ಸುಗುಣೇಂದ್ರ ತೀರ್ಥ ಶ್ರೀಪಾದರ ಆಶೀರ್ವಚನ
ಅಹಲ್ಯಾಬಾಯಿ ಹೋಳ್ಕರ್ ಜನ್ಮತ್ರಿಶತಾಬ್ದಿ ಹಿನ್ನೆಲೆ
ಚಿತ್ರಕಲೆ, ಛದ್ಮವೇಷ ಪ್ರಬಂಧ ಸ್ಪರ್ಧೆ ಉದ್ಘಾಟನೆ
ವಿಜಯವಾಣಿ ಸುದ್ದಿಜಾಲ ಉಡುಪಿ
ನಮ್ಮ ಸನಾತನ ಧರ್ಮ, ರಾಷ್ಟ್ರದ ಸಾಧಕರ ಕುರಿತು ಇಂದಿನ ಮಕ್ಕಳಿಗೆ ಪ್ರೇರಣಾತ್ಮಕವಾಗಿ ಸಮರ್ಪಕ ಮಾಹಿತಿ ಒದಗಿಸುವ ಅನಿವಾರ್ಯತೆ ಇದೆ. ಈ ನಿಟ್ಟಿನಲ್ಲಿ ರಾಜಮಾತೆ ಅಹಲ್ಯಾಬಾಯಿ ಹೋಳ್ಕರ್ ಕುರಿತು ಇತಿಹಾಸ ತಿಳಿಸುವ ಕಾರ್ಯ ಹಮ್ಮಿಕೊಂಡಿರುವುದು ಶ್ಲಾನೀಯ. ಇಂತಹ ಸ್ಪರ್ಧೆಗಳ ಮೂಲಕ ಮಕ್ಕಳಿಗೆ ಸ್ಫೂರ್ತಿ ಲಭಿಸಿ, ಸಾಧಿಸುವ ಛಲ ಮೂಡುವಂತಾಗಲಿ ಎಂದು ಪರ್ಯಾಯ ಪುತ್ತಿಗೆ ಸುಗುಣೇಂದ್ರ ತೀರ್ಥ ಶ್ರೀಪಾದರು ನುಡಿದರು.
ಉಡುಪಿಯ ರಾಜಾಂಗಣದಲ್ಲಿ ಪರ್ಯಾಯ ಪುತ್ತಿಗೆ ಶ್ರೀಕೃಷ್ಣ ಮಠ, ರಾಜಮಾತೆ ಅಹಲ್ಯಾಬಾಯಿ ಹೋಳ್ಕರ್ ಜನ್ಮತ್ರಿಶತಾಬ್ದಿ ಆಚರಣಾ ಸಮಿತಿ ಮತ್ತು ಪದ್ಮಶಾಲಿ ನೇಕಾರ ಪ್ರತಿಷ್ಠಾನ (ರಿ.) ಉಡುಪಿ ಸಹಭಾಗಿತ್ವದಲ್ಲಿ ಭಾನುವಾರ ಆಯೋಜಿಸಿದ್ದ ನಾನು ಮಹಾರಾಣಿ ಅಹಲ್ಯಾಬಾಯಿ ಹೋಳ್ಕರ್ ವೇಷಭೂಷಣ ಸ್ಪರ್ಧೆ, ಪ್ರಬಂಧ ಹಾಗೂ ಚಿತ್ರ ಬಿಡಿಸುವ ಸ್ಪರ್ಧೆ ಉದ್ಘಾಟಿಸಿ ಮಾತನಾಡಿದರು.
ಪುಣ್ಯದ, ಭಾವನಾತ್ಮಕ ಸಂದರ್ಭ
ಹಿಂದು ಮುಖಂಡ ಹಾಗೂ ವಕೀಲ ಬೈಕಾಡಿ ಸುಪ್ರಸಾದ ಶೆಟ್ಟಿ ಮಾತನಾಡಿ, ಸ್ವಾಮಿ ವಿವೇಕಾನಂದರ ಜಯಂತಿ ಸಂದರ್ಭದಲ್ಲಿ ರಾಜಮಾತೆಯ ಇತಿಹಾಸ ತಿಳಿದುಕೊಳ್ಳುವುದು ಪುಣ್ಯದ ಹಾಗೂ ಭಾವನಾತ್ಮಕ ಸಂದರ್ಭವಾಗಿದೆ. ತಾಯಿ ಪ್ರಧಾನವಾದ ಭಾರತದಲ್ಲಿ ಓರ್ವ ತಾಯಿ ಹೇಗೆ ಮಹತ್ವದ ಪಾತ್ರ ನಿಭಾಯಿಸುತ್ತಾಳೆ ಎನ್ನುವುದಕ್ಕೆ ನಮಗೆಲ್ಲ ಅಹಲ್ಯಾಬಾಯಿ ನಿದರ್ಶನರಾಗುತ್ತಾರೆ. 18ನೇ ಶತಮಾನದಲ್ಲಿಯೇ ದೂರದರ್ಶಿತ್ವದ ಆಡಳಿತ ನಡೆಸಿದ ರಾಣಿ ಅವರಾಗಿದ್ದರು ಎಂದು ಇತಿಹಾಸಕಾರರೇ ಬಣ್ಣಿಸಿದ್ದಾರೆ. ವಿವೇಕಾನಂದರು ಯುವಕರಿಗೆ ಮಾದರಿಯಾದರೆ, ಅಹಲ್ಯಾಬಾಯಿ ಅವರು ಯುವತಿಯರು ಅಥವಾ ಮಹಿಳೆಯರಿಗೆಲ್ಲ ಮಾದರಿಯಾಗಿದ್ದಾರೆ ಎಂದರು.
