

ಗಾಲೆ: ನಿರೀಕ್ಷೆಯಂತೆಯೇ ಇಂಗ್ಲೆಂಡ್ ತಂಡ ಮೊದಲ ಟೆಸ್ಟ್ ಪಂದ್ಯದ ಅಂತಿಮ ದಿನದಾಟದಲ್ಲಿ ಆತಿಥೇಯ ಶ್ರೀಲಂಕಾ ವಿರುದ್ಧ 7 ವಿಕೆಟ್ಗಳಿಂದ ಸುಲಭ ಗೆಲುವು ದಾಖಲಿಸಿದೆ. ಈ ಮೂಲಕ 2 ಪಂದ್ಯಗಳ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ. ಸರಣಿಯ ಅಂತಿಮ ಟೆಸ್ಟ್ ಜನವರಿ 22ರಿಂದ ಗಾಲೆ ಮೈದಾನದಲ್ಲೇ ನಡೆಯಲಿದೆ.
ಗೆಲುವಿಗೆ 74 ರನ್ ಸವಾಲು ಪಡೆದಿದ್ದ ಇಂಗ್ಲೆಂಡ್, 4ನೇ ದಿನದಂತ್ಯದಲ್ಲಿ 3 ವಿಕೆಟ್ಗಳನ್ನು ಬೇಗನೆ ಕಳೆದುಕೊಂಡಿತ್ತು. ಆದರೆ ಸೋಮವಾರ ಯಾವುದೇ ಸಂಕಷ್ಟ ಎದುರಿಸದೆ 24.2 ಓವರ್ಗಳಲ್ಲಿ 3 ವಿಕೆಟ್ಗೆ 76 ರನ್ ಗಳಿಸಿ ಗೆಲುವು ಒಲಿಸಿಕೊಂಡಿತು.
ಕ್ರಮವಾಗಿ 11 ಮತ್ತು 7 ರನ್ನಿಂದ ಬ್ಯಾಟಿಂಗ್ ಮುಂದುವರಿಸಿದ ಜಾನಿ ಬೇರ್ಸ್ಟೋ (35*) ಮತ್ತು ಡ್ಯಾನ್ ಲಾರೆನ್ಸ್ (21*) ಮುರಿಯದ 4ನೇ ವಿಕೆಟ್ಗೆ 62 ರನ್ ಪೇರಿಸಿ ತಂಡವನ್ನು ಗೆಲುವಿನ ದಡ ಸೇರಿಸಿದರು. ದಿನದಾಟದ 9.2 ಓವರ್ಗಳಲ್ಲೇ ಆಂಗ್ಲರು ಗೆಲುವು ಒಲಿಸಿಕೊಂಡರು. ಇದು ಲಂಕಾ ನೆಲದಲ್ಲಿ ಆಂಗ್ಲರಿಗೆ ಸತತ 4ನೇ ಟೆಸ್ಟ್ ಗೆಲುವಾಗಿದೆ.
ಲಂಕಾ ನೆಲದಲ್ಲಿ ದ್ವಿಶತಕ ಸಿಡಿಸಿದ ಮೊದಲ ಇಂಗ್ಲೆಂಡ್ ಬ್ಯಾಟ್ಸ್ಮನ್ ಎನಿಸಿದ ನಾಯಕ ಜೋ ರೂಟ್ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು. ಗೆಲುವಿನಿಂದ ಇಂಗ್ಲೆಂಡ್ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್ಷಿಪ್ನಲ್ಲಿ 60 ಅಂಕಗಳನ್ನೂ ಸಂಪಾದಿಸಿತು.
ಶ್ರೀಲಂಕಾ: 135 ಮತ್ತು 359, ಇಂಗ್ಲೆಂಡ್: 421 ಮತ್ತು 24.2 ಓವರ್ಗಳಲ್ಲಿ 3 ವಿಕೆಟ್ಗೆ 76 (ಜಾನಿ ಬೇರ್ಸ್ಟೋ 35*, ಡ್ಯಾನ್ ಲಾರೆನ್ಸ್ 21*, ಎಂಬುಲ್ಡೆನಿಯಾ 29ಕ್ಕೆ 2). ಪಂದ್ಯಶ್ರೇಷ್ಠ: ಜೋ ರೂಟ್.