

ಆಡಿಸ್ ಅಬಾಬ: ದಕ್ಷಿಣ ಆಫ್ರಿಕಾದ ಉತ್ತರದ ಇಥಿಯೋಪಿಯಾದಲ್ಲಿ ಭಾರಿ ಮಳೆಯಿಂದಾಗಿ ಭೂಕುಸಿತ ಸಂಭವಿಸಿದ್ದು, ದುರಂತದಲ್ಲಿ ಸತ್ತವರ ಸಂಖ್ಯೆ 257 ಕ್ಕೆ ತಲುಪಿದೆ ಎಂದು ವಿಶ್ವಸಂಸ್ಥೆಯ ಮಾನವೀಯ ವ್ಯವಹಾರಗಳ ಇಲಾಖೆ ಬಹಿರಂಗಪಡಿಸಿದೆ.
ದೇಶದ ಹಲವು ಭಾಗಗಳಲ್ಲಿ ಎಡೆಬಿಡದೆ ಮಳೆ ಸುರಿಯುತ್ತಿದ್ದು, ಕಿನ್ ಚೋ ಶಾಚಾ ಗೊಜ್ಡ್ ಪ್ರದೇಶದಲ್ಲಿ ಮೊದಲು ಭೂಕುಸಿತ ಸಂಭವಿಸಿದೆ. ಜನರನ್ನು ರಕ್ಷಿಸಲು ತೆರಳಿದ್ದ ಪರಿಹಾರ ತಂಡಗಳ ಜತೆಗೆ ಅಲ್ಲಿ ನೆರೆದಿದ್ದ ಜನರೂ ಅವಶೇಷಗಳಡಿ ಸಿಲುಕಿದ್ದು ರಕ್ಷಣಾ ಸಿಬ್ಬಂದಿ ಇಲ್ಲಿ ತನಕ 257 ಶವಗಳನ್ನು ಹೊರತೆಗೆದಿದೆ.
ಭೂಕುಸಿತದಲ್ಲಿ ಸಿಲುಕಿ ಪ್ರಾಣ ಕಳೆದುಕೊಂಡವರ ಮೃತದೇಹಗಳನ್ನು ಪತ್ತೆ ಹಚ್ಚಲು ರಕ್ಷಣಾ ತಂಡಗಳು ಶ್ರಮಿಸುತ್ತಿವೆ. ಮೃತರಲ್ಲಿ ಮಕ್ಕಳು ಮತ್ತು ಗರ್ಭಿಣಿಯರು ಸಹ ಇದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಸಾವಿನ ಸಂಖ್ಯೆ 500 ಕ್ಕೆ ಏರಬಹುದು ಎಂದು ಯುಎನ್ ಮಾನವೀಯ ವ್ಯವಹಾರಗಳ ಇಲಾಖೆ ಸ್ಥಳೀಯ ಅಧಿಕಾರಿಗಳನ್ನು ಉಲ್ಲೇಖಿಸಿ ತಿಳಿಸಿದೆ. ಆ ಪ್ರದೇಶದಿಂದ 15 ಸಾವಿರಕ್ಕೂ ಹೆಚ್ಚು ಸಂತ್ರಸ್ತರನ್ನು ಸ್ಥಳಾಂತರಿಸಬೇಕಾಗಿದೆ.
ಇಥಿಯೋಪಿಯಾ ಪ್ರಧಾನಿ ಅಬಿ ಅಹ್ಮದ್ ಶುಕ್ರವಾರ ಘಟನೆಯ ಸ್ಥಳಕ್ಕೆ ಭೇಟಿ ನೀಡುವ ಸಾಧ್ಯತೆಯಿದೆ. ಈ ಘಟನೆಯ ಬಗ್ಗೆ ದುಃಖ ವ್ಯಕ್ತಪಡಿಸಿದ ಅವರು, ಕಳೆದ ಕೆಲವು ದಿನಗಳಿಂದ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ಭೂಕುಸಿತ ಸಂಭವಿಸಿದೆ ಎಂದು ಹೇಳಿದ್ದಾರೆ.