ಉಜ್ವಲ ಡೆವೆಲಪರ್ಸ್ನ ಮಾಲೀಕ ಅಜೇಯ್ ಪಿ. ಶೆಟ್ಟಿ ಉಪಸ್ಥಿತರಿದ್ದರು. ಪದ್ಮಶಾಲಿ ನೇಕಾರ ಪ್ರತಿಷ್ಠಾನ (ರಿ.) ಉಡುಪಿ ಅಧ್ಯಕ್ಷ ರತ್ನಾಕರ್ ಶೆಟ್ಟಿಗಾರ್ ಇಂದ್ರಾಳಿ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಪರ್ಯಾಯ ಪುತ್ತಿಗೆ ಮಠದ ಸಾಂಸ್ಕೃತಿಕ ಕಾರ್ಯಕ್ರಮಗಳ ಸಂಚಾಲಕ ರಮೇಶ್ ಭಟ್ ಕಾರ್ಯಕ್ರಮ ನಿರೂಪಿಸಿದರು.
ವಿಧವೆಯರಿಗೆ ಮರುವಿವಾಹ ಮಾಡಿಸಿದ ದಿಟ್ಟೆ
ವಿಶೇಷ ಉಪನ್ಯಾಸ ನೀಡಿದ ಪುತ್ತೂರಿನ ಶ್ರೀವಿವೇಕಾನಂದ ಕಾಲೇಜಿನ ಪ್ರಾಂಶುಪಾಲೆ ಡಾ.ಶೋಭಾ ಸತೀಶ್ ಮಾತನಾಡಿ, ಸೂರ್ಯನಂತೆ ಪ್ರಖರ, ಚಂದ್ರನಂತೆ ಶಾಂತಿ, ಗಂಗೆಯಂತೆ ಪರಿಶುದ್ಧಳಾಗಿದ್ದ ಅಹಲ್ಯಾಬಾಯಿ ಅವರ ಆಡಳಿತ ದೇಶಕ್ಕೇ ಮಾದರಿ. ಆಡು ಮುಟ್ಟದ ಸೊಪ್ಪಿಲ್ಲ ಎನ್ನುವಂತೆ ಆ ತಾಯಿ ಮುಟ್ಟದ ಕ್ಷೇತ್ರವಿಲ್ಲ. ಕೃಷಿ ಮತ್ತು ಸೈನ್ಯಕ್ಕೆ ಹೆಚ್ಚಿನ ಮಹತ್ವ ನೀಡಿದ್ದಲ್ಲದೆ, ಅಮೆರಿಕದಿಂದ ತಜ್ಞರನು ಕರೆಸಿ ಸೈನಿಕರಿಗೆ ತರಬೇತಿ ಕೊಡಿಸಿದ ಖ್ಯಾತಿ ಅವರದು. ಅಂದಿನ ಪದ್ಧತಿ, ಹಲವು ತೊಡಕುಗಳ ನಡುವೆಯೇ ಸ್ತ್ರೀ ಶಿಕ್ಷಣ, ಮಹಿಳಾ ಸಬಲೀಕರಣ ಮಾಡಿದ ಹೆಗ್ಗಳಿಕೆಯೂ ಅವರದು. ತನ್ನ ವಿಧವಾ ಗೆಳತಿಯೋರ್ವಳಿಗೆ ಮರುವಿವಾಹ ಮಾಡಿಸುವ ಮೂಲಕ ಅದೆಷ್ಟೋ ವಿಧವೆಯರ ಬಾಳಿಗೆ ಆಸರೆಯಾದ ಮಹಾತಾಯಿ ಎಂದು ತಿಳಿಸಿದರು.
ಪತಿ ನಿಧನದ ನಂತರ ಅಹಲ್ಯಾಬಾಯಿಯವರು ಅಂದಿನ ಪದ್ಧತಿಯಂತೆ ಸತಿ ಸಹಗಮನಕ್ಕೆ ಮುಂದಾದರು. ಆದರೆ, ಅವರ ಮಾವ ತಡೆಹಿಡಿದಿದ್ದರಿಂದ ಅಹಲ್ಯಾ ಅವರಿಂದ ಅನೇಕ ಸಮಾಜಮುಖಿ ಕಾರ್ಯ ನಡೆದವು. 28 ವರ್ಷ ಆಡಳಿತ ನಡೆಸಿದ್ದ ಅವರು, ಕಾಶಿ ದೇಗುಲದ ಒಂದು ಪಾರ್ಶ್ವದಲ್ಲಿ ಮಂದಿರವನ್ನೂ ನಿರ್ಮಿಸಿದ್ದಲ್ಲದೆ, ಹಲವಾರು ದೇಗುಲಗಳನ್ನು ಜೀರ್ಣೋದ್ಧಾರ ಮಾಡಿದ್ದಾರೆ. ಮಹಿಳಾ ಸಬಲೀಕರಣದಲ್ಲಿ ಅವರ ಕೊಡುಗೆ ಬಲು ದೊಡ್ಡದು. ದೇಶದ ಎಲ್ಲ ತಾಯಂದಿರಿಗೆ ಅಹಲ್ಯಾಬಾಯಿ ಹೋಳ್ಕರ್ ಮಾದರಿಯಾಗಿದ್ದಾರೆ.
| ಅಜೇಯ್ ಪಿ. ಶೆಟ್ಟಿ. ಉಜ್ವಲ ಡೆವೆಲಪರ್ಸ್ನ ಮಾಲೀಕ.