

ವಾಷಿಂಗ್ಟನ್: ಕರೊನಾ ಸೋಂಕಿನ ಸಂದರ್ಭದಲ್ಲಿ ಹೆಚ್ಚಾಗಿರುವ ನಿರುದ್ಯೋಗ ತಗ್ಗಿಸಲು ಮತ್ತು ಸ್ಥಳೀಯರಿಗೆ ಆದ್ಯತೆ ದೊರೆಯುವಂತೆ ಮಾಡಲು ಎಚ್- 1ಬಿ ಸೇರಿ ಉದ್ಯೋಗಾಧಾರಿತ ಹೊಸ ವೀಸಾಗಳನ್ನು ತಾತ್ಕಾಲಿಕವಾಗಿ ನಿಷೇಧಿಸುವ ಕುರಿತು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆಡಳಿತ ಸಿದ್ಧತೆ ನಡೆಸುತ್ತಿದೆ.
ಮಾಹಿತಿ ತಂತ್ರಜ್ಞಾನ ವಲಯದ ನಿಪುಣ ನೌಕರರಿಗೆ ನೀಡುವ ಎಚ್-1ಬಿ ವೀಸಾ, ನಿಯಮಿತ ಅವಧಿಗೆ ಬರುವ ವಲಸೆ ಕಾರ್ವಿುಕರಿಗೆ ವಿತರಿಸುವ ಎಚ್-2ಬಿ ವೀಸಾ, ವಿದ್ಯಾರ್ಥಿ ವೀಸಾ ಮತ್ತು ಕಂಪನಿಗಳ ಉದ್ಯೋಗ ದೃಢೀಕರಿಸುವ ಆಧಾರದಲ್ಲಿ ನೀಡಲಾಗುವ ವೀಸಾಗಳು ತಾತ್ಕಾಲಿಕವಾಗಿ ನಿಷೇಧಕ್ಕೆ ಒಳಗಾಗುವ ಸಾಧ್ಯತೆ ಇದೆ ಎಂದು ಶ್ವೇತಭವನದ ಮೂಲಗಳು ತಿಳಿಸಿವೆ.
ಕಳೆದೆರಡು ತಿಂಗಳಲ್ಲಿ ಕರೊನಾ ಕಾರಣ 3.30 ಕೋಟಿ ಅಮೆರಿಕನ್ನರು ಉದ್ಯೋಗ ಕಳೆದುಕೊಂಡಿದ್ದಾರೆ. ಆದ್ದರಿಂದ ಎಷ್ಟು ಪ್ರಮಾಣದಲ್ಲಿ ಉದ್ಯೋಗಾಧಾರಿತ ವೀಸಾಗಳ ವಿತರಣೆಯನ್ನು ನಿಲ್ಲಿಸಬೇಕು ಎನ್ನುವ ಕುರಿತು ವಲಸೆ ನೀತಿ ಕುರಿತ ಸಲಹೆಗಾರರು ಯೋಜನೆ ರೂಪಿಸುತ್ತಿದ್ದಾರೆ. ಈ ಕುರಿತ ಆದೇಶವು ಈ ತಿಂಗಳಲ್ಲೇ ಹೊರಬೀಳುವ ನಿರೀಕ್ಷೆ ಇದೆ ಎಂದೂ ಹೇಳಲಾಗಿದೆ. ಎಚ್-1ಬಿ ವೀಸಾ ಪಡೆದ ಐದು ಲಕ್ಷಕ್ಕೂ ಹೆಚ್ಚು ನೌಕರರು ಅಮೆರಿಕದಲ್ಲಿ ಇದ್ದಾರೆ. ಭಾರತ ಮತ್ತು ಚೀನಾದ ನಿಪುಣ ಉದ್ಯೋಗಿಗಳೇ ಈ ವೀಸಾವನ್ನು ಹೆಚ್ಚಾಗಿ ಪಡೆದಿದ್ದಾರೆ. ಕಾರ್ವಿುಕರು ಮತ್ತು ಅಮೆರಿಕ ನಾಗರಿಕರ ನೆಂಟರಿಷ್ಟರಿಗೆ ನೀಡಲಾಗುವ 60 ದಿನದ ವೀಸಾವನ್ನು ತಡೆಹಿಡಿಯುವ ಆದೇಶಕ್ಕೆ ಅಧ್ಯಕ್ಷ ಟ್ರಂಪ್ ಕಳೆದು ತಿಂಗಳು ಸಹಿ ಮಾಡಿದ್ದಾರೆ.
