

ಕಲಘಟಗಿ: ತಾಲೂಕಿನ ಬೈಚವಾಡ ಗ್ರಾಮದಲ್ಲಿ ಅರಣ್ಯ ಇಲಾಖೆಗೆ ಸಂಬಂಧಿಸಿದ ಭೂಮಿ ಅತಿಕ್ರಮಣಗೊಂಡಿದ್ದ ಹಿನ್ನೆಲೆ ಪೊಲೀಸ್ ಬಿಗಿ ಭದ್ರತೆಯಲ್ಲಿ ಭಾನುವಾರ ತೆರವುಗೊಳಿಸಲಾಯಿತು.
ಬೈಚವಾಡ ಗ್ರಾಮದ ಸರ್ವೆ ನಂಬರ 84ಕ್ಕೆ ಸಂಬಂಧಿಸಿದ 1772 ಹೆಕ್ಟೇರ್ ಒಟ್ಟು ಅರಣ್ಯ ಭೂಮಿಯಲ್ಲಿ 50 ಹೆಕ್ಟೇರ್ ಭೂಮಿ ಒತ್ತುವರಿಯಾಗಿತ್ತು. ಭಾನುವಾರ ಅರಣ್ಯ ಇಲಾಖೆ ಅಧಿಕಾರಿಗಳು ಪೊಲೀಸ್ ಭದ್ರತೆಯೊಂದಿಗೆ ಗ್ರಾಮಕ್ಕೆ ಆಗಮಿಸಿ ಒತ್ತುವರಿ ಭೂಮಿ ತೆರವು ಕಾರ್ಯ ಹಾಗೂ ಸಸಿ ನೆಡಲು ಗುಂಡಿ ತೆಗೆಸಿದರು. ಎರಡು ಜೆಸಿಬಿ ಸೇರಿ 50ಕ್ಕೂ ಹೆಚ್ಚು ಸಿಬ್ಬಂದಿ ಕಾರ್ಯಾಚರಣೆಯಲ್ಲಿದ್ದರು.
ಅರಣ್ಯ ಭೂಮಿ ಒತ್ತುವರಿ ಸಂಬಂಧಿಸಿದಂತೆ ಹಲವಾರು ಬಾರಿ ಸಂಬಂಧಿಸಿದ ರೈತರಿಗೆ ತಿಳಿಸ ಲಾಗಿತ್ತು. ಆದರೂ ರೈತರಿಗೆ ನೀಡಿದ ಭೂಮಿ ಹೊರತಾಗಿಯೂ ಹೆಚ್ಚುವರಿಯಾಗಿ ಅರಣ್ಯ ಪ್ರದೇಶದಲ್ಲಿ ಉಳುಮೆ ಮಾಡಲು ಮುಂದಾಗಿದ್ದರು. ಹೀಗಾಗಿ ಅರಣ್ಯಭೂಮಿಯನ್ನು ವಶಕ್ಕೆ ಪಡೆದು ಗುಂಡಿ ತೋಡಿ ಸಸಿ ನೆಡುವ ಕಾರ್ಯಕ್ಕೆ ಇಲಾಖೆ ಮುಂದಾಗಿದೆ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ತಿಳಿಸಿದರು.
ವಿರೋಧ-ಸಂಧಾನ: ವಿವಾದಿತ ಜಮೀನಿಗೆ ಸಂಬಂಧಿಸಿದಂತೆ ಶನಿವಾರ ರೈತರು ಗ್ರಾಮದಲ್ಲಿ ತೆರವು ಕಾರ್ಯಾಚರಣೆಗೆ ವಿರೋಧ ವ್ಯಕ್ತಪಡಿಸಿದರು. ಕಲಘಟಗಿ ಸಿಪಿಐ ಶ್ರೀಶೈಲ ಕೌಜಲಗಿ ಅವರ ನೇತೃತ್ವದಲ್ಲಿ ರೈತರು ಮತ್ತು ಅರಣ್ಯ ಇಲಾಖೆ ಅಧಿಕಾರಿಗಳ ಸಂಧಾನ ಸಭೆ ನಡೆದಿತ್ತು. ಸಿಪಿಐ ಕೌಜಲಗಿ ಅವರು ಕಾರ್ಯಾಚರಣೆಗೆ ಅಡ್ಡಿಪಡಿಸದೇ ಸಹಕಾರ ನೀಡುವಂತೆ ರೈತರ ಮನವೊಲಿಸಿದ್ದರಿಂದ ಭಾನುವಾರ ನಡೆದ ಒತ್ತುವರಿ ಕಾರ್ಯಾಚರಣೆಗೆ ಯಾವುದೇ ಪ್ರತಿರೋಧ ವ್ಯಕ್ತವಾಗಿರಲಿಲ್ಲ.