

ಕಾರವಾರ: ಎಂಡೋಸಲ್ಫಾನ್ ಕೀಟನಾಶಕವನ್ನು ಎಲ್ಲಿ ವಿಲೇವಾರಿ ಮಾಡಲಾಗಿದೆ ಎಂಬುದನ್ನು ತಕ್ಷಣ ತನಿಖೆ ನಡೆಸಿ, ಬಹಿರಂಗ ಮಾಡಬೇಕು ಎಂದು ಸ್ಕೋಡ್ ವೇಸ್ ಸಂಸ್ಥೆಯ ಕಾರ್ಯ ನಿರ್ವಾಹಕ ನಿರ್ದೇಶಕ ಡಾ.ವೆಂಕಟೇಶ ನಾಯ್ಕ ಒತ್ತಾಯಿಸಿದರು.
ಸುದ್ದಿಗೋಷ್ಠಿಯಲ್ಲಿ ಶುಕ್ರವಾರ ಮಾತನಾಡಿದ ಅವರು, ಕರ್ನಾಟಕ ಗೇರು ಅಭಿವೃದ್ಧಿ ನಿಗಮವು ದಕ್ಷಿಣ ಕನ್ನಡ, ಉಡುಪಿ ಜಿಲ್ಲೆ ಸೇರಿದಂತೆ ಉತ್ತರ ಕನ್ನಡ ಜಿಲ್ಲೆಯ ಏಳು ತಾಲೂಕುಗಳಲ್ಲಿ ಸುಮಾರು 11,794.23 ಹೆಕ್ಟೇರ್ ಗೇರು ನೆಡುತೋಪುಗಳಿಗೆ 1986 ರಿಂದ 2011 ರ ಅವಧಿಯಲ್ಲಿ ಗೇರುಬೀಜದ ಇಳುವರಿಗೆ ಅಡ್ಡಿಯಾಗುತ್ತಿದ್ದ ಟೀ ಸೊಳ್ಳೆಗಳನ್ನು ನಾಶಪಡಿಸಲು ನಿರಂತರವಾಗಿ ವರ್ಷಕ್ಕೆ ಎರಡು ಬಾರಿಯಂತೆ ಒಟ್ಟ 57.000 ಲೀಟರ್ ವಿಷಕಾರಿ ಕೀಟನಾಶಕ ಸಿಂಪಡನೆ ಮಾಡಿದೆ.
2011 ರಲ್ಲಿ ಎಂಡೋ ಸಲ್ಫಾನ್ ನಿಷೇಧವಾದ ನಂತರ ಅದನ್ನು ಅವೈಜ್ಞಾನಿಕವಾಗಿ ವಿಲೇವಾರಿ ಮಾಡಲಾಗಿದೆ ಎಂಬ ಆತಂಕಾರಿ ಮಾಹಿತಿ ಬಹಿರಂಗವಾಗಿದೆ.
ಉಡುಪಿಯ ಡಾ.ರವೀಂದ್ರನಾಥ ಶಾನಭಾಗ ಅವರು ಹಸಿರು ಪೀಠದಲ್ಲಿ ಹಾಕಿದ ದಾವೆಯನ್ನು ಆಧರಿಸಿ, ಕೀಟನಾಶಕ ನಾಶಕ ವಿಲೇವಾರಿ ಬಗ್ಗೆ ತನಿಖೆ ನಡೆಸುವಂತೆ ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿಗೆ ಸೂಚಿಸಿದೆ.
ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಯನ ಮಾಡಿ, ಹಸಿರು ನ್ಯಾಯಮಂಡಳಿಗೆ ಅಫಿಡವಿಟ್ ಸಲ್ಲಿಸಿದೆ. ಅದರಂತೆ ನಿಗಮವು 778 ಬ್ಯಾರಲ್ ಎಂಡೊಸಲ್ಫಾನ್ ಖರೀದಿಸಿದ್ದು, 20 ಬ್ಯಾರಲ್ ಮಾತ್ರ ಸಿಂಪಡನೆಯಾದ ಮಾಹಿತಿ ಇದೆ. ಉಳಿದಿದ್ದನ್ನು ಬಾವಿಯಲ್ಲಿ ಹಾಕಿ ಮುಚ್ಚಿದ್ದಾರೆ ಎಂಬ ಮಾಹಿತಿ ಇದ್ದು, ಅದು ಎಲ್ಲಾಗಿದೆ ಎಂಬುದು ಬಹಿರಂಗ ಮಾಡಬೇಕು ಎಂದು ಒತ್ತಾಯಿಸಿದರು.
