ಈ ನಟಿ ಅಂಡರ್‌ವರ್ಲ್ಡ್​ ಡಾನ್‌ ಗೆಳತಿ, ಹಲವು ವರ್ಷಗಳ ಕಾಲ ಜೈಲಿನಲ್ಲಿದ್ದವರು ಈಗ ಎಲ್ಲಿ, ಹೇಗಿದ್ದಾರೆ?

monica
Published on

ಮುಂಬೈ: ಇಂದು (ಜನವರಿ 18) ಮೋನಿಕಾ ಬೇಡಿ ಜನ್ಮದಿನ. ಪಂಜಾಬ್‌ನ ಹೋಶಿಯಾರ್‌ಪುರದಲ್ಲಿ ಜನಿಸಿದ ಮೋನಿಕಾ ಭೂಗತ ಪಾತಕಿ ಅಬು ಸಲೇಂ ಜತೆಗೆ ಸಂಬಂಧ ಹೊಂದಿದ್ದಕ್ಕೆ ಸಾಕಷ್ಟು ಚರ್ಚೆಗೆ ಗ್ರಾಸವಾಗಿದ್ದರು. ಇದೇ ಕಾರಣಕ್ಕೆ ಜೈಲಿಗೆ ಕೂಡ ಹೋಗಬೇಕಾಯಿತು. ಈ ವಿಶೇಷ ಸಂದರ್ಭದಲ್ಲಿ ಮೋನಿಕಾ ಜೀವನಕ್ಕೆ ಸಂಬಂಧಿಸಿದ ಕೆಲವು ಮಾಹಿತಿ ತಿಳಿಯೋಣ ಬನ್ನಿ...

ತೆಲುಗು ಚಿತ್ರ 'ತಾಜ್ ಮಹಲ್' ಮೂಲಕ ತಮ್ಮ ವೃತ್ತಿಜೀವನ ಪ್ರಾರಂಭಿಸಿದ ಮೋನಿಕಾಗೆ ಸುದೀರ್ಘವಾಗಿ ಸಿನಿ ಕ್ಷೇತ್ರದಲ್ಲಿರಲು ಸಾಧ್ಯವಾಗಲಿಲ್ಲ. ವೃತ್ತಿಜೀವನದ ಗ್ರಾಫ್ ವಿಶೇಷವಾಗಿ ಏನೂ ಇರಲಿಲ್ಲ. ಆಕೆಯ ಮತ್ತು ಅಬು ಸಲೇಂ ನಡುವಿನ ಪ್ರೇಮಕಥೆಗಳು ಬಾಲಿವುಡ್‌ನ ಕಾರಿಡಾರ್‌ಗಳಲ್ಲಿ ಬಹಳ ಪ್ರಸಿದ್ಧವಾಗಿದ್ದ ಸಮಯವಿತ್ತು. ಈ ಕಾರಣದಿಂದಾಗಿ ನಟಿಯ ವೃತ್ತಿಜೀವನವು ಮುಳುಗಲು ಪ್ರಾರಂಭಿಸಿತು.

2014 ರಲ್ಲಿ ಫಿಲ್ಮ್‌ಫೇರ್‌ಗೆ ನೀಡಿದ ಸಂದರ್ಶನದಲ್ಲಿ ಮೋನಿಕಾ ಅಂಡರ್‌ವರ್ಲ್ಡ್ ಡಾನ್ ಬಗ್ಗೆ ಅನೇಕ ಶಾಕಿಂಗ್​​​​​ ಸಂಗತಿ ಬಹಿರಂಗಪಡಿಸಿದ್ದರು. "ಫೋನ್ ಮೂಲಕ ನಮ್ಮ ಮಾತುಕತೆ ಶುರುವಾಗಿತ್ತು. ಅವರು ದುಬೈನ ದೊಡ್ಡ ಉದ್ಯಮಿ ಎಂದು ನನಗೆ ಹೇಳಿದರು. ಕ್ರಮೇಣ ನಾವು ಪ್ರತಿದಿನ ಮಾತನಾಡಲು ಪ್ರಾರಂಭಿಸಿದೆವು. ನಾನು ಅವರ ಧ್ವನಿಗೆ ಪ್ರೀತಿಯಲ್ಲಿ ಬಿದ್ದೆ.