ಇದನ್ನೂ ಓದಿ: ಆಪರೇಷನ್ ಜ್ಯಾಕ್ಬೂಟ್ ಭಾರಿ ಹಿನ್ನಡೆ: ಉಗ್ರನ ಹೇಳಿಕೆ
ಡಬ್ಲ್ಯೂಎಚ್ಒ ವಿರುದ್ಧ ಮತ್ತೆ ಟ್ರಂಪ್ ಕಿಡಿ: ಕರೊನಾ ವಿಷಯದಲ್ಲಿ ಚೀನಾದ ಕೈಗೊಂಬೆಯಾಗಿರುವ ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯೂಎಚ್ಒ) ವಿರುದ್ಧ ಶೀಘ್ರದಲ್ಲೇ ನಿರ್ಧಾರ ಕೈಗೊಳ್ಳಲಾಗುವುದು ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತೊಮ್ಮೆ ಗುಡುಗಿದ್ದಾರೆ.
‘ಡಬ್ಲ್ಯೂಎಚ್ಒ ಉದ್ದೇಶಪೂರ್ವಕವಾಗಿ ಈ ರೀತಿ ಮಾಡಿದೆ ಎನ್ನಲಾರೆ. ಆದರೆ, ಅದರ ಅದಕ್ಷತೆಯ ಲೋಪ ಇದರಲ್ಲಿ ಎದ್ದು ಕಾಣುತ್ತದೆ. ಚೀನಾದಲ್ಲಿನ ಸೋಂಕಿನ ಬಗ್ಗೆ ಡಬ್ಲ್ಯೂಎಚ್ಒಗೆ ಬಹುಶಃ ಮಾಹಿತಿ ಇದ್ದಿರಬಹುದು. ಆದರೆ, ಅದನ್ನು ಜಗತ್ತಿಗೆ ತಿಳಿಸುವಲ್ಲಿ ಎಡವಿದೆ’ ಎಂದು ಟ್ರಂಪ್ ಹೇಳಿದ್ದಾರೆ.
ಮಹಾಮಾರಿ ಕರೊನಾವನ್ನು ಜಗತ್ತಿಗೆ ಹಬ್ಬಿಸಿದ ಚೀನಾ ಪರವಾಗಿ ಡಬ್ಲ್ಯೂಎಚ್ಒ ನಿಂತಿದೆ. ಸೋಂಕಿನ ತೀವ್ರತೆಯನ್ನು ಚೀನಾದ ಆಣತಿ ಮೇಲೆ ಮರೆಮಾಚಿತ್ತು ಎಂದು ಮೊದಲಿನಿಂದಲೂ ಕಿಡಿಕಾರುತ್ತಿರುವ ಟ್ರಂಪ್, ಡಬ್ಲ್ಯೂಎಚ್ಒಗೆ ನೀಡುತ್ತಿದ್ದ ಅನುದಾನವನ್ನು ಇತ್ತೀಚೆಗೆ ತಡೆಹಿಡಿದಿದ್ದಾರೆ.
ಇವಾಂಕಾ ಆಪ್ತ ಸಹಾಯಕಿಗೆ ಕರೊನಾ: ಡೊನಾಲ್ಡ್ ಟ್ರಂಪ್ ಪುತ್ರಿ ಇವಾಂಕಾ ಟ್ರಂಪ್ರ ಆಪ್ತ ಸಹಾಯಕಿಯೊಬ್ಬರಿಗೆ ಕೋವಿಡ್-19 ದೃಢಪಟ್ಟಿದೆ. ಅಧ್ಯಕ್ಷ ಟ್ರಂಪ್ರ ಸಲಹೆಗಾರ್ತಿಯೂ ಆಗಿರುವ ಇವಾಂಕಾರ ಕಚೇರಿಯಲ್ಲಿ ಒಟ್ಟು ಮೂವರು ಕರೊನಾ ಸೋಂಕಿಗೆ ತುತ್ತಾಗಿದ್ದಾರೆ. ಈಗ ಸೋಂಕಿಗೆ ಒಳಗಾಗಿರುವ ಸಹಾಯಕಿ ಎರಡು ತಿಂಗಳಿಂದ ಮನೆಯಿಂದಲೇ ಕಾರ್ಯ ನಿರ್ವಹಿಸುತ್ತಾರೆ. ಇವಾಂಕಾರ ಜತೆ ಅವರನ್ನು ಕಂಡಿಲ್ಲ ಎಂದು ಶ್ವೇತಭವನದ ಮೂಲಗಳು ತಿಳಿಸಿವೆ. ಈ ಮಧ್ಯೆ, ಇವಾಂಕಾ ಮತ್ತು ಪತಿ ಜೆರೆಡ್ ಕುಶ್ನರ್ ಶುಕ್ರವಾರ ತಪಾಸಣೆಗೆ ಒಳಗಾಗಿದ್ದು, ಇಬ್ಬರ ವರದಿ ನೆಗಟಿವ್ ಬಂದಿದೆ.