

ಮ್ಯಾಂಚೆಸ್ಟರ್: ಇಂಗ್ಲೆಂಡ್ ವೇಗಿಗಳ ಮಾರಕ ದಾಳಿ ನಡುವೆಯೂ ಆರಂಭಿಕ ಬ್ಯಾಟ್ಸ್ಮನ್ ಶಾನ್ ಮಸೂದ್ (151ರನ್, 314 ಎಸೆತ, 17 ಬೌಂಡರಿ, 2 ಸಿಕ್ಸರ್) ಶತಕದಾಟದ ನೆರವಿನಿಂದ ಪಾಕಿಸ್ತಾನ ತಂಡ ಮೊದಲ ಟೆಸ್ಟ್ ಪಂದ್ಯದಲ್ಲಿ ಉತ್ತಮ ಮೊತ್ತದತ್ತ ಸಾಗಿದೆ. ಓಲ್ಡ್ ಟ್ರಾಫೋರ್ಡ್ ಮೈದಾನದಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ 2 ವಿಕೆಟ್ಗೆ 139 ರನ್ಗಳಿಂದ ದಿನದಾಟ ಆರಂಭಿಸಿದ ಪಾಕಿಸ್ತಾನ ತಂಡ, ಗುರುವಾರದ ಚಹಾ ವಿರಾಮದ ವೇಳೆಗೆ 106 ಓವರ್ಗಳಲ್ಲಿ 8 ವಿಕೆಟ್ಗೆ 312 ರನ್ ಪೇರಿಸಿದೆ.
46 ರನ್ಗಳಿಂದ ಶಾನ್ ಮಸೂದ್ ಹಾಗೂ 69 ರನ್ಗಳಿಂದ ದಿನದಾಟ ಆರಂಭಿಸಿದ ಬಾಬರ್ ಅಜಮ್ ಜೋಡಿಗೆ ದಿನದ ಮೊದಲ ಓವರ್ನಲ್ಲೇ ಇಂಗ್ಲೆಂಡ್ ವೇಗಿ ಜೇಮ್ಸ್ ಆಂಡರ್ಸನ್ ಆಘಾತ ನೀಡಿದರು. ಮೊದಲ ದಿನದಾಟದಲ್ಲಿ ಅರ್ಧಶತಕ ಗಳಿಸಿದ್ದ ಭರವಸೆಯ ಬಾಬರ್ ಅಜಮ್ ಯಾವುದೇ ಮೊತ್ತ ಪೇರಿಸದೆ ನಿರ್ಗಮಿಸಿದರು, ಇದಾದ ಬಳಿಕ ಅಸಾದ್ ಶಫೀಕ್ (7) ಹಾಗೂ ಮೊಹಮದ್ ರಿಜ್ವಾನ್ (9) ಕ್ರಮವಾಗಿ ಸ್ಟುವರ್ಟ್ ಬ್ರಾಡ್ ಹಾಗೂ ಕ್ರಿಸ್ ವೋಕ್ಸ್ಗೆ ವಿಕೆಟ್ ಒಪ್ಪಿಸಿದರು. ಒಂದೆಡೆ, ವಿಕೆಟ್ ಬೀಳುತ್ತಿದ್ದರೂ ಮತ್ತೊಂದು ತುದಿಯಲ್ಲಿ ಬ್ಯಾಟಿಂಗ್ ಕಾಯ್ದುಕೊಂಡ ಶಾನ್ ಮಸೂದ್, ಶಾಬಾದ್ ಖಾನ್ (45ರ್, 76 ಎಸೆತ, 3 ಬೌಂಡರಿ) ಜತೆಗೂಡಿ 6ನೇ ವಿಕೆಟ್ಗೆ 105 ರನ್ ಜತೆಯಾಟವಾಡಿದರು. ಅಲ್ಪಮೊತ್ತಕ್ಕೆ ಕುಸಿಯುವ ಭೀತಿಯಲ್ಲಿದ್ದ ಪಾಕಿಸ್ತಾನ ತಂಡಕ್ಕೆ ಈ ಜೋಡಿ ಆಸರೆಯಾಯಿತು. ಈ ಜೋಡಿಯನ್ನು ಬೇರ್ಪಡಿಸುವಲ್ಲಿ ಡೊಮಿನಿಕ್ ಬೆಸ್ ಯಶಸ್ವಿಯಾದರು. ಶಾದಾಬ್ ನಿರ್ಗಮನದ ಬೆನ್ನಲ್ಲೇ ಯಾಸೀರ್ ಷಾ (5), ಮೊಹಮದ್ ಅಬ್ಬಾಸ್ (0) ಬಂದಷ್ಟೇ ವೇಗವಾಗಿ ಪೆವಿಲಿಯನ್ ವಾಪಸಾದರು.
ಪಾಕಿಸ್ತಾನ: ಎರಡನೇ ದಿನದಾಟದ ಚಹಾ ವಿರಾಮದ ವೇಳೆಗೆ 106 ಓವರ್ಗಳಲ್ಲಿ 8 ವಿಕೆಟ್ಗೆ 312 (ಶಾನ್ ಮಸೂದ್ 151, ಬಾಬರ್ ಅಜಮ್ 69, ಶಾದಾಬ್ ಖಾನ್ 45, ಆಂಡರ್ಸನ್ 63ಕ್ಕೆ 1, ಬ್ರಾಡ್ 51ಕ್ಕೆ 1, ಕ್ರಿಸ್ ವೋಕ್ಸ್ 43ಕ್ಕೆ 2, ಆರ್ಚರ್ 43ಕ್ಕೆ 3).