

ಮಂಗಳೂರು: ಪರಿಸರ ಸಂರಕ್ಷಣೆ ಮತ್ತು ಸ್ವಚ್ಛತೆ ನಮ್ಮ ಅತ್ಯಂತ ಮುಖ್ಯ ಜವಾಬ್ದಾರಿಗಳಲ್ಲೊಂದು. ನೈಸರ್ಗಿಕ ಪರಿಸರವನ್ನು ನಾವು ರಕ್ಷಿಸದೇ ಹೋದರೆ ಭೂಮಿತಾಯಿಗೆ ದ್ರೋಹವೆಸಗಿದಂತಾಗುತ್ತದೆ. ಶಿಕ್ಷಣದಲ್ಲಿ ಪರಿಸರ ಸಂರಕ್ಷಣೆಯ ಬಗ್ಗೆ ಆದ್ಯತೆಯ ಮೇರೆಗೆ ವಿದ್ಯಾರ್ಥಿಗಳು ಕಲಿಯಬೇಕಾಗಿದೆ ಎಂದು ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಪಿ ಶ್ರೀಧರ್ ಹೇಳಿದರು.
ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಶಕ್ತಿ ರೆಸಿಡೆನ್ಸಿಯಲ್ ಶಾಲೆಯಲ್ಲಿ ನಡೆದ ಪರಿಸರ ದಿನಾಚರಣೆಯನ್ನು ಉದ್ಘಾಟಿಸಿ ಮಾತನಾಡಿದರು.
ಜಗತ್ತಿನ ತಾಪಮಾನವು ಅಧಿಕವಾಗುತ್ತಿರುವ ಸಂದರ್ಭದಲ್ಲಿ ನಾವು ಜಾಗೃತರಾಗುವ ಅವಶ್ಯಕತೆಯಿದೆ. ನಾವು ನಮ್ಮ ಮನೆಯಲ್ಲಿ ಗಿಡಗಳನ್ನು ನೆಟ್ಟು ಪಾಲನೆ ಪೋಷಣೆ ಮಾಡಬೇಕು. ನಾವೆಲ್ಲರೂ ನಮ್ಮ ಹುಟ್ಟು ಹಬ್ಬದ ದಿನ ಕೇಕ್ ಕಟ್ ಮಾಡುವುದರ ಜೊತೆಗೆ ಗಿಡ ನೆಟ್ಟಾಗ ಪರಿಸರದಲ್ಲಿ ಬದಲಾವಣೆ ಮಾಡಲು ಸಾಧ್ಯ ಎಂದರು.
ಶಕ್ತಿ ವಿದ್ಯಾಸಂಸ್ಥೆಯ ಮುಖ್ಯ ಸಲಹೆಗಾರ ರಮೇಶ್ ಕೆ. ಮಾತನಾಡಿ, ಇಂದಿನ ಜಗತ್ತಿನ ಅತಿವೇಗದ ಬೆಳವಣಿಗೆಯಲ್ಲಿ, ನಾವು ಸಂವೇದನಾಶೀಲತೆಯನ್ನು ಕಳೆದುಕೊಳ್ಳುತ್ತಿದ್ದು, ನೈಸರ್ಗಿಕ ಪರಿಸರಕ್ಕೆ ಅಭಿವೃದ್ಧಿಯೇ ಮಾರಕವೆನಿಸುವ ಮಟ್ಟಕ್ಕೆ ಜಾಗತಿಕವಾಗಿ ಮಾಲಿನ್ಯಸಮಸ್ಯೆ ಎದುರಾಗಿದೆ. ಪರಿಸರ ರಕ್ಷಿಸಿ ಬೆಳೆಸುವ ಉದ್ದೇಶದ ಅಂಗವಾಗಿ ಪ್ರತಿಯೊಬ್ಬ ವಿದ್ಯಾರ್ಥಿಯು ಗಿಡವನ್ನು ನೆಡುವುದು ಅಗತ್ಯ ಎಂದರು.
