಹಾಕಿದ್ದಾರೆ.
ಕಲ್ಸಂಕದಲ್ಲಿ ವಾಹನ ದಟ್ಟಣೆ ನಿವಾರಿಸಲು ಗುಂಡಿಬೈಲ್ನಿಂದ ಉಡುಪಿ ಸಿಟಿ ಹಾಗೂ ಮಣಿಪಾಲ ಕಡೆ ಸಾಗುವ ಕಲ್ಸಂಕ ಮಾರ್ಗದ ಎಡಭಾಗದಲ್ಲಿ ಪೊಲೀಸ್ ಬ್ಯಾರಿಕೇಡ್ ಹಾಕಲಾಗಿದೆ. ಇದರಿಂದಾಗಿ ಗುಂಡಿಬೈಲು ಮಾರ್ಗವಾಗಿ ಉಡುಪಿಗೆ ಬರುವ ವಾಹನಗಳು ಕಲ್ಸಂಕದಿಂದ ಮೊದಲು ಎಡಭಾಗದಲ್ಲಿ (ಫ್ರೀ ಲೆಫ್ಟ್) ಮಣಿಪಾಲದ ಕಡೆ ಮುಂದೆ ಸಾಗಿ, ಕಡಿಯಾಳಿ ಜಂಕ್ಷನ್ನಲ್ಲಿ ಬಲಕ್ಕೆ ಯು ಟರ್ನ್ ಮಾಡಿ ಉಡುಪಿ ನಗರಕ್ಕೆ ಬರುವಂತಾಗಿದೆ. ಇದರಿಂದಾಗಿ ಕಡಿಯಾಳಿ ಜಂಕ್ಷನ್ ಬಳಿ ಬಸ್, ಲಾರಿಯಂತಹ ದೊಡ್ಡ ವಾಹನಗಳಿಗೆ ಬಲಭಾಗಕ್ಕೆ ಸುಲಭವಾಗಿ ತೆರಳಲಾಗದೆ ಅಲ್ಲಿಯೂ ವಾಹನಗಳು ಬ್ಲಾಕ್ ಆಗುತ್ತಿದೆ. ಒಂದು ಸಮಸ್ಯೆ ನಿವಾರಿಸಲು ಇದೀಗ ಹೊಸ ಎರಡು ಸಮಸ್ಯೆ ಸೃಷ್ಟಿಯಾಗಿದ್ದು, ಸವಾರರೂ ಸಹ ಸುತ್ತುಬಳಸಿ ಸಾಗುವಂತಾಗಿದೆ.
ಜಿಲ್ಲಾ ಕೇಂದ್ರವಾಗಿರುವ ಉಡುಪಿಯೀಗ ಸಂತೆ ಮಾರುಕಟ್ಟೆಯಂತಾಗಿದೆ. ರಸ್ತೆಗಳಲ್ಲಿ ಇರುವೆ ಸಾಲುಗಳ ರೀತಿಯಲ್ಲಿ ವಾಹನಗಳು ಸಂಚರಿಸುತ್ತಿವೆ. ಒಂದೆರಡು ತಿಂಗಳಿಂದ ಪ್ರವಾಸಿಗರು ಹಾಗೂ ಯಾತ್ರಿಕರ ಸಂಖ್ಯೆಯೂ ಅಧಿಕವಾಗಿದೆ. ಶಾಲಾ ಮಕ್ಕಳ ಪ್ರವಾಸದ ಅವಧಿಯಾಗಿದ್ದರಿಂದ ಪ್ರತಿದಿನವೂ ವಿವಿಧ ಜಿಲ್ಲೆಗಳ ಪ್ರವಾಸ ವಾಹನ ಆಗಮಿಸುತ್ತಿವೆ. ಶಬರಿಮಲೆಗೆ ತೆರಳುವ ಭಕ್ತರೂ ಆಗಮಿಸುತ್ತಿದ್ದಾರೆ. ನಗರದಲ್ಲಿ ಸರಿಯಾಗಿ ಪಾರ್ಕಿಂಗ್ ವ್ಯವಸ್ಥೆಯೂ ಇಲ್ಲದ್ದರಿಂದ ರಸ್ತೆಯ ಎಡ-ಬಲಗಳ ಬದಿಯಲ್ಲೇ ಕಾರು ಹಾಗೂ ಬೈಕ್ ನಿಲ್ಲಿಸಲಾಗತ್ತಿದೆ. ಇದರಿಂದಲೂ ವಾಹನ ಸಂಚಾರಕ್ಕೆ ತೊಡಕಾಗುತ್ತಿದೆ.
