ಉಡುಪಿ: ಚುನಾವಣಾ ಆಯೋಗದ ಸೂಚನೆಯಂತೆ ಆ.1ರಿಂದ ಮತದಾರರ ಗುರುತಿನ ಚೀಟಿಗೆ ಆಧಾರ್ ಕಾರ್ಡ್ ಜೋಡಣೆ ಅಭಿಯಾನ ಪ್ರಾರಂಭಿಸಲಾಗುವುದು. ಆಧಾರ್ ಸಂಖ್ಯೆ ಒದಗಿಸುವುದು ಐಚ್ಚಿಕವಾಗಿದ್ದು, ಕಡ್ಡಾಯವಲ್ಲ ಎಂದು ಜಿಲ್ಲಾಧಿಕಾರಿ ಕೂರ್ಮಾ ರಾವ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಆಧಾರ್ ಸಂಖ್ಯೆ ನೀಡದ ಮತದಾರರ ಗುರುತಿನ ಚೀಟಿ ರದ್ದಾಗುವುದಿಲ್ಲ. ಮತದಾರರ ಪಟ್ಟಿಯಿಂದ ಅವರ ಹೆಸರನ್ನು ಕೈಬಿಡುವುದಿಲ್ಲ. ಆಧಾರ್ ಸಂಖ್ಯೆಯನ್ನು ಆನ್‌ಲೈನ್ ಮೂಲಕವೂ ನೋಂದಣಿ ಮಾಡಿಕೊಳ್ಳಬಹುದು. ಮತದಾರರ ಪಟ್ಟಿಯನ್ನು ವ್ಯವಸ್ಥಿತಗೊಳಿಸುವ ನಿಟ್ಟಿನಲ್ಲಿ ಹೊಸ ನಿಯಮ ಜಾರಿಗೊಳಿಸಲಾಗಿದೆ. ಈ ಹಿಂದೆ ವರ್ಷಕ್ಕೆ ಒಂದು ಬಾರಿ ಮಾತ್ರ ಮತದಾರರು ನೋಂದಣಿ ಮಾಡಿಕೊಳ್ಳಬಹುದಿತ್ತು. ಆದರೆ ಈಗ ಜ.1, ಏ.1, ಜು.1 ಹಾಗೂ ಅ.1 ರಂದು 4 ಬಾರಿ ಹೊಸ ಮತದಾರರ ನೋಂದಣಿಗೆ ಅವಕಾಶ ನೀಡಲಾಗಿದೆ. ಅರ್ಹ ವ್ಯಕ್ತಿಗಳು ಮುಂಗಡವಾಗಿಯೂ ಅರ್ಜಿ ಸಲ್ಲಿಸಬಹುದು. ಈ ಬಾರಿ ಜಿಲ್ಲೆಯಲ್ಲಿ ಒಟ್ಟು 12 ಸಾವಿರ ಹೊಸ ಮತದಾರರು ನೋಂದಣಿ ಮಾಡಿಕೊಂಡಿದ್ದಾರೆ ಎಂದು ತಿಳಿಸಿದರು.
166.29 ಕೋಟಿ ರೂ. ಮಳೆ ಹಾನಿ: ಜಿಲ್ಲೆಯಲ್ಲಿ ಈ ಬಾರಿ ಸುರಿದ ಮಳೆಗೆ ರಸ್ತೆ, ಸೇತುವೆ, ಕಟ್ಟಡ ಸೇರಿದಂತೆ ಒಟ್ಟು 166.29 ಕೋಟಿ ರೂ. ನಷ್ಟ ಸಂಭವಿಸಿದೆ. ಪಂಚಾಯತ್ ಇಂಜಿನಿಯರ್ ವಿಭಾಗದಲ್ಲಿ 108.94 ಕೋಟಿ ರೂ., ಶಿಕ್ಷಣ ಇಲಾಖೆಗೆ 7.42 ಕೋಟಿ ರೂ., ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಗೆ 1.20 ಕೋಟಿ ರೂ., ಲೋಕೋಪಯೋಗಿ, ಬಂದರು ಮತ್ತು ಒಳನಾಡು ಜಲ ಸಾರಿಗೆ ಇಲಾಖೆಗೆ 36 ಕೋಟಿ ರೂ., ಸ್ಥಳೀಯ ನಗರಾಡಳಿತ ಸಂಸ್ಥೆಗಳಿಗೆ 10 ಕೋಟಿ ರೂ., ಮೆಸ್ಕಾಂ ಇಲಾಖೆಗೆ 4.79 ಕೋಟಿ ರೂ. ನಷ್ಟವಾಗಿದೆ ಎಂದು ಮಾಹಿತಿ ನೀಡಿದರು.
85 ಇಲಿ ಜ್ವರ ಪ್ರಕರಣ: ಜಿಲ್ಲೆಯಲ್ಲಿ ಈವರೆಗೆ 85 ಇಲಿಜ್ವರ ಪ್ರಕರಣ ಕಂಡುಬಂದಿದೆ. ಉಡುಪಿಯಲ್ಲಿ 28, ಕುಂದಾಪುರದಲ್ಲಿ 44, ಕಾರ್ಕಳದಲ್ಲಿ 13 ಕೇಸ್ ದಾಖಲಾಗಿದೆ. ಮಳೆಗಾಲದಲ್ಲಿ ಜ್ವರ ಹೆಚ್ಚಾಗುತ್ತಿದ್ದು, ಎಲ್ಲಾ ಆರೋಗ್ಯ ಕೇಂದ್ರಗಳಲ್ಲಿ ಔಷಧ ದಾಸ್ತಾನು ಸಾಕಷ್ಟು ಇದೆ. ಹೀಗಾಗಿ ಸಾರ್ವಜನಿಕರು ಯಾವುದೇ ಜ್ವರ ಕಾಣಿಸಿಕೊಂಡರೂ ಕೂಡಲೇ ವೈದ್ಯರ ಬಳಿ ತೆರಳಿ ಪರೀಕ್ಷೆ ಮಾಡಿಸಿಕೊಳ್ಳಬೇಕು ಎಂದು ತಿಳಿಸಿದರು.
ಮಂಕಿಫಾಕ್ಸ್ ಹರಡದಂತೆ ಜಿಲ್ಲಾಡಳಿತ ಎಲ್ಲಾ ಅಗತ್ಯ ಮುಂಜಾಗ್ರತಾ ಕ್ರಮ ಕೈಗೊಂಡಿದ್ದು, ಪ್ರತಿ ದಿನ ವಿದೇಶದಿಂದ ಜಿಲ್ಲೆಗೆ ಆಗಮಿಸಿದವರ ವಿವರಗಳನ್ನು ವಿಮಾನ ನಿಲ್ದಾಣ ಪ್ರಾಧಿಕಾರದಿಂದ ಪಡೆಯುತ್ತಿದೆ. ಎಲ್ಲರಿಗೂ 21 ದಿನ ಐಸೋಲೇಶನ್ ಕಡ್ಡಾಯವಾಗಿದ್ದು, ಯಾವುದೇ ಲಕ್ಷಣ ಕಂಡುಬಂದರೆ ಆರೋಗ್ಯ ಇಲಾಖೆಗೆ ಮಾಹಿತಿ ನೀಡಬೇಕು ಎಂದು ವಿನಂತಿಸಿದರು. ಅಪರ ಜಿಲ್ಲಾಧಿಕಾರಿ ವೀಣಾ ಉಪಸ್ಥಿತರಿದ್ದರು