

ಬದಿಯಡ್ಕ: ಏತಡ್ಕ ಶ್ರೀಸದಾಶಿವ ದೇವಸ್ಥಾನದ ಪುನಃ ಪ್ರತಿಷ್ಠಾಪನಾ ಅಷ್ಟಬಂಧ ಬ್ರಹ್ಮಕಲಶೋತ್ಸವಕ್ಕೆ ಮಂಗಳವಾರ ಚಾಲನೆ ನೀಡಲಾಗಿದೆ.
ಈ ಹಿನ್ನೆಲೆಯಲ್ಲಿ ಪುಣ್ಯ ನದಿಗಳ ಜಲ, ಯಾಗ ಭೂಮಿ, ಪುಣ್ಯ ಸ್ಥಳಗಳ ಮೃತ್ತಿಕೆ, ಶುದ್ಧ ಭಸ್ಮ, ಶಿವಪಂಚಾಕ್ಷರೀ ಜಪಲಿಪಿ ಯಜ್ಞ ಪುಸ್ತಕ, ಹಸುವಿನ ಕೊಂಬು ಎತ್ತಿದ ಮಣ್ಣು, ಸಮುದ್ರ ನೀರು ಮಣ್ಣಿನ ಮಡಿಕೆಯಲ್ಲಿ ತುಂಬಿಕೊಂಡ ಮಾತೆಯರ ಸಾಲು ‘ಫಲಾರ್ಪಣಂ’ ಮೆರವಣಿಗೆಯಲ್ಲಿ ಗಮನಸೆಳೆಯಿತು. ಏತಡ್ಕ ಸದಾಶಿವ ದೇವಸ್ಥಾನ ಬ್ರಹ್ಮಕಲಶೋತ್ಸವದ ಮೊದಲ ದಿನ ಏತಡ್ಕ ಪೇಟೆಯಿಂದ ಶ್ರೀಕ್ಷೇತ್ರಕ್ಕೆ ಆಕರ್ಷಕ ‘ಫಲಾರ್ಪಣಂ’ ಹಸಿರುವಾಣಿ ಮೆರವಣಿಗೆ ನಡೆಯಿತು. ಮುತ್ತುಕೊಡೆ, ಚೆಂಡೆ, ವಾದ್ಯ ಮೇಳಗಳೊಂದಿಗೆ ಭಕ್ತರು ಹೆಜ್ಜೆ ಹಾಕಿದರು. ಶ್ರೀಕ್ಷೇತ್ರದಲ್ಲಿ ಉಗ್ರಾಣ ತುಂಬಿಸಲಾಯಿತು.