ಗಣತಿ ಮುಖ್ಯ ಕಾಲಂನಲ್ಲಿ ವೀರಶೈವ ಲಿಂಗಾಯತ ಎಂದು ನಮೂದಿಸಿ

SWAMIJI
Published on

ಮುಂಡರಗಿ: ಜನಗಣತಿಯ ಮುಖ್ಯ ಕಾಲಂನಲ್ಲಿ ವೀರಶೈವ ಲಿಂಗಾಯತ ಎಂದು ನಮೂದಿಸಿ ಉಪ ಕಾಲಂನಲ್ಲಿ ನಿಮ್ಮ ಉಪ ಜಾತಿಯನ್ನು ನಮೂದಿಸಬೇಕು ಎಂದು ನಾಡೋಜ ಡಾ.ಅನ್ನದಾನೀಶ್ವರ ಶಿವಯೋಗಿಗಳವರು ತಿಳಿಸಿದ್ದಾರೆ.

ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಶ್ರೀಗಳು, ‘ಒಂದು ಕೋಟಿಗೂ ಹೆಚ್ಚಾಗಿದ್ದ ವೀರಶೈವ-ಲಿಂಗಾಯತ ಸಮಾಜ ಈಗ ಕೇವಲ 70 ರಿಂದ 80 ಲಕ್ಷವಾಗಿರುವುದು ವಿಷಾದಕರ ಸಂಗತಿ. ಸಮಾಜದಲ್ಲಿ ಕೆಲವೇ ಕೆಲವು ಪರಿವಾರಗಳು ಸ್ಥಿತಿವಂತರಾಗಿದ್ದರೂ ಅವರು ಸಾಧಾರಣ ವ್ಯಕ್ತಿಗಳಾಗಿದ್ದಾರೆ. ಉನ್ನತ ಹುದ್ದೆಯಲ್ಲಿದ್ದವರು ನಿವೃತ್ತಿ ಹೊಂದಿದ್ದಾರೆ. ಪ್ರಗತಿಯಂತೂ ಕನಸಿನ ಮಾತಾಗಿದೆ. ವಿಚಾರವಂತರೂ ವಿಭಿನ್ನ ಮತದವರಾಗಿ ಸಮಾಜಕ್ಕೆ ಹೆಚ್ಚು-ಹೆಚ್ಚು ಆಪತ್ತು ಬಂದಿದೆ. ಬಡವರ ಸಂಖ್ಯೆ ಅಧಿಕವಾಗಿದೆ. ಆತ್ಮಗೌರವದಿಂದಾಗಿ ಯಾರೂ ಮಾತನಾಡುತ್ತಿಲ್ಲ. ಹೀಗಾಗಿ ವೀರಶೈವ-ಲಿಂಗಾಯತ ಬಾಂಧವರು ಎಚ್ಚರಿಕೆಯಿಂದ ಇದ್ದು ಗುರಿಮುಟ್ಟುವತನಕ ಹೋರಾಡುವುದು ಅವಶ್ಯವಿದೆ’ ಎಂದರು.

ನೂರಿಪ್ಪತ್ತು ವರ್ಷಗಳ ಹಿಂದೆ ಪೂಜ್ಯ ಹಾನಗಲ್ಲ ಶ್ರೀ ಕುಮಾರ ಶಿವಯೋಗಿಗಳವರ ಮುಂದಾಳತ್ವದಲ್ಲಿ ಸಮಾಜದ ಪ್ರಮುಖರ ಪ್ರಯತ್ನದಿಂದ ಪ್ರಸ್ತುತ ಧರ್ಮಕ್ಕೆ ಗೌರವ ಆದರಗಳು ಬಂದವು. ನಮ್ಮ ಸಮಾಜ ತಾನು ಬೆಳೆಯುವುದರೊಂದಿಗೆ ಎಲ್ಲರಿಗೂ ಮಠಮಾನ್ಯಗಳು ಅವಕಾಶ ನೀಡಿದ ಫಲವಾಗಿ ಹಲವರು ವಿದ್ಯಾವಂತರಾದರು. ಬುದ್ಧಿವಂತರಾದರು, ಉದ್ಯೋಗಶೀಲರಾದರು. ಕೃಷಿ ಪ್ರಧಾನವಾಗಿದ್ದ ನಾವು ಅಲ್ಪ ಹಿಡುವಳಿದಾರರಾಗಿ ಅತ್ಯಲ್ಪ ಕೃಷಿಯನ್ನು ಮಾಡುವವರಾಗಿದ್ದೇವೆ. ಸ್ವಯಂ ಉದ್ಯೋಗ ಮಾತ್ರ ತಕ್ಕಮಟ್ಟಿಗೆ ಸ್ಥಿತವಂತನಾಗಿರಬಹುದು. ಬಹುಜನ ವೀರಶೈವರ ಸ್ಥಿತಿ ಚೆನ್ನಾಗಿಲ್ಲ. ರಾಜ್ಯಮಟ್ಟದಲ್ಲಿ ವೀರಶೈವ ಲಿಂಗಾಯತರು ಸ್ಥಾನಮಾನಗಳಿಂದ ವಂಚಿತರಾಗಿದ್ದಾರೆ.

ಬುದ್ಧಿವಂತರೆನ್ನುವವರಲ್ಲೂ ಏಕತೆ ಇಲ್ಲ. ವಿತಂಡವಾದಿಗಳಾಗುತ್ತಿದ್ದಾರೆ. ನೈಜವಾದ ಸಾಧನೆ ಸಿದ್ದಾಂತಗಳನ್ನು ತಿಳಿದವರು ಮೌನವಾಗಿದ್ದಾರೆ ಎಂದರು.

