

ಉಪ್ಪಿನಂಗಡಿ: ನದಿದಡದಲ್ಲಿದ್ದರೂ ನಮಗೆ ಶುದ್ಧ ಕುಡಿಯುವ ನೀರಿಲ್ಲ. ನೀರು ಒದಗಿಸಿದ ಬಳಿಕವೇ ಗ್ರಾಮಸಭೆ ನಡೆಸಿ ಎಂದು ಗ್ರಾಮಸ್ಥರು ಪ್ರತಿಭಟನೆ ನಡೆಸಿದ ಘಟನೆ 34 ನೆಕ್ಕಿಲಾಡಿ ಗ್ರಾಮಸಭೆಯಲ್ಲಿ ನಡೆಯಿತು.
ಗ್ರಾ.ಪಂ. ಅಧ್ಯಕ್ಷೆ ಸುಜಾತ ಆರ್.ರೈ ಅಧ್ಯಕ್ಷತೆಯಲ್ಲಿ ಗ್ರಾಮಸಭೆ ನಡೆಯುತ್ತಿದ್ದ ವೇಳೆ, ಕಲುಷಿತ ನೀರಿರುವ ಬಾಟಲಿಗಳು ಹಾಗೂ ಭಿತ್ತಿಪತ್ರಗಳನ್ನು ಪ್ರದರ್ಶಿಸಿದ ಕೆಲ ಗ್ರಾಮಸ್ಥರು 34 ನೆಕ್ಕಿಲಾಡಿಯ ಎರಡು ಕೊಳವೆ ಬಾವಿಯ ನೀರು ಕುಡಿಯಲು ಯೋಗ್ಯವಲ್ಲ ಎಂದು ಪ್ರಯೋಗಾಲಯದ ವರದಿ ಬಂದಿದೆ. ಈ ನೀರನ್ನು ಕುಡಿದು ಆರೋಗ್ಯ ಹದಗೆಟ್ಟಲ್ಲಿ ಅದಕ್ಕೆ ಗ್ರಾ.ಪಂ. ಹೊಣೆ ಎಂದು ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಲಿಖಿತವಾಗಿ ತಿಳಿಸಿದೆ. ಆದರೂ ನೀವು ಇನ್ನೆಷ್ಟು ದಿನ ಈ ಕಲುಷಿತ ನೀರನ್ನು ನಮಗೆ ಕುಡಿಸುತ್ತೀರಿ? ಎಂದು ಪ್ರಶ್ನಿಸಿದರು.
34 ನೆಕ್ಕಿಲಾಡಿ ಗ್ರಾಮದಲ್ಲಿರುವ ಹಾಲು ಉತ್ಪಾದಕರ ಸಹಕಾರ ಸಂಘಕ್ಕೆ ಕಳೆದ 35 ವರ್ಷದಿಂದಲೂ ಗ್ರಾ.ಪಂ.ನ ವಾಣಿಜ್ಯ ಕಟ್ಟಡದಲ್ಲಿ ಎರಡು ಕೋಣೆಗಳನ್ನು ತಿಂಗಳ ಬಾಡಿಗೆ ಆಧಾರದಲ್ಲಿ ನೀಡಲಾಗುತ್ತಿದ್ದು, ಆ ಪೈಕಿ ಒಂದು ಕೋಣೆಯನ್ನು ಏಲಂ ಮಾಡಲಾಗಿದೆ. ಸಂಘಕ್ಕೆ ಎರಡೂ ಕೋಣೆಗಳ ಅವಶ್ಯಕತೆ ಇದ್ದು, ಎರಡೂ ಕೊಠಡಿಯನ್ನು ಬಾಡಿಗೆ ನೆಲೆಯಲ್ಲಿ ಒದಗಿಸಬೇಕೆಂಬ ಬೇಡಿಕೆ, ಬೇರಿಕೆ ಎಂಬಲ್ಲಿ ವಾಸವಾಗಿರುವ ಕೆಲ ನಿವಾಸಿಗರಿಗೆ ಕುಡಿಯುವ ನೀರಿನ ಸಂಪರ್ಕ ಕಲ್ಪಿಸಲು ಆಗ್ರಹ, ಮನೆ ತೆರಿಗೆ ಮಾನದಂಡದಲ್ಲಿ ತಾರತಮ್ಯ ನಿವಾರಿಸಿ ಎಂಬೆಲ್ಲಾ ಬೇಡಿಕೆಗಳು ವ್ಯಕ್ತವಾದವು.
ಗ್ರಾ.ಪಂ.ಸದಸ್ಯರಾದ ತುಳಸಿ, ರಮೇಶ್ ನಾಯ್ಕ, ಗೀತಾ, ಹರೀಶ್ ಕೆ.ಉಪಸ್ಥಿತರಿದ್ದರು. ಇಲಾಖಾಧಿಕಾರಿಗಳು ಇಲಾಖಾ ಮಾಹಿತಿ ನೀಡಿದರು. ಪಿಡಿಒ ದೇವಪ್ಪ ನಾಯ್ಕ ಸ್ವಾಗತಿಸಿ, ವಂದಿಸಿದರು.
ಲಂಚದ ಆರೋಪ, ಗದ್ದಲ
ಗ್ರಾ.ಪಂ. ಸದಸ್ಯ ಪ್ರಶಾಂತ್ ರಾಜೀನಾಮೆ ಕೊಟ್ಟಿರುವುದಕ್ಕೆ ಕಾರಣ ನೀಡುವಂತೆ ಕೆಲವರು ಅಧ್ಯಕ್ಷೆ ಅವರನ್ನು ಒತ್ತಾಯಿಸಿದ ಘಟನೆ ನಡೆಯಿತು. ಜಮೀನೊಂದನ್ನು ಲೇಔಟ್ ಮಾಡುವ ವಿಚಾರಕ್ಕೆ ಸಂಬಂಧಿಸಿ ಲಂಚದ ಬೇಡಿಕೆ ಸಲ್ಲಿಸಲ್ಪಟ್ಟಿತ್ತು ಎಂಬ ವಿಚಾರದ ಆರೋಪ ವ್ಯಕ್ತವಾಗಿ ವಾಗ್ವಾದ ನಡೆದ ಘಟನೆಯೂ ಗ್ರಾಮಸಭೆಯಲ್ಲಿ ನಡೆಯಿತು.
ಸದಸ್ಯರಿಗೆ ಮಾತ್ರ ಟ್ಯಾಂಕ್ ವಿತರಣೆ
ಶೇ.25ರ ನಿಧಿ ಹಾಗೂ ಶೇ.5ರ ನಿಧಿಯಲ್ಲಿ ನೆಕ್ಕಿಲಾಡಿ ಗ್ರಾ.ಪಂ.ನಲ್ಲಿ ಟ್ಯಾಂಕ್ ವಿತರಿಸಲಾಗಿದ್ದು, ಇಲ್ಲಿ ಅರ್ಹರಿಗೆ, ಮೊದಲು ಅರ್ಜಿ ಕೊಟ್ಟವರಿಗೆ ಟ್ಯಾಂಕ್ ವಿತರಣೆಯಾಗಿಲ್ಲ. ಗ್ರಾ.ಪಂ.ನ ಕೆಲ ಸದಸ್ಯರ ಕುಟುಂಬದವರೇ ಇದನ್ನು ಮೊದಲ ಆಧ್ಯತೆಯಲ್ಲಿ ಪಡೆದುಕೊಂಡಿದ್ದಾರೆ ಎಂದು ಗ್ರಾಮಸ್ಥರು ಆರೋಪಿಸಿದರು.