

StartFragment
ಶ್ರೀನಗರ: ಜಮ್ಮು-ಕಾಶ್ಮೀರದ ಕಿಶ್ತ್ವಾರ್ ಜಿಲ್ಲೆಯ ಪರ್ವತ ಪ್ರದೇಶದ ಚತ್ರುವಿನ ಕಲ್ಬನ್ ಅರಣ್ಯ ಪ್ರದೇಶದಲ್ಲಿ ಇಂದು(ನ. 05) ಮುಂಜಾನೆ ಉಗ್ರರು ಮತ್ತು ಭದ್ರತಾ ಪಡೆಗಳ ನಡುವೆ ಗುಂಡಿನ ಚಕಮಕಿ(Encounter) ಆರಂಭವಾಗಿದೆ ಎಂದು ಸೇನೆ ಮಾಹಿತಿ ನೀಡಿದೆ.
ಕಿಶ್ತ್ವಾರ್‌ನ ಕಲ್ಬನ್, ಚತ್ರು ದಟ್ಟ ಅರಣ್ಯ ಪ್ರದೇಶದಲ್ಲಿ 2-3 ಉಗ್ರರ ಗುಂಪು ಇರುವ ಬಗ್ಗೆ ಖಚಿತ ಬಳಿಕ ಪೊಲೀಸ್ ಮತ್ತು ಸೇನೆಯ ಜಂಟಿ ತುಕಡಿ ಶೋಧ ಕಾರ್ಯಾಚರಣೆಯನ್ನು ಆರಂಭಿಸಿದೆ ಎನ್ನಲಾಗಿದೆ.
ಈ ಕುರಿತು ಮಾತನಾಡಿರುವ ಭದ್ರತಾ ಪಡೆಯ ಅಧಿಕಾರಿಗಳು, ಉಗ್ರರ ವಿರುದ್ಧದ ಶೋಧ ಕಾರ್ಯಾಚರಣೆ ನಡೆಯುತ್ತಿರುವಾಗ, ದಟ್ಟ ಅರಣ್ಯ ಪ್ರದೇಶದಲ್ಲಿ ಅಡಗಿಕೊಂಡಿದ್ದ ಉಗ್ರಗಾಮಿಗಳಿಂದ ಭದ್ರತಾ ಸಿಬ್ಬಂದಿ ಗುಂಡಿನ ದಾಳಿ ನಡೆಯಿತು. ಅದಕ್ಕೆ ಪ್ರತಿಯಾಗಿ ಸೈನಿಕರು ಪ್ರತಿದಾಳಿ ನಡೆಸಿದರು. ಇಬ್ಬರ ನಡುವೆ ಸ್ವಲ್ಪ ಸಮಯದವರೆಗೆ ಗುಂಡಿನ ಚಕಮಕಿ ನಡೆಯಿತು ಎಂದು ಹೇಳಿದ್ದಾರೆ.
ಇನ್ನೂ ಎಕ್ಸ್ನಲ್ಲಿ ಪೋಸ್ಟ್ ಹಾಕಿರುವ ಭಾರತೀಯ ಸೇನೆ, ಖಚಿತ ಗುಪ್ತಚರ ಮಾಹಿತಿ ಮೇರೆಗೆ ಜಮ್ಮು-ಕಾಶ್ಮೀರ ಪೊಲೀಸರ ಜೊತೆಗೂಡಿ ಉಗ್ರರ ವಿರುದ್ಧ ಕಾರ್ಯಾಚರಣೆ ನಡೆಸಿದ್ದು, ಇಂದು ಮುಂಜಾನೆ ವೈಟ್‌ನೈಟ್‌ಕಾರ್ಪ್ಸ್ ಪಡೆಗಳು ಚತ್ರುವಿನ ಸಾಮಾನ್ಯ ಪ್ರದೇಶದಲ್ಲಿ ಉಗ್ರರು ಇರುವುದನ್ನು ಖಚಿತ ಪಡಿಸಿದ್ದು, ಅವರೊಂದಿಗೆ ಗುಂಡಿನ ಚಕಮಕಿ ನಡೆದಿದೆ. ಇನ್ನೂ ಕಾರ್ಯಾಚರಣೆ ಪ್ರಗತಿಯಲ್ಲಿದೆ ಎಂದು ತಿಳಿಸಿದೆ. (ಏಜೆನ್ಸೀಸ್)