ಎಂಡೋಸಲ್ಫಾನ್ ವಿಷಕಾರಿ ಕ್ರಿಮಿನಾಶಕ ಸಿಂಪಡಣೆಯಿಂದ ದಕ್ಷಿಣ ಕನ್ನಡದಲ್ಲಿ 3.607 ಜನ ಉಡುಪಿ ಜಿಲ್ಲೆಯಲ್ಲಿ 1,514 ಜನ, ಉತ್ತರ ಕನ್ನಡ ಜಿಲ್ಲೆಯಲ್ಲಿ 1,793 ಜನ, ಸೇರಿದಂತೆ ಒಟ್ಟೂ 6.914 ಜನರು ಬಹುವಿಧದ ಅಂಗವೈಕಲ್ಯಕ್ಕೆ ತುತ್ತಾಗಿದ್ದಾರೆ ಎಂದು ದಾಖಲೆಗಳು ಹೇಳುತ್ತವೆ. ಆದರೆ ಗೇರು ನೆಡುತೋಪಿನ 5 ಕಿ.ಮೀ. ಸುತ್ತಳತೆಯಲ್ಲಿ ನಡೆಸಲಾದ ಸಮೀಕ್ಷೆಯೇ ಸರಿಯಾಗಿ ಆಗದ ಕಾರಣ ಇನ್ನೂ ಸಾವಿರಾರು ಜನ ಎಂಡೋ ಬಾಧಿತರ ಪಟ್ಟಿಯಲ್ಲಿ ಸೇರಿಲ್ಲ. ಈ ಕಾರಣಕ್ಕಾಗಿ ಪಟ್ಟಿಯಲ್ಲಿ ಸೇರದ ಸಾವಿರಾರು ಎಂಡೋಸಲ್ಫಾನ್ ಬಾಧಿತರು ಸೌಲಭ್ಯದಿಂದ ವಂಚಿತರಾಗಿದ್ದಾರೆ. ಅಲ್ಲದೇ ಈಗಾಗಲೇ ಸರಿಯಾದ ಸಮಯದಲ್ಲಿ ಚಿಕಿತ್ಸೆ ಹಾಗೂ ಸೌಲಭ್ಯ ಸಿಗದೇ ನೂರಾರು ಜನ ಸಾವನ್ನಪ್ಪಿದ್ದಾರೆ.
ಈ ಕಾರಣಕ್ಕಾಗಿ ಮಾನ್ಯ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಜಿಲ್ಲಾಧಿಕಾರಿಗಳು ಕನಿಷ್ಠ 03 ತಿಂಗಳಿಗೊಮ್ಮೆ ಜಿಲ್ಲಾ ಎಂಡೋಸಲ್ಫಾನ್ ಬಾಧಿತರ ಕುಂದುಕೊರತೆಗಳ ಸಮಿತಿ ಸಭೆ ನಡೆಸಬೇಕು.
ಉತ್ತರ ಕನ್ನಡ ಜಿಲ್ಲೆಯಲ್ಲಿ ಗೇರು ಅಭಿವೃದ್ಧಿ ನಿಗಮವು ಬಳಕೆಯಾಗದೇ ಇರುವ ಎಂಡೋಸಲ್ಫಾನ್ ಹಾಗೂ ಇತರ ಕ್ರಿಮಿನಾಶಕಗಳನ್ನು ಯಾವ ರೀತಿ ವಿಲೇವಾರಿ ಮಾಡಿದ್ದಾರೆ ಹಾಗೂ ಎಲ್ಲೆಲ್ಲಿ ಹೂತಿದ್ದಾರೆ ಎಂಬ ಬಗ್ಗೆ ತನಿಖೆಗೆ ಆದೇಶಿಸಬೇಕು.
ಉತ್ತರ ಕನ್ನಡ ಜಿಲ್ಲೆಯ ಭಟ್ಕಳದಲ್ಲಿ ನಡೆಸಿದಂತೆ ಉಳಿದ ಐದೂ ತಾಲೂಕುಗಳಲ್ಲಿಯೂ ಎಂಡೋಸಲ್ಫಾನ್ ಬಾಧಿತರ ಮರು ಸಮೀಕ್ಷೆಗೆ ಕ್ರಮ ಕೈಗೊಳ್ಳಬೇಕು.
ತಾಲೂಕುವಾರು ಎಂಡೋಸಲ್ಫಾನ್ ಬಾಧಿತರ ಆರ್ಥಿಕ, ಸಾಮಾಜಿಕ ಸಬಲೀಕರಣಕ್ಕಾಗಿ ಇಲಾಖಾವಾರು ಗುರಿಯನ್ನು ನಿಗದಿಪಡಿಸಬೇಕು.
ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳಲ್ಲಿ ಎಂಡೋಸಲ್ಫಾನ್ ಬಾಧಿತರ ಚಿಕಿತ್ಸೆಗಾಗಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗಳೊಂದಿಗೆ ಒಪ್ಪಂದ ಮಾಡಿಕೊಂಡಂತೆ ಉತ್ತರ ಕನ್ನಡ ಜಿಲ್ಲೆಯಲ್ಲಿಯೂ ಎಂಡೋಸಲ್ಫಾನ್ ಬಾಧಿತರಿಗಾಗಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯನ್ನು ಸ್ಥಾಪಿಸಬೇಕು ಅಥವಾ ಹಿಂದೆ ಇದ್ದ ಸುಸಜ್ಜಿತ ಫಿಸಿಯೋಥೆರಪಿ ಸಂಚಾರಿ ಆಸ್ಪತ್ರೆಯನ್ನು ಪುನರ್ ಜಾರಿಗೆ ತರಬೇಕು.