ಸುಮಾರು 9 ತಿಂಗಳ ಕಾಲ ಫೋನ್‌ನಲ್ಲಿ ಮಾತನಾಡಿದ ನಂತರ, ನಾವು ಭೇಟಿಯಾಗುವ ಯೋಜನೆ ಹಾಕಿದೆವು. ಆದರೆ ಅವರು ಮುಂಬೈಗೆ ಬರಲು ಸಿದ್ಧರಿರಲಿಲ್ಲ, ಹಾಗಾಗಿ ಅವರನ್ನು ಭೇಟಿ ಮಾಡಲು ದುಬೈಗೆ ಹೋಗಿದ್ದೆ. ಅಲ್ಲಿಗೆ ತಲುಪಿದ ನಂತರ ಆತನ ನಿಜವಾದ ಹೆಸರು ಅಬು ಸಲೇಂ ಎಂದು ತಿಳಿಯಿತು. ಆದರೆ ಆಗ ಆತ ಡಾನ್ ಅಂತ ಗೊತ್ತಿರಲಿಲ್ಲ" ಎಂದರು.

ನಟಿ ಹೇಳುವಂತೆ "ಅಬು ಸಲೇಂ 1993 ರ ಮುಂಬೈ ಬಾಂಬ್ ಸ್ಫೋಟದಲ್ಲಿ ತಪ್ಪಿತಸ್ಥ ಎಂದು ಸಾಬೀತಾದ ನಂತರ ದುಬೈನಿಂದ ಯುಎಸ್‌ಗೆ ಬಂದಿದ್ದರು. ನನ್ನನ್ನೂ ಅಲ್ಲಿಗೆ ಕರೆದರು. ಆದರೆ ಅಲ್ಲಿಗೆ ಹೋದ ನಂತರ, ನಾನು ಈಗ ಸಿಕ್ಕಿಬಿದ್ದಿದ್ದೇನೆ ಎಂದನಿಸಿತು. ಇಲ್ಲಿಂದ ಹೊರಬರುವುದು ಅಸಾಧ್ಯವೆಂದು ನಾನು ಅರಿತುಕೊಂಡೆ" ಎಂದು ತಿಳಿಸಿದ್ದಾರೆ. 2005 ರಲ್ಲಿ, ಅಬು ಮತ್ತು ಮೋನಿಕಾ ಅವರನ್ನು ಪೋರ್ಚುಗಲ್‌ನಲ್ಲಿ ನಕಲಿ ಪಾಸ್‌ಪೋರ್ಟ್‌ಗಳೊಂದಿಗೆ ಬಂಧಿಸಲಾಯಿತು ಅಬು ಸಲೇಂ ಜೊತೆಗೆ ಮೋನಿಕಾ ಕೂಡ ಜೈಲಿಗೆ ಹೋಗಬೇಕಾಯಿತು. ಜೈಲಿನಿಂದ ಹೊರಬಂದ ನಂತರ, ಮುಂಬೈನಲ್ಲಿ ಯಾರೂ ಮನೆ ನೀಡಲು ಸಿದ್ಧರಿಲ್ಲದ ಕಾರಣ ಮೋನಿಕಾ ಪಂಜಾಬ್‌ನ ತನ್ನ ಹಳ್ಳಿಗೆ ಹೋದಳು.

ಮೋನಿಕಾ ಬೇಡಿ ಈಗ ಎಲ್ಲಿದ್ದಾರೆ? 
ಮೋನಿಕಾ ಬೇಡಿ ಅವರು ಪ್ರಸ್ತುತ ಯಾವುದೇ ಪ್ರಾಜೆಕ್ಟ್​​​ ಹೊಂದಿಲ್ಲ. ಸಣ್ಣಪುಟ್ಟ ಜಾಹೀರಾತುಗಳನ್ನು ಮಾಡಿ ಜೀವನ ಸಾಗಿಸುತ್ತಿದ್ದಾರೆ. ಇನ್​​​ಸ್ಟಾಗ್ರಾಂನಲ್ಲಿ ತುಂಬಾ ಸಕ್ರಿಯರಾಗಿದ್ದಾರೆ. ಅವರು ಪ್ರತಿದಿನ ತಮ್ಮ ಅಭಿಮಾನಿಗಳೊಂದಿಗೆ ಕಥೆಗಳನ್ನು ಹಂಚಿಕೊಳ್ಳುತ್ತಾರೆ. 

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net