ಹೆಚ್ಚುವರಿ ಎರಡು ಗಂಟೆ ವಿದ್ಯುತ್: ಪ್ರಸ್ತಾವನೆ ಸಲ್ಲಿಸಲು ಸಚಿವ ಕೆ.ಜೆ.ಜಾರ್ಜ್ ಸೂಚನೆ

Energy Department progress review meeting Mandya
Published on

ಮಂಡ್ಯ: ಜಿಲ್ಲೆಯಲ್ಲಿ ಕೃಷಿ ಪಂಪ್‌ಸೆಟ್‌ಗೆ ಸಂಬಂಧಿಸಿದಂತೆ ಹೆಚ್ಚುವರಿ ಎರಡು ಗಂಟೆ ತ್ರಿ ಪೇಸ್ ವಿದ್ಯುತ್ ಪೂರೈಕೆ ಮಾಡುವ ಸಂಬಂಧ ಪ್ರಸ್ತಾವನೆ ಸಲ್ಲಿಸುವಂತೆ ಇಂಧನ ಸಚಿವ ಕೆ.ಜೆ.ಜಾರ್ಜ್ ಸೂಚನೆ ನೀಡಿದರು.

ನಗರದ ಜಿಲ್ಲಾ ಪಂಚಾಯಿತಿ ಕಚೇರಿಯ ಕಾವೇರಿ ಸಭಾಂಗಣದಲ್ಲಿ ಇಲಾಖೆಯ ಪ್ರಗತಿ ಪರಿಶೀಲನಾ ಸಭೆಯಲ್ಲಿ ಹೆಚ್ಚುವರಿ ವಿದ್ಯುತ್‌ಗೆ ಸಂಬಂಧಿಸಿದಂತೆ ಶ್ರೀರಂಗಪಟ್ಟಣ ಶಾಸಕರೂ ಆದ ಚೆಸ್ಕಾಂ ಅಧ್ಯಕ್ಷ ರಮೇಶ ಬಂಡಿಸಿದ್ದೇಗೌಡ ಪ್ರಸ್ತಾಪಿಸಿದರು. ಈ ಬಾರಿ ನೀರಿನ ಅಭಾವವಿಲ್ಲ. ಕಟ್ಟು ಪದ್ಧತಿಯಲ್ಲಿ ಕೆಆರ್‌ಎಸ್ ಡ್ಯಾಂನಿಂದ ನಾಲೆಗೆ ನೀರು ಹರಿಸಲಾಗುವುದು. ಇದಕ್ಕೆ ಪೂರಕವಾಗಿ ಹೆಚ್ಚುವರಿಯಾಗಿ ಎರಡು ಗಂಟೆ ವಿದ್ಯುತ್ ಪೂರೈಕೆ ಮಾಡಿದರೆ ರೈತರಿಗೆ ಅನುಕೂಲವಾಗಲಿದೆ. ಇದರ ಬಗ್ಗೆ ಪರಿಶೀಲಿಸುವಂತೆ ಮನವಿ ಮಾಡಿದರು. ಇದಕ್ಕೆ ಸ್ಪಂದಿಸಿದ ಸಚಿವರು, ಜಿಲ್ಲೆಯಲ್ಲಿ 1,15,794 ಕೃಷಿ ಪಂಪ್‌ಸೆಟ್‌ಗಳಿವೆ. ಪ್ರಸ್ತುತ 7 ಗಂಟೆ ವಿದ್ಯುತ್ ನೀಡುತ್ತಿದ್ದು, ಬೇಸಿಗೆ ಬೆಳೆಗೆ ಅನುಕೂಲವಾಗುವಂತೆ ಹೆಚ್ಚುವರಿಯಾಗಿ 2 ಗಂಟೆ ವಿದ್ಯುತ್ ನೀಡಬೇಕು ಎಂದು ರೈತರಿಂದ ಬೇಡಿಕೆ ಬಂದಿದೆ. ಈ ಬಗ್ಗೆ ಪ್ರಸ್ತಾವ ಸಲ್ಲಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದೇನೆ. ಎಐ(ಕೃತಕ ಬುದ್ಧಿಮತ್ತೆ) ತಂತ್ರಜ್ಞಾನ ಮತ್ತು ಸ್ಯಾಟಲೈಟ್‌ನಿಂದ ಈಗಾಗಲೇ ರಾಜ್ಯದ ವಿವಿಧ ಭಾಗಗಳ ವಿದ್ಯುತ್ ಬೇಡಿಕೆ ಮತ್ತು ಪೂರೈಕೆ ಬಗ್ಗೆ ಮಾಹಿತಿ ಪಡೆದಿದ್ದೇವೆ ಎಂದು ಹೇಳಿದರು.