ವೀರಶೈವವು ವಿಭಿನ್ನ ಕ್ರಿಯೆಗಳಿಗೆ ಅನುಸರಿಸಿ ಅನೇಕ ನಾಮಗಳನ್ನು ಅನುಸರಿಸುತ್ತಿದೆ. ವೀರಶೈವನು ಗುರುಗಳಿಂದ ಲಿಂಗವನ್ನು ಆಯತ ಮಾಡಿಕೊಳ್ಳುವುದರಿಂದ ಲಿಂಗಾಯತನೆಂದೂ, ಲಿಂಗವನ್ನು ಸದಾ ಧರಿಸುವುದರಿಂದ ಲಿಂಗವಂತನೆಂದೂ, ಶಿವದೀಕ್ಷೆಯಾದಾಗ ಮಹಾಮಂತ್ರವನ್ನು ಅಂಗಾಂಗಗಳಲ್ಲಿ ಸಂಬಂಧಿಸುವುದರಿಂದ ಮಂತ್ರಶರೀರ, ಅಪ್ರಾಕೃತಶರೀರ, ವಿಶಿಷ್ಟವ್ರತಧಾರಿಯಾಗಿದ್ದರಿಂದ ಶಿರೋವ್ರತ, ಶಾಂಭವ ವ್ರತ, ಪ್ರಸಾದಕಾಯನು, ಪ್ರಕಾಶಕಾಯನು, ವರ್ಣಾಶ್ರಮ ಮೀರಿ ನಡೆಯುವ ಕಾರಣ ಅತಿವರ್ಣಾಶ್ರಮ ಶರೀರದ ಎಲ್ಲ ಅಂಗಗಳಲ್ಲಿ ಲಿಂಗಧರಿಸುವುದರಿಂದ ಸರ್ವಂಗಲಿಂಗಿ ಆಗುವನು. ಹೀಗೆ ಹಲವಾರು ಪ್ರಕ್ರಿಯೆಗಳಿಂದ ಅನ್ವರ್ಥಕ ಹನ್ನೊಂದು ಹೆಸರುಗಳನ್ನು ಹೊಂದುವನು. ಅದರಲ್ಲಿ ವೀರಶೈವ ಪದ ತತ್ವವಾಚಿಯಾಗಿದೆ. ಸಾಮಾನ್ಯವಾಗಿ ಜನಪದವಾಣಿಯಲ್ಲಿ ಲಿಂಗಾಯತ ಪದ ಬಳಕೆಯಾಗಿದೆ. ಅಂಗೈಯಲ್ಲಿ ಲಿಂಗಧರಿಸಿ, ಲಿಂಗದಲ್ಲಿ ದೃಷ್ಟಿಮನವನ್ನಿರಿಸಿ ಶಿವಯೋಗವನ್ನು ಸಾಧಿಸುವ ಕ್ರಿಯೆಯೇ ವೀರಶೈವ ಪದ ಸೂಚಿಸುವುದು ಗ್ರಂಥಸ್ಥವಾಗಿ ತಿಳಿದುಬಂದಿದೆ ಎಂದರು.

ಭಾರ ಜಾತ್ಯತೀತವಾದ ಸಂವಿಧಾನವನ್ನು ಹೊಂದಿದೆ ಎಂದು ಭಾಷಣ ಮಾಡುವವರೇ ಜಾತಿಭೂತಗಳಿಗೆ ಅಂಟಿಕೊಂಡಿದ್ದಾರೆ. ಹಿಂದುಳಿದವರಿಗೆ 10 ವರ್ಷ ಅವಕಾಶ ಕಲ್ಪಿಸಿದ್ದು, ಈಗ ಒಂಭತ್ತು ದಶಕಗಳು ದಾಟುತ್ತಿದ್ದರೂ ಜಾತಿ-ಒಳಜಾತಿ ಮೀಸಲಕ್ಕಾಗಿ ಪ್ರಯತ್ನ ಮಾಡುತ್ತಿರುವುದು ರಾಜಕೀಯ ದುರುದ್ದೇಶವೇ ಅಲ್ಲವೇ?. ಜಾತಿಗಳನ್ನು ಬದಿಗಿರಿಸಿ, ಆರ್ಥಿಕವಾಗಿ ಹಿಂದುಳಿದ ಎಲ್ಲ ಸಮಾಜದ ವ್ಯಕ್ತಿಗಳನ್ನು ಗಣನೆಮಾಡಿದರೆ ಎಲ್ಲರಿಗೂ ಸಮಾನ ಅವಕಾಶ ಸಾಧ್ಯವಾಗುವುದು. ಹಿಂದುಳಿದ ಪಟ್ಟವೇರಿದವರೇ ಮತ್ತೆ-ಮತ್ತೆ ಮುಂದಾಗುತ್ತಿರುವುದು ಸಂವಿಧಾನಕ್ಕೆ ಅಪಚಾರವೇ ಹೊರತು ಅದು ಭೂಷಣವಲ್ಲ. ಆರ್ಥಿಕವಾಗಿ ಹಿಂದುಳಿದವರನ್ನು ಗುರುತಿಸಿ ಅವರೆಲ್ಲರಿಗೂ ಎಲ್ಲ ಸೌಲಭ್ಯಗಳು ಲಭಿಸಲಿ ಎಂದು ಶ್ರೀಗಳು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net