ಪ್ರಾಂಶುಪಾಲರಾದ ಬಬಿತ ಸೂರಜ್ ಸ್ವಾಗತಿಸಿದರು, ಶಾಲಾ ಶಿಕ್ಷಕಿ ಮಧುರ ವಂದಿಸಿದರು. ಆನೆಟ್ ಕಾರ್ಯಕ್ರಮ ನಿರೂಪಿಸಿದರು.
ವಿಶ್ವ ಪರಿಸರ ದಿನಾಚರಣೆಗೆ ಸಂಬಂಧಿಸಿದಂತೆ ವಿದ್ಯಾರ್ಥಿಗಳಿಂದ ಅನೇಕ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಲಾಯಿತು. ಎಂಟನೇ ಮತ್ತು 9ನೇ ತರಗತಿಯ ವಿದ್ಯಾರ್ಥಿಗಳು ಜಾಥಾ ಹೋಗುವುದರ ಮೂಲಕ ಘೋಷಣೆ ಕೂಗುತ್ತಾ ಜನರಿಗೆ ಪರಿಸರ ಸಂರಕ್ಷಣೆಯ ಅರಿವನ್ನು ಮೂಡಿಸಿದರು. ವಿದ್ಯಾರ್ಥಿಗಳು ಪರಿಸರ ಮತ್ತು ನೀರಿನ ಸಂರಕ್ಷಣೆಯ ಮಹತ್ವದ ಅರಿವು ಮೂಡಿಸುವ ಸಲುವಾಗಿ ಶಕ್ತಿ ನಗರದ ಜಂಕ್ಷನ್ನಲ್ಲಿ ಬೀದಿ ನಾಟಕವನ್ನು ಪ್ರದರ್ಶಿಸಿದರು. ಒಂದರಿಂದ ಏಳನೇ ತರಗತಿಯ ವಿದ್ಯಾರ್ಥಿಗಳಿಗೆ ವಿಶ್ವ ಪರಿಸರ ದಿನಾಚರಣೆಯ ಕುರಿತು ತರಗತಿಯಲ್ಲಿ ಚಟುವಟಿಕೆಗಳನ್ನು ನೀಡಲಾಯಿತು.
-------------------
ಹಲವಾರು ಪ್ರಭೇದಗಳ ಪ್ರಾಣಿಪಕ್ಷಿ ಮತ್ತು ಸಸ್ಯ ಸಂಪತ್ತು ವಿನಾಶದ ಅಂಚಿನಲ್ಲಿವೆ. ನೈಸರ್ಗಿಕ ಸಮತೋಲನ ಕಾಪಾಡದೇ ಇದ್ದಲ್ಲಿ, ಮುಂದೊಂದು ದಿನ ಭೂಮಿ ಅತಿದೊಡ್ಡ ನೈಸರ್ಗಿಕ ದುರಂತವನ್ನೆದುರಿಸಬೇಕಾಗುತ್ತದೆ. ಸಮಾಜದ ಬೇಕು-ಬೇಡಗಳನ್ನು ತಿಳಿದಿರುವ ಸಮಾಜದ ಶ್ರೇಷ್ಠಜೀವಿಗಳೆನಿಕೊಂಡ ಮನುಷ್ಯನಿಗೆ ಪ್ರಕೃತಿಯನ್ನು ಉಳಿಸುವ ಮಹತ್ತರ ಜವಾಬ್ದಾರಿ ಇದ್ದು, ನಮ್ಮ ಪೂರ್ವಜರು ಉಳಿಸಿಕೊಟ್ಟ ಪ್ರಕೃತಿಯನ್ನು ಮುಂದಿನ ಪೀಳಿಗೆಗೆ ಹಸ್ತಾಂತರಿಸುವ ಜವಾಬ್ದಾರಿ ನಮ್ಮ ಮೇಲಿದೆ.
ರಮೇಶ್ ಕೆ., ಶಕ್ತಿ ವಿದ್ಯಾಸಂಸ್ಥೆಯ ಮುಖ್ಯ ಸಲಹೆಗಾರ