ಅಕ್ರಮ ಸಕ್ರಮ ಯೋಜನೆಯಡಿ ರಾಜ್ಯದಲ್ಲಿರುವ 4.5 ಲಕ್ಷ ಅರ್ಜಿ ಪೈಕಿ 2.5 ಲಕ್ಷ ಕೃಷಿ ಪಂಪ್‌ಸೆಟ್‌ಗಳಿಗೆ ವಿದ್ಯುತ್ ಸಂಪರ್ಕ ಮತ್ತು ಮೂಲಸೌಕರ್ಯ ಕಲ್ಪಿಸಿದ್ದು, ಬಾಕಿ 2 ಲಕ್ಷ ಪಂಪ್‌ಸೆಟ್‌ಗಳಿಗೆ ಒಂದು ವರ್ಷದೊಳಗೆ ಹಾಗೂ ಜಿಲ್ಲೆಯಲ್ಲಿ ಮೂರು ತಿಂಗಳೊಳಗೆ ಮೂಲಸೌಕರ್ಯ ಕಲ್ಪಿಸಬೇಕು. ಅಕ್ರಮ ಸಕ್ರಮ ಯೋಜನೆಗೆ ನಮ್ಮ ಸರ್ಕಾರ ಒಂದು ಸಾವಿರ ಕೋಟಿ ರೂ ಮೀಸಲಿಟ್ಟಿತ್ತು. ಮತ್ತೆ ಹೊಸದಾಗಿ ಅರ್ಜಿ ಸಲ್ಲಿಕೆಯಾಗುತ್ತಿದ್ದು, ಈ ಬಗ್ಗೆ ಸಚಿವ ಸಂಪುಟದಲ್ಲಿ ಚರ್ಚಿಸಿ, ತೀರ್ಮಾನ ತೆಗೆದುಕೊಳ್ಳುತ್ತೇವೆ ಎಂದರು.

ಗ್ರಿಡ್‌ನಿಂದ 500 ಮೀಟರ್ ಒಳಗೆ ಇರುವ ಕೃಷಿ ಪಂಪ್‌ಸೆಟ್‌ಗಳಿಗೆ ಉಚಿತವಾಗಿ ವಿದ್ಯುತ್ ಸಂಪರ್ಕ ಕಲ್ಪಿಸುತ್ತೇವೆ. 500 ಮೀಟರ್‌ಗಿಂತ ದೂರವಿರುವ ಪಂಪ್‌ಸೆಟ್‌ಗಳಿಗೆ ಸೋಲಾರ್ ಸಂಪರ್ಕ ಕಲ್ಪಿಸುತ್ತೇವೆ. ಇದಕ್ಕೆ ರಾಜ್ಯ ಸರ್ಕಾರ ಶೇ.50ರಷ್ಟು ಮತ್ತು ಕೇಂದ್ರ ಸರ್ಕಾರ ಶೇ.30ರಷ್ಟು ಸಹಾಯಧನ ನೀಡುತ್ತದೆ. ಶೇ 20ರಷ್ಟು ಹಣವನ್ನು ರೈತರು ಭರಿಸಬೇಕು ಎಂದು ಹೇಳಿದರು.

ಸಭೆಯಲ್ಲಿ ವಿಧಾನ ಪರಿಷತ್ ಸದಸ್ಯರಾದ ದಿನೇಶ್ ಗೂಳಿಗೌಡ, ವಿವೇಕಾನಂದ, ಕೆಪಿಟಿಸಿಎಲ್ ವ್ಯವಸ್ಥಾಪಕ ನಿರ್ದೇಶಕ ಪಂಕಜ್‌ಕುಮಾರ್ ಪಾಂಡೆ, ಜಿಲ್ಲಾಧಿಕಾರಿ ಡಾ.ಕುಮಾರ, ಜಿಪಂ ಸಿಇಒ ಶೇಖ್ ತನ್ವೀರ್ ಆಸಿಫ್, ಚೆಸ್ಕಾಂ ವ್ಯವಸ್ಥಾಪಕ ನಿರ್ದೇಶಕಿ ಜಿ.ಶೀಲಾ, ನಿರ್ದೇಶಕ(ತಾಂತ್ರಿಕ) ಕೆ.ಎಂ.ಮುನಿಗೋಪಾಲ್ ರಾಜು ಇತರರಿದ್ದರು.

ಅಗತ್ಯ ತಕ್ಕಂತೆ ಖರೀದಿ

ಇಂಧನ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ಗೌರವ್‌ಗುಪ್ತ ಮಾತನಾಡಿ, ಕಳೆದ ಬಾರಿ ಹೊರ ರಾಜ್ಯಗಳಲ್ಲಿ ವಿದ್ಯುತ್ ಲಭ್ಯವಿರಲಿಲ್ಲ. ಪ್ರತಿ ಯುನಿಟ್‌ಗೆ 10 ರೂ ದರದಲ್ಲಿ ವಿದ್ಯುತ್ ಖರೀದಿಸಿದ್ದೆವು. ಈ ಬಾರಿ ಉತ್ತಮ ಮಳೆಯಾಗಿದ್ದು, ಜಲಾಶಯಗಳಲ್ಲೂ ನೀರು ಸಂಗ್ರಹವಾಗಿದೆ. ಬೇಸಿಗೆಯಲ್ಲಿ (ಮಾರ್ಚ್ ಮತ್ತು ಏಪ್ರಿಲ್) ಒಂದು ಸಾವಿರ ಮೆಗಾವ್ಯಾಟ್ ವಿದ್ಯುತ್‌ಗೆ ಹೆಚ್ಚುವರಿ ಬೇಡಿಕೆಯಿದೆ. ಅಗತ್ಯಬಿದ್ದರೆ ಪ್ರತಿ ಯುನಿಟ್‌ಗೆ 6 ರೂ ದರದಲ್ಲಿ ವಿದ್ಯುತ್ ಖರೀದಿ ಮಾಡುತ್ತೇವೆ ಎಂದು ಮಾಹಿತಿ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net