ಎಂಡೋಸಲ್ಫಾನ್ ಬಾಧಿತರನ್ನು ನೋಡಿಕೊಳ್ಳುತ್ತಿರುವ ಮನೆಯ ಸದಸ್ಯರಿಗೆ ಕೌಶಲ್ಯ ಅಭಿವೃದ್ಧಿ ತರಬೇತಿಯನ್ನು ನೀಡಿ ಸ್ವಯಂ ಉದ್ಯೋಗ ಹೊಂದಲು ಕಾರ್ಯಕ್ರಮ ರೂಪಿಸಬೇಕು.
ರಾಜ್ಯ ಉಚ್ಚ ನ್ಯಾಯಾಲಯ ನೀಡಿದ ಆದೇಶದಂತೆ ಎಂಡೋಸಲ್ಫಾನ್ ಬಾಧಿತರ ಸಮಗ್ರ ಅಭಿವೃದ್ಧಿಗೆ ಜಿಲ್ಲಾ ಎಂಡೋಸಲ್ಫಾನ್ ಬಾಧಿತರ ಕುಂದುಕೊರತೆಗಳ ಸಮಿತಿಯಲ್ಲಿಯೇ ಯೋಜನೆಗಳನ್ನು ಸಿದ್ಧಪಡಿಸಿ ಅನುಷ್ಠಾನಗೊಳಿಸಬೇಕು ಎಂದರು.
ತಾಲೂಕುವಾರು ಎಂಡೋಸಲ್ಫಾನ್ ಬಾಧಿತರ ಕುಂದುಕೊರತೆಗಳ ಸಮಿತಿಯನ್ನು ರಚಿಸಬೇಕು.ಜಿಲ್ಲೆಯ ಎಂಡೋ ಬಾಧಿತರಿಗಾಗಿ ಸಹಾಯವಾಣಿ ಸ್ಥಾಪಿಸಬೇಕು.
ಎಂಡೋಸಲ್ಫಾನ್ ಪೀಡಿತ ಪ್ರದೇಶಗಳಲ್ಲಿ ಜನನವಾಗುತ್ತಿರುವ ಮಕ್ಕಳ ಬಗ್ಗೆ ವಿಶೇಷ ಕಾಳಜಿ ತಂಡವನ್ನು ರಚಿಸಬೇಕು.
ಈಗಾಗಲೇ ಸ್ಕೊಡ್‌ವೆಸ್ ಸಂಸ್ಥೆಯಿಂದ ಸಲ್ಲಿಸಿದ ಅಧ್ಯಯನ ವರದಿಗಳಲ್ಲಿ ಹೇಳಲಾದ ಇತರ ಚಟುವಟಿಕೆಗಳನ್ನು ಅನುಷ್ಠಾನಕ್ಕೆ ತರಲು ಜಿಲ್ಲಾ ಎಂಡೋಸಲ್ಫಾನ್ ಬಾಧಿತರ ಕುಂದುಕೊರತೆಗಳ ಸಮಿತಿಗೆ ನಿರ್ದೇಶನ ನೀಡಬೇಕು.
ಎಂಡೋ ಬಾಧಿತರ ಹಿತರಕ್ಷಣಾ ವೇದಿಕೆ ರಚನೆಗೆ ತೀರ್ಮಾನ: ಈ ಎಲ್ಲಾ ಒತ್ತಾಯಗಳೊಂದಿಗೆ ಎಂಡೋ ಬಾಧಿತರ ಧ್ವನಿಯನ್ನು ಗಟ್ಟಿಗೊಳಿಸಲು ಆರೂ ತಾಲೂಕುಗಳ ಎಂಡೋಸಲ್ಫಾನ್ ಬಾಧಿತರ ಕುಟುಂಬದ ಸದಸ್ಯರೊಂದಿಗೆ ಚರ್ಚಿಸಿ ಉತ್ತರ ಕನ್ನಡ ಜಿಲ್ಲಾ ಎಂಡೋಸಲ್ಫಾನ್ ಬಾಧಿತರ ಹಿತರಕ್ಷಣಾ ವೇದಿಕೆ ರಚಿಸಲು ತೀರ್ಮಾನಿಸಿರುತ್ತೇವೆ ಎಂದರು.
ಸುದ್ದಿಗೋಷ್ಠಿಯಲ್ಲಿ ಸ್ಕೊಡ್ ವೆಸ್ ಸಂಸ್ಥೆಯ ಎಂಡೋಸಲ್ಫಾನ್ ಕಾರ್ಯಕ್ರಮಗಳ ಮೇಲ್ವಿಚಾರಕಿ ಮಾಲತಿ ಸುರೇಶ ಕರ್ಕಿ, ಯೋಜನಾ ವಿಭಾಗದ ಮುಖ್ಯಸ್ಥೆ ವರ್ಷಾ ಪ್ರಭಾಕರ ಹೆಗಡೆ, ಯೋಜನಾ ಸಂಯೋಜಕ, ಪ್ರಜ್ಞಾಕುಮಾರ ಹೆಗ್ಗಡೆ ಸುದ್ದಿಗೋಷ್ಠಿಯಲ್ಲಿದ್ದರು.
.