ಹಾಲಿ-ಮಾಜಿ ಜನಪ್ರತಿನಿಧಿಗಳ ಕಚ್ಚಾಟದಿಂದ ಸಿಗ್ನಲ್ ಲೈಟ್ ವ್ಯವಸ್ಥೆ ಬಂದ್ ಆಗಿದ್ದು, ನಗರದಲ್ಲಿ ಸಂಚರಿಸುವ ಸ್ಥಳೀಯ ಹಾಗೂ ಹೊರ ಜಿಲ್ಲೆಯ ಸವಾರರಿಗೆ ತೊಡಕುಂಟಾಗಿದೆ ಎಂಬ ಆರೋಪ ಸಾರ್ವಜನಿಕ ವಲಯದಿಂದ ಕೇಳಿ ಬರುತ್ತಿದೆ. ವೈಯಕ್ತಿಕ ಹಿತಾಸಕ್ತಿ ಬಿಟ್ಟು, ನಗರದಲ್ಲಿ ಉಂಟಾಗುತ್ತಿರುವ ಸಂಚಾರ ಸಮಸ್ಯೆ ಸರಿಪಡಿಸಲು ಮುಂದಾಗಿ ಎಂದು ಉಡುಪಿಯ ಪ್ರಜ್ಞಾವಂತರು ಆಗ್ರಹಿಸಿದ್ದಾರೆ.
ಪ್ರತಿದಿನವೂ ಉಡುಪಿಯಲ್ಲಿ ವಾಹನ ಸಂಚಾರಕ್ಕೆ ತೊಡಕಾಗಿರುವುದು ರಸ್ತೆ ಅಭಿವೃದ್ಧಿ ಕಾಮಗಾರಿ ಎನ್ನುವುದೇ ವೈಚಿತ್ರ್ಯವಾಗಿದೆ. ಸಂತೆಕಟ್ಟೆಯಲ್ಲಿ ಹೆದ್ದಾರಿ ಅಂಡರ್ಪಾಸ್, ಇಂದ್ರಾಳಿಯಲ್ಲಿ ರೈಲ್ವೆ ಮೇಲ್ಸೇತುವೆ ನಿರ್ಮಾಣ, ಕರಾವಳಿ ಜಂಕ್ಷನ್ನಿಂದ ಮಲ್ಪೆ ರಸ್ತೆ ಅಗಲೀಕರಣ, ಅಂಬಲಪಾಡಿಯಲ್ಲಿ ಡಿ.16ರಿಂದ ಆರಂಭವಾಗಿರುವ ಚತುಷ್ಪಥ ಮೇಲ್ಸೇತುವೆ ಕಾಮಗಾರಿಯಿಂದಾಗಿ ವಾಹನಗಳ ಸುಗಮ-ಸರಳ ಸಂಚಾರಕ್ಕೆ ತೊಡಕುಂಟಾಗುತ್ತಿದೆ. ಏಕಕಾಲದಲ್ಲಿಯೇ ನಾಲ್ಕು ಕಡೆ ರಸ್ತೆ ಅಭಿವೃದ್ಧಿ ಕಾಮಗಾರಿ ಕೈಗೊಂಡಿದ್ದರಿಂದ ಯಾವುದೇ ರಸ್ತೆಗೆ ಹೋದರೂ ವಾಹನ ದಟ್ಟಣೆ ಕಂಡು ಬರುತ್ತಿದೆ. ತುರ್ತು ಸಂದರ್ಭ, ರೋಗಿಗಳನ್ನು ಸಾಗಿಸುವ ಆಂಬುಲೆನ್ಸ್ಗಳಿಗೂ ತೊಂದರೆಯಾಗುತ್ತಿದೆ.
