ವಿಜಯಪುರ: ನೀವೆಲ್ಲರೂ ನಿಮ್ಮಲ್ಲಿರುವ ಕೌಶಲಗಳನ್ನು ಈಗಿನಿಂದಲೇ ಗುರುತಿಸಿಕೊಂಡು ಅದನ್ನು ಅಭಿವೃದ್ಧಿಪಡಿಸುವತ್ತ ಚಿತ್ತ ವಹಿಸಿ ಗುರಿ ಸಾಧಿಸಬೇಕು ಎಂದು ಶಿವಮೊಗ್ಗದ ಹಿರಿಯ ಸಾಹಿತಿ ಸವಿತಾ ನಾಗಭೂಷಣ ಹೇಳಿದರು.
ನಗರದ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯದ ವಿದ್ಯಾರ್ಥಿನಿ ಕ್ಷೇಮಪಾಲನ ನಿರ್ದೇಶನಾಲಯ, ಕ್ರೀಡಾ ನಿರ್ದೇಶನಾಲಯ ಹಾಗೂ ವಸತಿ ನಿಲಯಗಳ ಸಹಯೋಗದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ವಾರ್ಷಿಕ ದಿನಾಚರಣೆ 2022-23 ಸಮಾರಂಭದಲ್ಲಿ ಅವರು ಮಾತನಾಡಿದರು.
ನಾವು ಯಾವುದೇ ಒಂದರಲ್ಲಿ ಆಸಕ್ತಿ ಹೊಂದಿದ್ದರೂ ಆ ವಿಷಯದಲ್ಲಿ ನಾವು ನಮ್ಮ ಸಂಪೂರ್ಣ ಶ್ರಮವನ್ನು ಕೊಡಬೇಕು. ಅಂದಾಗ ಮಾತ್ರ ನಾವು ಯಶಸ್ಸು ಸಾಧಿಸಲು ಸಾಧ್ಯ ಎಂದರು.
ಹೀಗೆ ನಾವು ಸತತವಾಗಿ ನಮ್ಮ ಕೌಶಲವನ್ನು ಬೆನ್ನು ಹತ್ತಿದಾಗ ಮಾತ್ರ ನಾವು ನಮ್ಮ ಗುರಿಯನ್ನು ಮುಟ್ಟಲು ಸಾಧ್ಯ.
ಸೋಲು-ಗೆಲುವಿನ ನಡುವಿನ ಅಂತರ ಬಹಳ ಕಡಿಮೆ ಹೀಗಾಗಿ ಪ್ರಯತ್ನದಿಂದ ನಾವು ಏನನ್ನು ಬೇಕಾದರೂ ಸಾಧಿಸಬಹುದು ಎಂದು ವಿದ್ಯಾರ್ಥಿನಿಯರಿಗೆ ಕಿವಿಮಾತು ಹೇಳಿದರು.
ಉತ್ತರ ಕರ್ನಾಟಕದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳ ಅಪರ ನಿರ್ದೇಶಕರ ಕಚೇರಿಯ ಉಪನಿರ್ದೇಶಕಿ ಡಾ. ಚನ್ನಮ್ಮ ಕಟ್ಟಿ ಮಾತನಾಡಿ, ಇತ್ತೀಚಿನ ಕಾಲದಲ್ಲಿ ಹೆಣ್ಣು ಮಕ್ಕಳು ಆರೋಗ್ಯದ ಬಗ್ಗೆ ಬಹಳಷ್ಟು ನಿರ್ಲಕ್ಷೃ ವಹಿಸುತ್ತಿರುವುದು ಒಳ್ಳೆಯದಲ್ಲ.
ನಮಗೆಲ್ಲ ಈಗ ಸಾಕಷ್ಟು ವಿಷಯಗಳು ಪ್ರತಿದಿನ ಮಾಧ್ಯಮಗಳ ಮೂಲಕ ಮಾಹಿತಿಯನ್ನು ಪಡೆದುಕೊಳ್ಳಬಹುದು.
ಹೀಗಾಗಿ ಆರೋಗ್ಯದ ಬಗ್ಗೆ ನಾವು ಕಾಳಜಿವಹಿಸಿಕೊಳ್ಳುವ ಮೂಲಕ ಸದೃಢವಾಗಿರಬೇಕು. ನಾವು ಪ್ರತಿ ದಿನವೂ ಕೆಲಸ ಮಾಡುತ್ತಾ ಲವಲವಿಕೆಯಿಂದ ಇರಬೇಕು. ಅಂದಾಗ ಮಾತ್ರ ನಾವು ನಮ್ಮ ಜೀವನವನ್ನು ಅತ್ಯುತ್ತಮವಾಗಿ ಕಳೆಯಲು ಸಾಧ್ಯವಾಗುತ್ತದೆ ಎಂದರು.
ವಿವಿಯ ಕುಲಪತಿ ಪ್ರೊ. ಬಿ.ಕೆ. ತುಳಸಿಮಾಲ ಮಾತನಾಡಿ, ಸಮಾಜದಲ್ಲಿ ಶಿಕ್ಷಣಕ್ಕಿರುವ ಶಕ್ತಿ ಬೇರೆಯಾವುದಕ್ಕೂ ಇಲ್ಲ.
ಸಮಾಜವನ್ನು ಸುಧಾರಿಸಬಲ್ಲ ಶಕ್ತಿಯನ್ನು ಮತ್ತು ಅದನ್ನು ಅಭಿವೃದ್ಧಿಯತ್ತ ಸಾಗಿಸಲು ಶಿಕ್ಷಣ ಪ್ರಮುಖವಾದ ಸ್ಥಾನವನ್ನು ವಹಿಸಿದ್ದು ವಿದಾರ್ಥಿನಿಯರು ಶೈಕ್ಷಣಿಕ ಜೀವನದಲ್ಲಿ ಯಶಸ್ಸು ಸಾಧಿಸಬೇಕು ಎಂದು ತಿಳಿಸಿದರು.
ಮಹಿಳಾ ವಿವಿಯ ಕುಲಸಚಿವ ಶಂಕರಗೌಡ ಸೋಮನಾಳ, ಮೌಲ್ಯಮಾಪನ ಕುಲಸಚಿವ ಎಚ್.ಎಂ. ಚಂದ್ರಶೇಖರ ಇತರರು ಇದ್ದರು.
ಸೌಮ್ಯ ಸಾಂಸ್ಕೃತಿಕ ವರದಿ ವಾಚನ ಮಾಡಿದರು. ಪ್ರೊ. ಸಕ್ಪಾಲ ಹೂವಣ್ಣ ಕ್ರೀಡಾ ವರದಿ ವಾಚನ ಮಾಡಿದರು. ಪ್ರೊ. ವಿಜಯಾ ಕೋರಿಶೆಟ್ಟಿ ಸ್ವಾಗತಿಸಿದರು. ಡಾ. ಜ್ಯೋತಿ ಉಪಾಧ್ಯೆ ಪರಿಚಯಿಸಿದರು. ಡಾ. ಅಶ್ವಿನಿ ಕೆ.ಎನ್., ನಿರೂಪಿಸಿದರು.