

ಸುಬ್ರಹ್ಮಣ್ಯ: ಕುಕ್ಕೆ ದೇವಳ ವಿದ್ಯಾದಾನಕ್ಕೆ ಹೆಚ್ಚಿನ ಪ್ರೋತ್ಸಾಹ ನೀಡುತ್ತಿದೆ. ಶ್ರೀ ದೇವಳದ ಆಡಳಿತದಲ್ಲಿರುವ ಎಸ್ಎಸ್ಪಿಯು ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿ ಅತ್ಯಧಿಕ ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ 7,05,000 ರೂ. ದತ್ತಿನಿಧಿಯಾಗಿ ಹಸ್ತಾಂತರಿಸಿದ್ದೇವೆ ಎಂದು ಶ್ರೀ ದೇವಳ ಕಾರ್ಯನಿರ್ವಹಣಾಧಿಕಾರಿ, ಎಸ್ಎಸ್ಪಿಯು ಕಾಲೇಜು ಕಾರ್ಯದರ್ಶಿ ಅರವಿಂದ ಅಯ್ಯಪ್ಪ ಸುತಗುಂಡಿ ಹೇಳಿದರು.
ಮಹತೋಭಾರ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನ ಆಡಳಿತದ ಎಸ್ಎಸ್ಪಿಯು ಕಾಲೇಜಿನಲ್ಲಿ ವ್ಯಾಸಂಗ ಮಾಡಿ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿ ವಿಶಿಷ್ಠ ಶ್ರೇಣಿ ಪಡೆದ ವಿದ್ಯಾರ್ಥಿಗಳಿಗೆ ಸೋಮವಾರ ದತ್ತಿನಿಧಿ ವಿತರಿಸಿ ಮಾತನಾಡಿದರು.
ಕಾಲೇಜು ಪ್ರಾಚಾರ್ಯ ಸೋಮಶೇಖರ ನಾಯಕ್ ಮಾತನಾಡಿ, 2023-24ನೇ ಸಾಲಿನಲ್ಲಿ ಸಂಸ್ಥೆ ಶೇ.100 ಫಲಿತಾಂಶ ದಾಖಲಿಸಿದೆ. ಅತ್ಯಧಿಕ ಅಂಕ ಗಳಿಸಿದ 163 ಮಂದಿಗೆ ದೇವಳದಿಂದ ದತ್ತಿನಿಧಿ ವಿತರಿಸಲಾಯಿತು.ದೇವಳದಿಂದ 228 ವಿದ್ಯಾರ್ಥಿಗಳಿಗೆ 7 ಲಕ್ಷದ 5 ಸಾವಿರ ರೂ. ದತ್ತಿನಿಧಿ ಹಸ್ತಾಂತರಿಸಲ್ಪಟ್ಟಿತು ಎಂದರು.
ಪ್ರಾಚಾರ್ಯ ಸೋಮಶೇಖರ ನಾಯಕ್ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಧಾರ್ಮಿಕ ಪರಿಷತ್ ಸದಸ್ಯ ಲಕ್ಷ್ಮೀಶ ಗಬ್ಲಡ್ಕ, ಗ್ರಾಪಂ ಅಧ್ಯಕ್ಷೆ ಸುಜಾತಾ ಕಲ್ಲಾಜೆ, ಮಾಸ್ಟರ್ ಪ್ಲಾನ್ ಸಮಿತಿ ಸದಸ್ಯ ಪವನ್ ಎಂ.ಡಿ. ಮುಖ್ಯಅತಿಥಿಗಳಾಗಿದ್ದರು. ಹಳೇ ವಿದ್ಯಾರ್ಥಿ ಸಂಘದ ಅಧ್ಯಕ್ಷ ರಾಜೇಶ್ ಎನ್.ಎಸ್., ಜಿಲ್ಲಾ ಧಾರ್ಮಿಕ ಪರಿಷತ್ ಸದಸ್ಯ ಲಕ್ಷ್ಮೀಶ ಗಬ್ಲಡ್ಕ, ಎಸ್ಡಿಎಂಸಿ ಉಪಾಧ್ಯಕ್ಷ ಗಣೇಶ್ ಪಿ, ಉಪನ್ಯಾಸಕಿ ರೇಖಾರಾಣಿ ಸೋಮಶೇಖರ್, ಮುಖ್ಯಶಿಕ್ಷಕ ನಂದಾ ಹರೀಶ್, ಹಿರಿಯ ಸಹಶಿಕ್ಷಕ ಎಂ.ಕೃಷ್ಣ ಭಟ್ ಇದ್ದರು.
ಶ್ರೀ ದೇವಳದ ವಿದ್ಯಾಸಂಸ್ಥೆಯಲ್ಲಿ ವ್ಯಾಸಂಗ ಮಾಡುವುದು ಕೇವಲ ಕಲಿಯುವಿಕೆ ಅಲ್ಲ, ಇದು ಸುಬ್ರಹ್ಮಣ್ಯನ ಪ್ರಸಾದ ರೂಪಿ ಜ್ಞಾನವಾಗಿದೆ. ದೇವರ ಪ್ರಸಾದ ಭೋಜನ ಪ್ರತಿದಿನ ವಿದ್ಯಾಸಂಸ್ಥೆಯಲ್ಲಿ ಸ್ವೀಕರಿಸಲು ದೊರಕಿರುವ ಭಾಗ್ಯ ಪವಿತ್ರವಾದುದು. ಕನಿಷ್ಠ ಶುಲ್ಕ ತೆಗೆದುಕೊಂಡು ಉಳಿದಂತೆ ದೇವಳದಿಂದ ಪ್ರತಿಯೊಂದು ವ್ಯವಸ್ಥೆ ಮಾಡಿಕೊಡುವ ಕಾರಣ ಇಲ್ಲಿ ಕಲಿಯುವುದು ದೇವರ ಪ್ರಸಾದವೇ ಆಗಿದೆ. ಲಕ್ಷ್ಮೀಶ ಗಬ್ಲಡ್ಕ, ಜಿಲ್ಲಾ ಧಾರ್ಮಿಕ ಪರಿಷತ್ ಸದಸ್ಯ