ಉಡುಪಿ ನಗರದ ರಸ್ತೆಗಳು ಚಿಕ್ಕದಿದ್ದು, ಮಿತಿಮೀರಿದ ಸಂಖ್ಯೆಯಲ್ಲಿ ವಾಹನ ಸಂಚರಿಸುತ್ತಿದ್ದು ದಿನವೂ ವಾಹನ ದಟ್ಟಣೆ ಆಗುತ್ತಿದೆ. ಸುಗಮ ಸಂಚಾರ ವ್ಯವಸ್ಥೆ ಕಲ್ಪಿಸುವುದು ಪೊಲೀಸರಿಗೂ ಸವಾಲಾಗಿದೆ. ಕಲ್ಸಂಕದಲ್ಲಿ ಶಾಶ್ವತ ಪರಿಹಾರವಿಲ್ಲ. ಹೀಗಾಗಿ ವಾಹನ ದಟ್ಟಣೆ ಕಡಿಮೆ ಮಾಡಲು ತಾತ್ಕಾಲಿಕವಾಗಿ ಬ್ಯಾರಿಕೇಡ್ ಅಳವಡಿಸಿ ಸಂಚಾರ ವ್ಯವಸ್ಥೆ ಬದಲಿಸಿದ್ದೇವೆ. ಎಲ್ಲೆಡೆ ಸಿಗ್ನಲ್ ಲೈಟ್ ಹಾಳಾಗಿದ್ದು, ಸರಿಪಡಿಸುವಂತೆ ನಗರಸಭೆಗೆ ತಿಳಿಸಿದ್ದೇವೆ. | ಡಾ.ಅರುಣಕುಮಾರ್ ಕೆ. ಜಿಲ್ಲಾ ಪೊಲೀಸ್ ವರಿಷ್ಠ, ಉಡುಪಿ ಉಡುಪಿಯಲ್ಲಿ ಸಂಚಾರ ವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ. ಪರ್ಕಳ, ಮಣಿಪಾಲ, ಎಂಜಿಎಂ, ಅಂಬಾಗಿಲು, ಅಂಬಲಪಾಡಿ, ಕಿನ್ನಿಮುಲ್ಕಿ , ಎಂಜಿಎಂ, ಇಂದ್ರಾಳಿ ಹೀಗೆ ಅನೇಕ ಕಡೆ ಅಳವಡಿಸಿದ್ದ ಸಿಗ್ನಲ್ ಲೈಟ್ ಬಂದ್ ಆಗಿದೆ. ಅದನ್ನು ಯಾರು ನಿಲ್ಲಿಸಿದ್ದು? ಯಾಕೆ ನಿಲ್ಲಿಸಿದ್ದು? ರಸ್ತೆಯಲ್ಲೇ ದೊಡ್ಡ ದೊಡ್ಡ ಪಿಲ್ಲರ್ ಅಳವಡಿಸಿ ಪಿಪಿಪಿ ಮಾಡೆಲ್ ಅಳವಡಿಸಿದ್ದೇಕೆ? ವಾಹನ ದಟ್ಟಣೆ ನಿವಾರಿಸಲು ನಗರಸಭೆ ಕೂಡಲೇ ಎಲ್ಲೆಡೆಯ ಸಿಗ್ನಲ್ ಲೈಟ್ಗಳನ್ನು ಆರಂಭಿಸಬೇಕು. | ರಮೇಶ್ ಕಾಂಚನ್. ನಗರಸಭಾ ಕಾಂಗ್ರೆಸ್ ಸದಸ್ಯ, ಉಡುಪಿ ಉಡುಪಿಯಲ್ಲಿ ಈ ಹಿಂದೆ ಅಳವಡಿಸಿರುವ ಟ್ರಾಫಿಕ್ ಸಿಗ್ನಲ್ಗಳು ಅವೈಜ್ಞಾನಿಕವಾಗಿದೆ. ರಸ್ತೆಯ ಮಧ್ಯದಲ್ಲೇ ಬೃಹತ್ ಪಿಲ್ಲರ್ ಅಳವಡಿಸಿದ್ದರಿಂದ ರಸ್ತೆ ಇನ್ನೂ ಕಿರಿದಾಗಿದೆ. ಹೊಸ ಮಾದರಿಯಲ್ಲಿ ಹಾಗೂ ವೈಜ್ಞಾನಿಕವಾಗಿ ಸಿಗ್ನಲ್ ಲೈಟ್ ಅಳವಡಿಸಲಾಗುವುದು. ಕಲ್ಸಂಕದಲ್ಲಿ ವಾಹನ ದಟ್ಟಣೆ ತಡೆಯಲು ಗುಂಡಿಬೈಲ್ ರಸ್ತೆ ಆರಂಭದ ಎಡಭಾಗದಲ್ಲಿ ಸ್ಟೀಲ್ ಬ್ರಿಜ್ ನಿರ್ಮಿಸಲು ಯೋಜಿಸಲಾಗಿದೆ. ಶ್ರೀಘ್ರವೇ ಹೆದ್ದಾರಿ ಪ್ರಾಧಿಕಾರಕ್ಕೆ ಪ್ರಸ್ತಾವನೆ ಸಲ್ಲಿಸುತ್ತೇನೆ. | ಯಶ್ಪಾಲ್ ಸುವರ್ಣ. ಶಾಸಕ, ಉಡುಪಿ